ವಿಜಯಪುರ: ‘ಸಮಸ್ಯೆಗಳನ್ನು ಸೃಷ್ಟಿಸುವ ಬದಲು ಮುಂದಾಲೋಚನೆಯಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಮೂಲಕ ಸರ್ಕಾರ ಹಾಗೂ ನಮಗೆ ಬರುವ ಕೆಟ್ಟ ಹೆಸರನ್ನು ತಪ್ಪಿಸಲು ಮುಂದಾಗಿ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಜತೆ ಜಂಟಿಯಾಗಿ ನಡೆಸಿದ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ಎಚ್ಚರಿಕೆ ನೀಡಿದರು.
ಸಭೆಯ ಆರಂಭದಲ್ಲೇ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಮಗ್ರ ವಿವರಣೆ ನೀಡಲು ಮುಂದಾದರು. ಮಧ್ಯಪ್ರವೇಶಿಸಿದ ಸಚಿವ ಶಿವಾನಂದ ಪಾಟೀಲ, ‘ಈಚೆಗಿನ ವರ್ಷಗಳಲ್ಲಿ ತೊಗರಿ ರೈತರಿಗೆ ಆದಾಯದ ಬೆಳೆಯಾಗಿದೆ. ಹೆಚ್ಚಿನ ಸಂಖ್ಯೆಯ ರೈತರು ಇದನ್ನೇ ಬೆಳೆಯುತ್ತಿರುವುದು ಸರ್ಕಾರಕ್ಕೆ ಖರೀದಿ ಸಮಯದಲ್ಲಿ ತಲೆ ನೋವಿನ ವಿಷಯವಾಗಿ ಕಾಡಲಿದೆ. ಇದರ ಜತೆಗೆ ನಮಗೂ ಕೆಟ್ಟ ಹೆಸರು.
ರಾಶಿಯ ಸಂದರ್ಭ ಬೆಲೆ ಕುಸಿದಿರುತ್ತದೆ. ಬೆಳೆದ ಎಲ್ಲಾ ಉತ್ಪನ್ನವನ್ನು ಸರ್ಕಾರ ಖರೀದಿಸಲು ಸಾಧ್ಯವಿಲ್ಲ. ಈ ಸಂದರ್ಭ ರೈತ ಸಮೂಹ ನಮ್ಮನ್ನು ಶಪಿಸುವುದು ತಪ್ಪಲ್ಲ. ಕೃಷಿ ಇಲಾಖೆ ಮುಂಗಾರು ಹಂಗಾಮು ಆರಂಭಗೊಂಡ ಸಮಯದಲ್ಲೇ ವ್ಯಾಪಕ ಜಾಗೃತಿ ಮೂಡಿಸಿದರೆ ಸಮಸ್ಯೆಗಳು ಸೃಷ್ಟಿಯಾಗುವುದು ಸಾಕಷ್ಟು ಕಡಿಮೆಯಾಗುತ್ತವೆ’ ಎಂದು ಸಲಹೆ ನೀಡಿದರು.
‘ಸಿಂದಗಿ, ವಿಜಯಪುರ, ಮುದ್ದೇಬಿಹಾಳ ತಾಲ್ಲೂಕಿನ ಕೆಲ ಭಾಗದಲ್ಲಿ ಈ ಹಿಂದಿನಿಂದಲೂ ಹತ್ತಿಯನ್ನು ಸಾಂಪ್ರದಾಯಿಕ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ತೊಗರಿ ಬಂದ ಮೇಲೆ ವಿಸ್ತೀರ್ಣ ಕಡಿಮೆಯಾಗಿದೆ. ಮೂರು ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯುವ ಬದಲು, ಒಂದು ಲಕ್ಷ ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯಲು ರೈತರಿಗೆ ಮಾಹಿತಿ ನೀಡಿ. ಕಚೇರಿಗಳಿಂದ ಹೊರ ಬಂದು ಕೆಲಸ ಮಾಡಿ.
ನೆರೆಯ ಕಲಬುರ್ಗಿಯಲ್ಲಿ ‘ಕಾಬೂಲ್ ಚೆನ್ನಾ’ ಬೆಳೆಯಲಾಗುತ್ತಿದೆ. ಒಂದು ಕೆ.ಜಿ.ಯ ಧಾರಣೆ ₹80 ಇದೆ. ಈ ರೀತಿ ರೈತರಿಗೆ ಹೆಚ್ಚಿನ ವರಮಾನ ತರುವ ಬೆಳೆಗಳನ್ನು ಪರಿಚಯಿಸಿ. ರೈತರ ಆರ್ಥಿಕಾಭಿವೃದ್ಧಿಯೂ ನಡೆಯುತ್ತದೆ. ಸರ್ಕಾರಕ್ಕೂ ಕೆಟ್ಟ ಹೆಸರು ತಪ್ಪುತ್ತದೆ. ನಮಗೂ ಕಿರಿಕಿರಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ’ ಎಂದು ಸಚಿವ ಶಿವಾನಂದ ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಎಸ್.ಆರ್.ಕುಮಾರಸ್ವಾಮಿ ಸಚಿವ ಎಂ.ಸಿ.ಮನಗೂಳಿ ಪ್ರಶ್ನೆಗೆ ಉತ್ತರಿಸುವ ಸಂದರ್ಭ, ಸಚಿವ ಶಿವಾನಂದ ಮಧ್ಯಪ್ರವೇಶಿಸಿ, ‘ಈ ಹಿಂದಿನಿಂದಲೂ ತೋಟಗಾರಿಕೆ ಇಲಾಖೆಯಲ್ಲಿ ಸಮರ್ಪಕ ನಿರ್ಹಣೆಯಿಲ್ಲದಾಗಿದೆ. ನೀವಾದರೂ ನಿಮ್ಮ ಅವಧಿಯಲ್ಲಿ ನಿಖರ ಮಾಹಿತಿ ಸಂಗ್ರಹಿಸಿ, ಕಾರ್ಯ ನಿರ್ವಹಿಸಿ’ ಎಂದು ಹೇಳಿದರು.
