ADVERTISEMENT

ಶಿಕ್ಷಣ ಸಂಸ್ಥೆ, ಬ್ಯಾಂಕ್, ಕಾರ್ಖಾನೆ ಕಟ್ಟಿಲ್ಲ: ಜಿಗಜಿಣಗಿ

ವಿಜಯಪುರ ನಗರದ ನವೀಕೃತ ರೈಲು ನಿಲ್ದಾಣ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 16:12 IST
Last Updated 26 ಫೆಬ್ರುವರಿ 2024, 16:12 IST
‘ಅಮೃತ್‌ ಭಾರತ್‌ ಸ್ಟೇಷನ್’ ಯೋಜನೆಯಡಿ ನವೀಕರಣವಾಗುತ್ತಿರುವ ವಿಜಯಪುರ ನಗರದ ರೈಲು ನಿಲ್ದಾಣವನ್ನು ಸಂಸದ ರಮೇಶ ಜಿಗಜಿಣಗಿ ಸೋಮವಾರ ಉದ್ಘಾಟಿಸಿ ಮಾತನಾಡಿದರು -ಪ್ರಜಾವಾಣಿ ಚಿತ್ರ
‘ಅಮೃತ್‌ ಭಾರತ್‌ ಸ್ಟೇಷನ್’ ಯೋಜನೆಯಡಿ ನವೀಕರಣವಾಗುತ್ತಿರುವ ವಿಜಯಪುರ ನಗರದ ರೈಲು ನಿಲ್ದಾಣವನ್ನು ಸಂಸದ ರಮೇಶ ಜಿಗಜಿಣಗಿ ಸೋಮವಾರ ಉದ್ಘಾಟಿಸಿ ಮಾತನಾಡಿದರು -ಪ್ರಜಾವಾಣಿ ಚಿತ್ರ   

ವಿಜಯಪುರ: ‘40 ವರ್ಷ ರಾಜಕಾರಣದಲ್ಲಿ ಇದ್ದರೂ ನಾನು ಇದುವರೆಗೆ ಬೇರೆಯವರಂತೆ ಯಾವುದೇ ಶಿಕ್ಷಣ ಸಂಸ್ಥೆ, ಬ್ಯಾಂಕ್, ಆಸ್ಪತ್ರೆ, ಕಾರ್ಖಾನೆ ಕಟ್ಟಿಲ್ಲ. ಬಡವರ ಪರ ಪ್ರಾಮಾಣಿವಾಗಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

‘ಅಮೃತ್‌ ಭಾರತ್‌ ಸ್ಟೇಷನ್’ ಯೋಜನೆಯಡಿ ನವೀಕರಣವಾಗುತ್ತಿರುವ ವಿಜಯಪುರ ನಗರದ ರೈಲು ನಿಲ್ದಾಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. 

‘ಜಿಲ್ಲೆಯ ಅಭಿವೃದ್ಧಿ ಮತ್ತು ಬಡವರ ಕೆಲಸದ ವಿಷಯದಲ್ಲಿ ನಾನು ಜಿಗಣಿ ಇದ್ದ ಹಾಗೆ. ಹಿಡಿದ ಕೆಲಸವನ್ನು ಎಂದೂ ಬಿಡುವುದಿಲ್ಲ’ ಎಂದು ಹೇಳಿದರು.

ADVERTISEMENT

ವಿಜಯಪುರ ರೈಲು ನಿಲ್ದಾಣ ₹43 ಕೋಟಿ ಅನುದಾನದಲ್ಲಿ ಪ್ರಥಮ ಹಂತದಲ್ಲಿ ನವೀಕರಣಗೊಳುತ್ತಿದೆ. ಬಳಿಕ ಈಗಿರುವ ಹಳೆಯ ನಿಲ್ದಾಣವನ್ನು ತೆರವುಗೊಳಿಸಿ, ಹೊಸದಾಗಿ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

ಸಂಸದನಾಗಿ ಹುಟಗಿ- ಗದಗ ನಡುವೆ ಡಬಲ್ ಲೇನ್‌ ಮಾಡಿಸಿದ್ದೇನೆ. ವಿಜಯಪುರ ಮಾರ್ಗವನ್ನು ವಿದ್ಯುದ್ದೀಕರಣ ಮಾಡಿಸಿದ್ದೇನೆ, ₹32 ಕೋಟಿ ವೆಚ್ಚದಲ್ಲಿ ಅಲಿಯಾಬಾದ್‌ನಲ್ಲಿ ಗೂಡ್ಸ್‌ ಶೆಡ್ ನಿರ್ಮಾಣ ಮಾಡಲಾಗಿದೆ. ಇದರಿಂದ ಕೈಗಾರಿಕೆಗೆ ಅನುಕೂಲವಾಗಲಿದೆ. ₹5 ಕೋಟಿ ವೆಚ್ಚದಲ್ಲಿ ವಿಜಯಪುರಕ್ಕೆ ರಿಂಗ್ ರೋಡ್ ಮಾಡಿಸಿಕೊಟ್ಟಿದ್ದೇನೆ ಎಂದು ಹೇಳಿದರು.

