ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ದೀಪಾವಳಿ ಅಂಗವಾಗಿ ನರಕ ಚತುರ್ದಶಿ ಮತ್ತು ಲಕ್ಷ್ಮಿ ಪೂಜೆಯನ್ನು ಭಕ್ತಿ, ಭಾವದಿಂದ ಆಚರಿಸಲಾಯಿತು.
ವ್ಯಾಪಾರಸ್ಥರು ತಮ್ಮ ಅಂಗಡಿ, ಮಳಿಗೆ, ಮಾಲ್, ಕಾಂಪ್ಲೆಕ್ಸ್, ಆಸ್ಪತ್ರೆ, ಬ್ಯಾಂಕು, ಕಚೇರಿಗಳನ್ನು ತಳಿರು, ತೋರಣ, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಿ, ಸಂಜೆ ಗೋದೂಳಿ ಮುಹೂರ್ತದಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿದರು. ಸಂಜೆಯಿಂದ ತಡರಾತ್ರಿ ವರೆಗೂ ಆಗಸದಲ್ಲಿ ಪಟಾಕಿ, ಬಾಣ ಬಿರುಸುಗಳ ಸದ್ದು ಕೇಳಿಬಂದಿತು.
ಅಂಗಡಿ, ಮನೆಗಳ ಎದುರು ಮಹಿಳೆಯರು ಚಿತ್ತಾಕರ್ಷಕ ರಂಗೋಲಿಯನ್ನು ಬಿಡಿಸಿ, ಹಣತೆಯನ್ನು ಬೆಳಗುತ್ತಿದ್ದ ದೃಶ್ಯ ಕಂಡುಬಂದಿತು. ಮನೆಗಳ ಎದುರು ಆಕರ್ಷಕ ಗೂಡುದೀಪಗಳು, ವಿದ್ಯುತ್ ದೀಪಗಳು, ಹಣತೆಗಳು ಬೆಳಗುತ್ತಿರುವುದು ಗಮನ ಸೆಳೆಯಿತು.
ನೀರು ತುಂಬುವ ಹಬ್ಬ ಮತ್ತು ಅಭ್ಯಂಜನ ಸ್ನಾನವನ್ನು ಗುರುವಾರ ಆಚರಿಸಲಾಯಿತು. ವಾಹನಗಳನ್ನು ಪೂಜೆಸಲಾಯಿತು. ಬಗೆ, ಬಗೆಯ ಸಿಹಿ ತಿನಿಸುಗಳನ್ನು ಸವಿದು ಸಂಭ್ರಮಿಸಿದರು.
ನಗರದ ಶಾಸ್ತ್ರೀ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಹೂವು, ಹಣ್ಣು, ಬಾಳೆಗಿಡ, ಕುಂಬಳಕಾಯಿ, ಪಟಾಕಿ, ಆಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಾನುಗಳ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಿತ್ತು.
ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು, ಸಿಡಿಸಬೇಕು ಎಂಬ ಜಿಲ್ಲಾಡಳಿತದ ಮನವಿಗೆ ಸ್ಪಂದಿಸದೇ ಮಾಲಿನ್ಯಕಾರಕ ಕೆಂಪು ಪಟಾಕಿಗಳನ್ನೇ ಜನರು ಸಿಡಿಸಿದರು.
ಬಲಿಪಾಡ್ಯಮಿ ದಿನವಾದ ನ.2ರಂದು ಗೋಪೂಜೆ, ಗೌಳಿಗರಿಂದ ಎಮ್ಮೆಗಳ ಪೂಜೆ ಅದ್ಧೂರಿಯಾಗಿ ನಡೆಯಲಿದೆ.
ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಜೋರು ಪಟಾಕಿ, ಬಾಣ ಬಿರುಸುಗಳ ಸದ್ದು ಎಲ್ಲೆಡೆ ಲಕ್ಷ್ಮಿ ಪೂಜೆ ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.