ADVERTISEMENT

ನಿಗೂಢ ಶಬ್ದಕ್ಕೆ ಬೆಚ್ಚಿದ ಜನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:53 IST
Last Updated 22 ಅಕ್ಟೋಬರ್ 2024, 14:53 IST

ತಿಕೋಟಾ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹುಬನೂರ, ಘೋಣಸಗಿ ಸೇರಿದಂತೆ ಗಡಿ ಮಹಾರಾಷ್ಟ್ರ ರಾಜ್ಯದ ತಿಕ್ಕುಂಡಿ, ಮೊರಬಗಿ, ಜಾಲಿಹಾಳ ಗ್ರಾಮಗಳಲ್ಲಿ ಮಂಗಳವಾರ ನಿಗೂಢ ಶಬ್ದ ಕೇಳಿ ಬಂದಿದ್ದು ಜನ ಆತಂಕಗೊಂಡಿದ್ದಾರೆ.

ಬೆಳಿಗ್ಗೆ 11.29ಕ್ಕೆ ನಿಗೂಢ ಶಬ್ದ ಭೂಮಿಯ ಅಂತರಾಳದಿಂದ ಬಂದಿದ್ದು, ಇದು ಭೂಕಂಪನವೋ ಅಥವಾ ಬೇರೆ ಏನಾದರೂ ಆಗುತ್ತಿದೆಯೋ ಎಂದು ಜನ ಭಯಭೀತರಾಗಿದ್ದಾರೆ. ಬಂದಿರುವ ಶಬ್ದಕ್ಕೆ ಜಾನುವಾರು ಹೆದರಿವೆ. ಶಬ್ದ ಕೇಳಿ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯ ಚಾವಣಿಯಿಂದ ಮಣ್ಣು ಉದುರಿದೆ. ಪಾತ್ರೆಗಳು ಬಿದ್ದಿವೆ.

ಈ ಭಾಗಗಳಲ್ಲಿ ವರ್ಷದಲ್ಲಿ ನಾಲ್ಕೈದು ಬಾರಿ ಈ ಥರ ಅನುಭವ ಆಗುತ್ತಲೇ ಇದೆ. ಆದರೆ ಮಂಗಳವಾರ ಕೇಳಿಬಂದ ಶಬ್ದ  ಹಿಂದೆಂದಿಗಿಂತಲೂ ಜೋರಾಗಿತ್ತು. ಮನೆಯ ತಗಡಿನ ಶೆಡ್ ಮೇಲೆ‌‌ ದೊಡ್ಡದಾದ ಕಲ್ಲು ಬಂಡೆ ಬಿದ್ದ ಅನುಭವ ಆಯಿತು ಎಂದು ಮಹಾರಾಷ್ಟ್ರದ ಮೊರಬಗಿಯ ಅಣ್ಣಾರಾಯ ಮಾಹಿತಿ ನೀಡಿದರು.

ADVERTISEMENT

ನಿಗೂಢ‌ ಶಬ್ದದಿಂದ ಅಡುಗೆ ಕೋಣೆಯ ಪಾತ್ರೆಗಳು ಬಿದ್ದಿವೆ ಎಂದು ಟಕ್ಕಳಕಿಯ ಮಹಾಂತೇಶ ರಾಠೋಡ ತಿಳಿಸಿದರು.

ಈ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜನರಿಗೆ ಈ ಕುರಿತು ನಿಖರ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.