ವಿಜಯಪುರದಲ್ಲಿ ₹10ಕೋಟಿ ವೆಚ್ಚದಲ್ಲಿ ರೈಲ್ವೆ ವಸತಿಗಳನ್ನು ನವೀಕರಣ ಮಾಡಲಾಗುತ್ತಿದೆ. ವಿಜಯಪುರ ರೈಲು ನಿಲ್ದಾಣದಲ್ಲಿ ₹50 ಕೋಟಿ ವೆಚ್ಚದಲ್ಲಿ ಫಿಟ್ ಲೈನ್ ನಿರ್ಮಾಣವಾಗುತ್ತಿದೆ, ಇದರಿಂದ ರೈಲುಗಳು ಇಲ್ಲಿಯೇ ತಂಗಿ, ಪ್ರಯಾಣ ಆರಂಭಿಸಲು ಅನುಕೂಲವಾಗಲಿದೆ ಎಂದರು.

ಹಲವು ಅಡಚಣೆಗಳ ನಡುವೆಯೂ ವಿಜಯಪುರಕ್ಕೆ ವಿಮಾನ ನಿಲ್ದಾಣ ಮಾಡಿದ್ದೇನೆ ಎಂದರು.

ದೇಶ ಹಿಂದೆಂದೂ ಕಾಣದ ಪ್ರಧಾನಿ ಮೋದಿಯಾಗಿದ್ದಾರೆ. ಅವರ ಜೊತೆ ಸಚಿವನಾಗಿ, ಸಂಸದನಾಗಿ ಕೆಲಸ ಮಾಡುವ ಅವಕಾಶ ದೊರಕಿರುವುದು ನನ್ನ ಅದೃಷ್ಟವೇ ಸರಿ. ಈ ಕಾರಣಕ್ಕೆ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ‌ ಎಂದರು.

ಬ್ರಿಟಿಷರ ಕಾಲದಲ್ಲಿ ಕಟ್ಟಿದ ಸ್ಟೇಷನ್, ಆರ್‌ಒಬಿಗಳನ್ನು ಹೊಸದಾಗಿ ಕಟ್ಟುವ ಕೆಲಸವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಕೆಲಸ ಕಾಂಗ್ರೆಸ್‌ ಅವಧಿಯಲ್ಲಿ ಏಕೆ ಆಗಿಲ್ಲ? ಎಂದರು.

ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿ ಆಗಬಾರದಾ? ಕೇವಲ ನೆಹರೂ ಕುಟುಂಬದವರು ಮಾತ್ರ ಆಗಬೇಕಾ? ಇದ್ಯಾವಾ ನ್ಯಾಯ? ಎಂದರು.

ರಾಜಕೀಯವಾಗಿ ನಾನು ಬಹಳ ಪುಣ್ಯವಂತ, ಭಗವಂತ ಎಂದೂ ನನ್ನ ಕೈಬಿಟ್ಟಿಲ್ಲ. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರೊಂದಿಗೆ ಬೆಳೆದಿದ್ದೇನೆ‌ ಎಂದರು.

ನೇರ ಪ್ರಸಾರ:

ದೆಹಲಿಯಲ್ಲಿ ಪ್ರಧಾನಿ ಮೋದಿ ಅವರು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ದೇಶದ 554 ರೈಲು ನಿಲ್ದಾಣಗಳ ನವೀಕರಣ ಹಾಗೂ 1500 ರಸ್ತೆ ಮೇಲ್ಸೇತುವೆಗಳು ಮತ್ತು ಅಂಡರ್ ಪಾಸ್ ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಕಾರ್ಯಕ್ರಮದ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ರೈಲ್ವೆ ಅಧಿಕಾರಿಗಳಾದ ಸಂಜಯ್‌ ಕುಮಾರ್‌ ಸಿಂಗ್‌, ಆಸೀಫ್‌ ಹಫೀಜ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕುಚಬಾಳ, ಮುಖಂಡರಾದ ಅಪ್ಪು ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಉಮೇಶ ಕೋಳಕೂರ,  ಶಿವರುದ್ರ ಬಾಗಲಕೋಟ, ಪ್ರಕಾಶ ಅಕ್ಕಲಕೋಟ, ಮಲ್ಲಿಕಾರ್ಜುನ ಜೋಗೂರ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ನನ್ನ ಸಮಾಜವನ್ನು ದೂರ ಇಟ್ಟು ಎಲ್ಲ ಸಮಾಜವನ್ನು ಹೆಗಲ ಮೇಲೆ ಹೊತ್ತು ಕೆಲಸ ಮಾಡಿದ್ದೇನೆ. ಜೊತೆಗೆ ನಮ್ಮ ಸಮಾಜದವರಿಗೆ ಏನು ಬೇಕೋ ಅದನ್ನೂ ಮಾಡಿಸಿದ್ದೇನೆ 
-ರಮೇಶ ಜಿಗಜಿಣಗಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.