ವಿಜಯಪುರ: ಪ್ರಸಿದ್ಧ ಭರತ ನಾಟ್ಯ ಕಲಾವಿದರಾದ ವಿಜಯಪುರದ ಸ್ವಯಂಭೋ ಆರ್ಟ್ ಫೌಂಡೇಷನ್‌ನ ಸಂಸ್ಥಾಪಕರಾದ ದಿವ್ಯಾ ಭೀಸೆ ಮತ್ತು ದೀಕ್ಷಾ ಭೀಸೆ ಸಹೋದರಿಯರ ರಂಗ ಪ್ರವೇಶ ಕಾರ್ಯಕ್ರಮ ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಮೇ 22ರಂದು ಸಂಜೆ 5ಕ್ಕೆ ನಡೆಯಲಿದೆ.
ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ, ಗಣೇಶಸ್ತುತಿ, ವರ್ಣಂ, ದೇವಿಕೃತಿ, ಜತಿಸ್ವರ, ವಾತ್ಸಲ್ಯ, ಪಾದಂ, ಅಭಂಗ, ತಿಲ್ಲಾನ ನೃತ್ಯ ಪ್ರಕಾರವನ್ನು ಭರತ ನಾಟ್ಯ ಕಲಾವಿದೆಯರಾದ ದೀಪಾ, ದೀಕ್ಷಾ ಪ್ರಸ್ತುತ ಪಡಿಸಲಿದ್ದಾರೆ.
ವಿದ್ವಾನ್ ಶುಭದಾ ದೇಶಪಾಂಡೆ ಅವರು ನಟ್ಟುವಾಂಗತ ಮತ್ತು ನೃತ್ಯ ಸಂಯೋಜನೆ ಮಾಡಲಿದ್ದಾರೆ. ವಿದ್ವಾನ್ ಸ್ವರಾಗ್ ಮಹೇ ಗಾಯನ, ವಿದ್ವಾನ್ ಸುರೇಶಬಾಬು ಮೃದಂಗ, ವಿದ್ವಾನ್ ನಿತೀಶ್ ಕಂಕಲ್ ಕೊಳಲು ವಾದನ, ವಿನಯ್ ಕುಲಕರ್ಣಿ ತಬಲಾ ಸಾಥ್ ನೀಡಲಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಸಾಹಿತಿ ಡಾ.ಭುವನೇಶ್ವರಿ ಮೇಲಿನಮಠ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಹೋದರಿಯರು ಈಗಾಗಲೇ ದೇಶದಾದ್ಯಂತ ಭರತನಾಟ್ಯ ಪ್ರದರ್ಶನ ನೀಡಿ ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ. ಹಂಪಿ ಉತ್ಸವ,ಮ ಮೈಸೂರು ದಸರಾ, ಚಾಲುಕ್ಯ ಉತ್ಸವ, ಮಲೆನಾಡು ಉತ್ಸವ, ಹೊನ್ನಾವರ ಉತ್ಸವ, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರದರ್ಶನ ನೀಡಿದ್ದಾರೆ. ವಿಜಯಪುರ ನಗರದಲ್ಲಿ ಸ್ವಯಂಭೋ ಆರ್ಟ್ ಫೌಂಡೇಶನ್ ಸ್ಥಾಪಿಸಿ ನೂರಾರು ಜನರಿಗೆ ಭರತ ನಾಟ್ಯ ಕಲಿಸುತ್ತಿದ್ದಾರೆ. ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಸಹೋದರಿಯರಿಗೆ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.