ADVERTISEMENT

ತಿಕೋಟಾದಲ್ಲಿ ಕುಡಿಯುವ ನೀರಿಗೆ ತತ್ವಾರ!

ನಿರಂತರ ನೀರು ಪೂರೈಕೆಗೆ ಬೇಡಿಕೆ, ಟ್ಯಾಂಕ್ ನಿರ್ಮಿಸಿದರೂ ನೀರು ಪೂರೈಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 10:24 IST
Last Updated 19 ಮಾರ್ಚ್ 2023, 10:24 IST
ತಿಕೋಟಾ ಗೈರಾಣಿ ಓಣಿಯಲ್ಲಿ ಪಾಳು ಬಿದ್ದಿರುವ  ನೀರಿನ ಟ್ಯಾಂಕ್‌
ತಿಕೋಟಾ ಗೈರಾಣಿ ಓಣಿಯಲ್ಲಿ ಪಾಳು ಬಿದ್ದಿರುವ  ನೀರಿನ ಟ್ಯಾಂಕ್‌   

ತಿಕೋಟಾ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ಅದು ಮಳೆಗಾಲ ಇರಲಿ, ಬೇಸಿಗೆ ಇರಲಿ ಕುಡಿಯುವ ನೀರಿಗೆ ತತ್ವಾರ ತಪ್ಪಿದ್ದಲ್ಲ.

ಕೆಲವು ವಾರ್ಡ್‌ಗಳಲ್ಲಿ ಸಮರ್ಪಕವಾದ ಸಾರ್ವಜನಿಕ ನಳದ ವ್ಯವಸ್ಥೆ ಹಾಗೂ ನೀರಿನ ಟ್ಯಾಂಕ್‌ ಲಭ್ಯವಿಲ್ಲದೇ ಜನರು ಹೈರಾಣಾಗುತ್ತಿದ್ದಾರೆ.

ವಾರ್ಡ್‌ ನಂಬರ್‌ 9 ಮತ್ತು 10 ರ ಅಂಬೇಡ್ಕರ್ ಕಾಲೊನಿಯಲ್ಲಿ ಜನರು ನೀರಿಗಾಗಿ ಬೇರೆಡೆ ಹೋಗಿ ನೀರು ತರುವಂತಾಗಿದೆ. ಸಮೀಪದಲ್ಲಿ ಇನ್ನೊಂದು ಕೊಳವೆಬಾವಿ ಇದ್ದು, ಅದಕ್ಕೆ ಮೊಟರ್ ಅಳವಡಿಸಿಲ್ಲ. ನೀರಿನ ಟ್ಯಾಂಕಿಗೆ ಪೈಪ್ ಜೋಡಣೆ ಮಾಡಿಲ್ಲ. ಮೋಟರ್ ಜೋಡಿಸಿ, ಟ್ಯಾಂಕಿಗೆ ಪೈಪ್ ಜೋಡಿಸಿ ನೀರು ಪೂರೈಕೆ ಮಾಡಿ ಎಂದು ಮೇಲಾಧಿಕಾರಿಗಳಿಗೆ ಹೇಳಿದರೂ ಪ್ರಯೋಜನೆ ಆಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಅರ್ಜುನ ಸದಾಶಿವ ಧರ್ನಾಕರ.

ADVERTISEMENT

ಐದು ದಿನಕ್ಕೊಮ್ಮೆ ನೀರು:

ಕುಡಿಯುವ ನೀರು ಸಹ ಐದಾರು ದಿನಗಳಿಗೊಮ್ಮೆ ಬರುತ್ತಿದೆ. ಅದೂ ಯೋಗ್ಯವಲ್ಲದ ಸವಳು ನೀರು ಪೂರೈಕೆಯಾಗುತ್ತವೆ. ಕೆಲವು ವಾರ್ಡ್‌ ಗಳಲ್ಲಿ ಅದು ಸಹ ಪೂರೈಕೆ ಆಗುತ್ತಿಲ್ಲ.

