ಆಲಮೇಲ: ಪಟ್ಟಣವನ್ನು ಮೂರು ವರ್ಷದ ಹಿಂದೆ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದೆ. ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿ ಎಂದೂ ಸರ್ಕಾರ ಮೇಲ್ದರ್ಜೆಗೆ ಏರಿಸಿದೆ. ಗ್ರಾಮ ಪಂಚಾಯ್ತಿಯಲ್ಲಿ ಇದ್ದ ಅನುದಾನದ ದುಪ್ಪಟ್ಟು ಅನುದಾನ ಇಲ್ಲಿಗೆ ಹರಿದು ಬರುತ್ತಿದ್ದರೂ ಯಾವುದೇ ಅಭಿವೃದ್ದಿ ಕಂಡಿಲ್ಲ ಎನ್ನುವುದಕ್ಕೆ ಇಲ್ಲಿನ ದನದ ಬಜಾರ ಬಡಾವಣೆ ಉದಾಹರಣೆಯಾಗಿದೆ.
ಪಟ್ಟಣದಲ್ಲಿ ಒಟ್ಟು 19 ವಾರ್ಡ್‌ಗಳು ಇದ್ದು, ಎಲ್ಲ ವಾರ್ಡ್‌ಗಳ್ಲೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಕೆಲ ಬಡಾವಣೆಗಳು ಕನಿಷ್ಠ ಮೂಲ ಸೌಲಭ್ಯಗಳು ಇಲ್ಲ. ಅಧ್ಯಕ್ಷರಿಲ್ಲದೇ ಪಟ್ಟಣ ಪಂಚಾಯಿತಿ ಅನಾಥ ಪ್ರಜ್ಞೆಯಿಂದ ಬಳಲುತ್ತಿದೆ.
ವಾರ್ಡ್ 1ರಲ್ಲಿ ಬರುವ ವಿನಾಯಕ ನಗರ ಸ್ಥಿತಿಯಂತೂ ದೇವರೇ ಬಲ್ಲ. ಇಲ್ಲಿನ ರಸ್ತೆಗಳು ತೀರ ಇಕ್ಕಟ್ಟಾಗಿದ್ದು ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಇಡೀ ಬಡಾವಣೆ ಬಳಲುತ್ತಿದೆ. ಹಾಗೆಯೇ, 2, 18 ಮತ್ತು 19ನೇ ವಾರ್ಡ್ ಕಥೆಯೂ ಭಿನ್ನವೇನಿಲ್ಲ.
ದನದ ಬಜಾರ ಬಡಾವಣೆಯಲ್ಲಿ ಆರ್ಥಿಕವಾಗಿ ಹಿಂದುಳಿದ ನೂರಾರು ಕುಟುಂಬಗಳು ವಾಸವಾಗಿವೆ. ಆದರೆ, ಈ ಬಡಾವಣೆಗೆ ಸರಿಯಾಗಿ ನೀರು ಬರುತ್ತಿಲ್ಲ, ಒಂದೇಒಂದು ಸಿ.ಸಿ ರಸ್ತೆ ಇಲ್ಲ, ಚರಂಡಿ ಇಲ್ಲ. ಈ ಬಡಾವಣೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದರಿಂದ ಇಲ್ಲಿನ ಜನರು ಆತಂಕದಲ್ಲಿ ಇದ್ದಾರೆ.
ಇಲ್ಲಿ ಪ್ರತಿವರ್ಷ ನೂರಾರು ಮಕ್ಕಳು ಜ್ವರದಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಅತಿ ಹಿಂದುಳಿದ ಈ ಬಡಾವಣೆಯಲ್ಲಿ ಯಾವ ಒಬ್ಬ ಅಧಿಕಾರಿಯೂ ಭೇಟಿ ನೀಡಲ್ಲ.ಇಲ್ಲಿನ ನಿವಾಸಿಗಳಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ 2ನೇ ವಾರ್ಡ್ ನೆನಪಾಗುತ್ತದೆ. ಅದು ಮುಗಿದ ಮೇಲೆ ಯಾರು ನಮ್ಮ ಕಡೆ ತಿರುಗಿ ನೋಡಲ್ಲ, ಮತ್ತೆ ಚುನಾವಣೆ ಬಂದಾಗ ಮಾತ್ರ ಬರುತ್ತಾರೆ ಎಂದು ಗಾಲೀಮಾ ವಾಲಿಕಾರ, ರಿಯಾನಾ ಮಲಘಾಣ, ಸಮೀಮಾ ಲೋಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರ್ಡ್ 19ರಲ್ಲಿ ಅಂಗನವಾಡಿ ಕೇಂದ್ರದ ಸಮೀಪದಲ್ಲಿಯೇ ಗಟಾರ ನೀರು ಶೇಖರಣೆಯಾಗಿ ಮಕ್ಕಳ ಕಲಿಕೆಗೆ ಅನಾನುಕೂಲವಾದರೂ ಇತ್ತ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಅಲ್ಲದೇ, ಗಟಾರದ ಪಕ್ಕದಲ್ಲಿಯೇ ಕೊಳವೆ ಬಾವಿಯಿದ್ದು ಅದರ ನೀರನ್ನೆ ಮಕ್ಕಳು ಕುಡಿಯುತ್ತಾರೆ ಎಂದು ರಮೇಶ ಕಟ್ಟಿಮನಿ ದೂರಿದರು.