‘ಹಲ ವರ್ಷಗಳಿಂದ ಹನಿ ನೀರಾವರಿಗೆ ಸಬ್ಸಿಡಿ ಕೊಡುತ್ತಿದ್ದೇವೆ. ಎಷ್ಟು ಮಂದಿಗೆ ಕೊಟ್ಟಿದ್ದೇವೆ. ನಮ್ಮಲ್ಲಿ ಸಂಪೂರ್ಣ ಹನಿ ನೀರಾವರಿಯಾಗಿದೆಯಾ ಎಂಬಿತ್ಯಾದಿ ಮಾಹಿತಿ ಕ್ರೋಡೀಕರಿಸಿ’ ಎಂದು ಆದೇಶಿಸಿದರು.
‘ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳ ವಿಜ್ಞಾನಿಗಳನ್ನು, ವಿ.ವಿ.ಯನ್ನು ತಮ್ಮ ಜತೆ ರೈತರ ಜಮೀನಿಗೆ ಕರೆದೊಯ್ಯಬೇಕಿದೆ. ಎಲ್ಲರನ್ನೊಳಗೊಂಡ ಸಮನ್ವಯ ಸಮಿತಿಯೊಂದನ್ನು ರಚಿಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿ.
ಸುಮ್ಮನೇ ಸಭೆಗಳಲ್ಲಿ ಕತೆ ಹೇಳಬ್ಯಾಡ್ರೀ. ಮಾತು, ಕಡತಗಳಲ್ಲಷ್ಟೇ ಪ್ರಗತಿಯಾಗಿರುತ್ತದೆ. ಕ್ಷೇತ್ರದಲ್ಲಿ ಸಾಧನೆ ಶೂನ್ಯವಿರುತ್ತದೆ. ಜಿಲ್ಲೆಯಲ್ಲಿ ವಿದೇಶಕ್ಕೆ ತಮ್ಮ ಉತ್ಪನ್ನ ರಫ್ತು ಮಾಡುವ ಬೆಳೆಗಾರರಿದ್ದಾರೆ. ಇಂತಹವರ ಜತೆ ಸಮನ್ವಯ ಸಾಧಿಸಿ, ಉಳಿದವರಿಗೂ ಕೃಷಿ, ತೋಟಗಾರಿಕೆ ಲಾಭದಾಯಕ ಎಂಬುದನ್ನು ಮನದಟ್ಟು ಮಾಡಿಕೊಡಲು ಮುಂದಾಗಿ’ ಎಂದು ಶಿವಾನಂದ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜನರಿಗೆ ನೀರು ಕೊಡಿ; ಯುಜಿಡಿ ಮುಗಿಸಿ
ವಿಜಯಪುರ ಮಹಾನಗರ ಪಾಲಿಕೆಯಲ್ಲಿನ ಆಡಳಿತದ ಕಾರ್ಯವೈಖರಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಶಿವಾನಂದ ಪಾಟೀಲ ಆಯುಕ್ತ ಹರ್ಷಶೆಟ್ಟಿ, ನಗರ ನೀರು ಸರಬರಾಜು ಮಂಡಳಿಯ ಎಇಇ ಅಶೋಕ ಮಾಡ್ಯಾಳ, ಕೆಯುಡಿಎಫ್‌ಸಿ, ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಹಾನಗರ ಪಾಲಿಕೆಯ ಆಡಳಿತಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯಲ್ಲಿ ಜೂನ್ 18, 19ರಂದು ಪ್ರಕಟವಾಗಿದ್ದ ವಿಶೇಷ ವರದಿಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ, ತಿಂಗಳಿಗೊಮ್ಮೆ ಸಭೆ ನಡೆಸಿ. ಜನರಿಗೆ ತಪ್ಪು ಸಂದೇಶ ಹೋಗುವುದನ್ನು ತಪ್ಪಿಸಿ ಎಂದು ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹರ್ಷಶೆಟ್ಟಿ ಈ ಕುರಿತಂತೆ ಪ್ರತಿ ತಿಂಗಳು ಡಿಎಂಎಗೆ ವರದಿ ನೀಡಿರುವೆ. ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡುವಂತೆ ಆದೇಶವಿದೆ. ಒತ್ತಡದಿಂದ ಕಾರ್ಯಾನುಷ್ಠಾನವಾಗಿಲ್ಲವಷ್ಟೇ. ಮೇಯರ್ ಸೂಚಿಸಿದರೆ ಅಥವಾ ಮೂರನೇ ಒಂದು ಭಾಗ ಸದಸ್ಯರು ಲಿಖಿತ ಮನವಿ ನೀಡಿದರೆ ಸಭೆ ಆಯೋಜಿಸುತ್ತೇವೆ ಎಂದು ಹೇಳಿದರು.