‘ಐದಾರು ದಿನಕ್ಕೊಮ್ಮೆ ನೀರು ಬರುವುದರಿಂದ ಮಿತವಾಗಿ ಬಳಸುವುದು ಅನಿವಾರ್ಯವಾಗಿದೆ. ಕೆರೆ ತುಂಬಿ ತುಳುಕುತ್ತಿದ್ದು, ಎಲ್ಲ ಕಡೆ ಅಂತರ್ಜಲ ಹೆಚ್ಚಾಗಿದೆ. ಎಲ್ಲ ವಾರ್ಡ್‌ಗಳಿಗೆ ಕೊಳವೆಬಾವಿ ಕೊರೆಸಿ ಮೊಟರ್ ಅಳವಡಿಕೆ ಆಗಬೇಕು. ಪ್ರತಿ ಓಣಿಗೂ ಸಾರ್ವಜನಿಕ ಟಾಕಿ ನಿರ್ಮಾಣ ಆಗಬೇಕು’ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.

ಖಾಸಗಿ ನೀರೇ ಗತಿ:

ಮನೆ,ಮನೆಗೆ ಶುದ್ದ ಕುಡಿಯುವ ನೀರು ಪೂರೈಕೆ ಇಲ್ಲದೇ ಇರುವುದರಿಂದ ಪ್ರತಿ ಕುಟುಂಬದವರು ಅಲ್ಲಲ್ಲಿ ಇರುವ ಖಾಸಗಿ ಒಡೆತನದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೋಗಿ ಪ್ರತಿ ನಿತ್ಯ ₹30 ರಿಂದ ₹ 40 ನೀಡಿ, ನೀರು ತಂದು ಕುಡಿಯುವುದು ಅನಿವಾರ್ಯವಾಗಿದೆ. ಸರ್ಕಾರದಿಂದಲೇ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಬೇಕು ಹಾಗೂ ಜಲ ಜೀವನ ಮಷಿನ್ ಯೋಜನೆಯಡಿ 24×7 ಮನೆ ಮನೆಗೆ ನಳದ ಜೋಡಣೆ ಮಾಡಿಕೊಡಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

***

ಟ್ಯಾಂಕ್‌ ಇದೆ, ನೀರಿಲ್ಲ

ತಿಕೋಟಾ ಪಟ್ಟಣದ ಗೈರಾಣಿ ಪ್ರದೇಶದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ವಸತಿಯಿರುವ ಈ ಪ್ರದೇಶದಲ್ಲಿ ಐದಾರು ವರ್ಷದ ಹಿಂದೆ ಬೃಹತ್ ಟ್ಯಾಂಕ್ ನಿರ್ಮಿಸಿದ್ದರೂ ಇದುವರೆಗೂ ನೀರೇ ಬಿಟ್ಟಿಲ್ಲ.

2019-20 ನೇ ಸಾಲಿನ 14 ನೇ ಹಣಕಾಸು ಯೋಜನೆಯಡಿ ತಲಾ ₹ 50 ಸಾವಿರ ವೆಚ್ಚದಂತೆ ಎರಡು ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಪೈಪ್‌ ಜೋಡಿಸಿದರೂ ಕೂಡಾ ಇಲ್ಲಿಯವರೆಗೂ ಒಂದು ತೊಟ್ಟು ನೀರು ಕೂಡಾ ಈ ಟ್ಯಾಂಕಿಗೆ ಬಿಟ್ಟಿಲ್ಲ ಎಂದು ಸೈನು ಕೊರಬು, ರಜಿಯಾ ಹಂಜಗಿ, ಸುನಂದಾ ಬಗಲಿ, ರೇಖಾ ಮಲಕನವರ, ರಾಧಾ ಲಾಳಿ ಓಣಿಯ ಮಹಿಳೆಯರು ಹಿಡಿಶಾಪ ಹಾಕಿದರು.