ಈ ವಾರ್ಡ್‌ನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯವಿಲ್ಲ, ಇಲ್ಲಿನ ಬಹುತೇಕರು ಬಯಲು ಶೌಚಾಲಯ ಅವಲಂಬಿತರಾಗಿದ್ದಾರೆ. ಅತಿ ಕಡು ಬಡವ ಹಿಂದುಳಿದ ಜಾತಿಗೆ ಸೇರಿದವರು ಈ ವಾರ್ಡ್‌ನಲ್ಲಿದ್ದಾರೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ಯಾವುದೇ ಕಾಮಗಾರಿ ಆಗಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶದಿಂದಲೇ ಹೇಳುತ್ತಾರೆ.
1ನೇ ವಾರ್ಡ್‌ನ ವಿನಾಯಕ ನಗರ ಕುಡಿಯುವ ನೀರು, ರಸ್ತೆ ಚರಂಡಿ ಮುಂತಾದ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಇಲ್ಲಿ ವಸತಿ ಸಮುಚ್ಚಯ, ಶಾಲೆ ಕಾಲೇಜು, ಮಂಗಲ ಕಾರ್ಯಾಲಯ ಮೊದಲಾದ ಬೃಹತ್ ಕಟ್ಟಡಗಳು, ಬಹುಮಹಡಿ ಮನೆಗಳು ಇಲ್ಲಿರುವುದರಿಂದ ಇದಕ್ಕೆ ಡಾಲರ್ ಕಾಲೊನಿ ಎಂತಲೂ ಕರೆಯುತ್ತಾರೆ. ಆದರೆ, ಈ ಬಡಾವಣೆಯಲ್ಲೂ ಯಾವುದೇ ಮೂಲ ಸೌಕರ್ಯವಿಲ್ಲದೇ ಜನರು ಬದುಕುತ್ತಿದ್ದಾರೆ.
ಬೀದಿ ದೀಪದ ಕಂಬಗಳು ಈ ಬಡಾವಣೆಗೆ ಇಲ್ಲ, ಒಂದು ರಸ್ತೆಗೆ ಹಾದು ಹೋದ ಕಂಬ (ಹೈ ವೋಲ್ಟೇಜ್ )ಗಳಿಗೆ ವಿದ್ಯುತ್ ಬಲ್ಬ್ ಅಳವಡಿಸಿದ್ದರಿಂದ ಅವು ನಿತ್ಯ 24 ಗಂಟೆ ಬೆಳಗುತ್ತವೆ. ಈ ಹೈ ವೋಲ್ಟೇಜ್ ವಿದ್ಯುತ್ ತಂತಿ ವಸತಿ ಪ್ರದೇಶದಲ್ಲಿ ಹಾದುಹೋಗಿದ್ದು, ಇಲ್ಲಿನ ಜನರು ಆತಂಕದಲ್ಲಿದ್ದು, ಅದನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದರೂ ಹೆಸ್ಕಾಂ ಕ್ಯಾರೆ ಅನ್ನುತ್ತಿಲ್ಲ ಎಂದು ಇಲ್ಲಿನ ನಿವಾಸಿ ಸಿದ್ದು ಸಲಾದಹಳ್ಳಿ ದೂರಿದರು.
ವಿನಾಯಕ ನಗರ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಬೇಕಾಗಿದೆ. ಎರಡೂ ಕಡೆ ಕೊಳವೆಬಾವಿ ಕೊರೆದು ನೀರು ಪೊರೈಸುತ್ತಿದ್ದರೂ ವಿತರಣೆಯ ವ್ಯವಸ್ಥೆ ಸರಿಯಾಗಿಲ್ಲ ಎಂದು ಬಡಾವಣೆಯ ನಿವಾಸಿಗಳು ದೂರುತ್ತಾರೆ.
ಶಾಸಕ ಅಶೋಕ ಮನಗೂಳಿ ಅವರು ಇನ್ನಾರು ತಿಂಗಳಲ್ಲಿ ಮನೆಮನೆಗೂ 24X7 ಆಲಮೇಲ ಪಟ್ಟಣಕ್ಕೆ ನೀರು ಒದಗಿಸಲು ಯೋಜನೆ ಹಾಕಿಕೊಂಡಿದ್ದು ಅದನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳುತ್ತಾರೆ.
ನಗರೋತ್ಥಾನ ಹಾಗೂ ಶಾಸಕರ ಅನುದಾನದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ಚಾಲ್ತಿಯಲ್ಲಿವೆ ಉಳಿದ ವಾರ್ಡ್‌ಗಳ ಬಡಾವಣೆಯ ಮೂಲ ಸೌಲಭ್ಯಗಳಿಗೆ ಮುಂದಿನ ಹಂತದಲ್ಲಿ ಹಣ ಕಾದಿರಿಸಿ ಇಡೀ ಪಟ್ಟಣ ಅಭಿವೃದ್ಧಿಯಾಗಲಿದೆ-ಸುರೇಶ ನಾಯಕ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಆಲಮೇಲ
ಒಂದನೇ ವಾರ್ಡ್‌ನಲ್ಲಿ ಈಗಾಗಲೇ ಡಾಂಬರ ರಸ್ತೆ ಮಾಡಲು ಹಣ ಮೀಸಲು ಇಟ್ಟಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಪ್ರಯತ್ನ ಮಾಡುತ್ತೇನೆ–ಸಂಜೀವಕುಮಾರ ಯಂಟಮಾನ 1ನೇ ವಾರ್ಡ್ ಪ.ಪಂ.ಸದಸ್ಯ
ಎರಡು ವಸತಿ ನಿಲಯಗಳ ಮುಂದೆಯೇ ಚರಂಡಿ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ವಸತಿ ಇಲಾಖೆಯ ಅಧಿಕಾರಿಗಳು ಪ.ಪಂ. ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ- ಚಂದ್ರಶೇಖರ ಕೆಳಗಿನಮನಿ 2ನೇ ವಾರ್ಡ್ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.