‘ವಿಜಯಪುರದ ವಿವಿಧೆಡೆಗೆ ಇಂದಿಗೂ 11 ದಿನಕ್ಕೆ ನೀರು ಪೂರೈಕೆಯಾಗುತ್ತಿದೆ ಎಂಬ ದೂರಿದೆ. ಕೆಲ ಕಾರ್ಪೊರೇಟರ್‌ಗಳು ಇದಕ್ಕೆ ದನಿಗೂಡಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಆದಷ್ಟು ಬೇಗ 24X7 ಯೋಜನೆ ಅನುಷ್ಠಾನಗೊಳಿಸಿ. ವಿಳಂಬ ಮಾಡಬೇಡಿ.
ಯುಜಿಡಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ₹ 120 ಕೋಟಿ ಮೊತ್ತದ ಯೋಜನೆ ದುರ್ಬಳಕೆಯಾಗುತ್ತಿದೆ. ಕೆಯುಎಫ್‌ಡಿಸಿ ಎಂಜಿನಿಯರ್‌ಗಳು ನಿಗಾ ವಹಿಸಬೇಕು. ಪ್ಯಾಕೇಜ್ ಹಂಚಿಕೆಯೂ ಸಮರ್ಪಕವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಈಗಾಗಲೇ ಎಂಟು ವರ್ಷ ಕಾಮಗಾರಿಯ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗಿದೆ. ಇನ್ಮುಂದೆ ವಿಸ್ತರಿಸಲ್ಲ. ಬೇರೆಯವರಿಗೆ ಜವಾಬ್ದಾರಿ ವಹಿಸಿಕೊಡಲಾಗುತ್ತದೆ. ಪಾಲಿಕೆ ಆಡಳಿತ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಿ’ ಎಂದು ಸಚಿವ ಶಿವಾನಂದ ಪಾಟೀಲ ಆಯುಕ್ತ ಹರ್ಷಶೆಟ್ಟಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿಗೆ ತರಾಟೆ..!
‘ಮಾಜಿ ಸಚಿವ ಎಚ್.ವೈ.ಮೇಟಿ ಹೆಸರೇಳಿಕೊಂಡು ಕೆಲಸ ಮಾಡದೇ ಸುಮ್ಮನೇ ಕೂತರೇ ನಡೆಯೋದಿಲ್ಲ. ನಿಮ್ಮ ಮೇಲೆ ಸಾರ್ವಜನಿಕ ವಲಯದಲ್ಲೇ ಸಾಕಷ್ಟು ದೂರುಗಳಿವೆ. ತಾಲ್ಲೂಕು ಆಸ್ಪತ್ರೆ ಸೇರಿದಂತೆ ಯಾವೊಂದು ಆರೋಗ್ಯ ಕೇಂದ್ರಕ್ಕೆ ಇದೂವರೆಗೂ ಭೇಟಿ ನೀಡಿಲ್ಲ. ನಿಮ್ಮ ಕೆಲಸದಲ್ಲಿ ನೀವೂ ಇಂಫ್ರೂವ್ ಆಗಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ...’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಕುಮಾರ ಯರಗಲ್ಲ ಅವರನ್ನು ಆರೋಗ್ಯ ಸಚಿವ ಶಿವಾನಂದ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.
ಸಚಿವರು ಡಿಎಚ್‌ಒ ತರಾಟೆಗೆ ತೆಗೆದುಕೊಳ್ಳುವ ಮುನ್ನವೇ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಸಹ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ತುರ್ತು ಸನ್ನಿವೇಶದಲ್ಲೂ ಫೋನ್ ತೆಗೆಯಲ್ಲ. ಸಭೆಗಳಿಂದ ದೂರ ಉಳಿದಿರುತ್ತೀರಿ. ಜನರಿಗೂ ಹತ್ತಿರದಲಿಲ್ಲ. ಜಿಲ್ಲಾಡಳಿತದ ಸಂಪರ್ಕಕ್ಕೂ ಸಿಗಲ್ಲ ಎಂದು ತಾಕೀತು ಮಾಡಿದರು.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮ ತೆಗೆದುಕೊಳ್ಳಿ
– ಎಂ.ಸಿ.ಮನಗೂಳಿ, ತೋಟಗಾರಿಕೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.