***

ನೀರಿನ ಸಮಸ್ಯೆ ನಿವಾರಣೆಗೆ ಕ್ರಮ

ತಿಕೋಟಾ ಪಟ್ಟಣಕ್ಕೆ ಬಹು ಹಳ್ಳಿ ಕುಡಿಯುವ ನೀರು ಯೋಜನೆಯಡಿ ನಾಲ್ಕೈದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. 15 ಕೈ ಪಂಪ್, 72 ವಿದ್ಯುತ್ ಮೋಟರ್ ಬಳಕೆ ಇವೆ. ಗೈರಾಣಿ ಜನವಸತಿ ಪ್ರದೇಶಕ್ಕೆ ನಗರೋತ್ಥಾನ 4ನೇ ಹಂತದಲ್ಲಿ ₹67 ಲಕ್ಷ ನೀರಿನ ಯೋಜನೆಗೆ ಅನುದಾನ ನೀಡಲಾಗಿದೆ. ಇದು ಜಿಲ್ಲಾಧಿಕಾರಿ ಕಚೇರಿಯಿಂದಲೇ ಟೆಂಡರ್ ಆಗುವುದು. ಇದರಡಿ ಪೈಪ್‌ ಲೈನ್‌ ಅಳವಡಿಸಿ ಐದಾರು ವರ್ಷ ಹಿಂದೆ ನಿರ್ಮಿಸಿ ಉಪಯೋಗಿಸದೇ ಇರುವ 50 ಸಾವಿರ ಲೀಟರ್ ಟ್ಯಾಂಕಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಚ್.ಎ.ಡಾಲಾಯತ್ ‘ಪ್ರಜಾವಾಣಿ’ಗೆ ತಿಳಿಸಿದರು

ಮನೆ ಮನೆ ನಳ ಯೋಜನೆ ಗ್ರಾಪಂ ಅಡಿ ಯೋಜನೆಯಾಗಿದೆ. ಈಗ ಇದು ಪಂ.ಪ ಆಗಿ ಮೇಲ್ದರ್ಜೆಗೆರಿದೆ. ಜಲಧಾರೆ ಅಥವಾ ಅಮೃತ 2 ಯೋಜನೆಯಡಿ ಪಟ್ಟಣಕ್ಕೂ ಮನೆ ಮನೆ ನಳ ಒದಗಿಸಲು ₹ 1.5 ಕೋಟಿ ಮಿಸಲಿರಿಸಲು ಕರ್ನಾಟಕ ನೀರು ಸರಬರಾಜು ಮಂಡಳಿಗೆ ಮನವಿ ಕಳಿಸಲಾಗುವುದು. ಎಲ್ಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಲಾಗುವದು ಎಂದು ಹೇಳಿದರು.

***

ಗೈರಾಣಿ ಓಣಿಯಲ್ಲಿ ಲಕ್ಷಾಂತರ ಹಣ ವ್ಯಯ ಮಾಡಿ ಬೃಹತ್ ನೀರಿನ ಟ್ಯಾಂಕ್‌ ನಿರ್ಮಿಸಿದರು ನೀರು ಪೂರೈಸದೇ ಇರುವುದು ವಿಪರ್ಯಾಸ

–ಸುರೇಶ ಕೊಣ್ಣೂರ, ಯುವ ಮುಖಂಡ

***

ವಯಸ್ಸಿನವರು ಬೇರಡೆ ಹೋಗಿ ನೀರು ತರತಾರೆ, ವಯಸ್ಸಾದ ಮುದಕ ಮುದುಕಿಯರು ಹೆಂಗ ಮಾಡಬೇಕರಿ? ನಮ್ಮ ಕಡೆ ವೋಟ್ ಅಷ್ಟೆ ತಗೊತಾರ, ನಮಗ ಏನು ಸವಲತ್ತು ಕೊಟ್ಟಿಲ್ಲ.

–ಸಂದಲಬಿ ಏಳಾಪುರ, ಗೈರಾಣಿ ನಿವಾಸಿ

***

ನಮ್ಮ ಓಣಿಗೆ ಬಳಕೆ ನೀರು ಪ್ರತಿದಿನ ಕೊಳವೆಬಾವಿಯಿಂದ ಸಾಕಷ್ಟು ಸಿಗತ್ತದೆ, ಕುಡಿಯಲು ಶುದ್ಧ ನೀರು ಖರೀದಿಸುತ್ತೇವೆ.

–ಸುನಂದಾ ಬಾಪು ನಾಯಕ, ಬಸವನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.