ADVERTISEMENT

ಮುದ್ದೇಬಿಹಾಳ | ಪದೇ ಪದೇ ಕೈಕೊಡುವ ವಿದ್ಯುತ್: ಜನ ಹೈರಾಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 5:23 IST
Last Updated 4 ಜುಲೈ 2024, 5:23 IST
ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ   

ಮುದ್ದೇಬಿಹಾಳ: ಪಟ್ಟಣದಲ್ಲಿ ಪದೇ ಪದೇ ವಿದ್ಯುತ್ ಕೈಕೊಡುತ್ತಿರುವ ಕಾರಣ ಜನರು, ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಿಗೆ ಕೆಲಸಕ್ಕೆಂದು ಬರುವ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಪಟ್ಟಣದ ವ್ಯಾಪ್ತಿಯಲ್ಲಿ ಜನನಿಬಿಡ ಪ್ರದೇಶವಾಗಿರುವ ಹುಡ್ಕೋ ಭಾಗದಲ್ಲಿ ನಿತ್ಯವೂ ಏನಿಲ್ಲವೆಂದರೂ ಮೂರು ಬಾರಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಸಮಯದಲ್ಲಿ ಅರ್ಧ ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಒಮ್ಮೊಮ್ಮೆ ಒಂದೆರಡು ತಾಸು ಕಳೆದರೂ ವಿದ್ಯುತ್ ಪೂರೈಕೆ ಆಗುವುದಿಲ್ಲ. ಇದರಿಂದ ಸಕಾಲಕ್ಕೆ ಜನರು ತಮ್ಮ ಕೆಲಸ ಮಾಡಿಕೊಳ್ಳಲಾಗದೇ ನಿರಾಸೆಯಿಂದ ಮರಳುವ ದೃಶ್ಯ ಸಾಮಾನ್ಯವಾಗಿವೆ.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಮಹಾದ್ವಾರದಿಂದ ಹೇಮರಡ್ಡಿ ಮಲ್ಲಮ್ಮ ವೃತ್ತದವರೆಗೆ ಹೊಸ ಕೋರ್ಟ್, ರೈತ ಸಂಪರ್ಕ ಕೇಂದ್ರ, ವೀರಶೈವ ವಿದ್ಯಾವರ್ಧಕ ಸಂಘದ ಡಬ್ಬಾ ಮಳಿಗೆಗಳು, ಹುಡ್ಕೋದಲ್ಲಿರುವ ಸಮಾಜ ಕಲ್ಯಾಣ, ಕಾರ್ಮಿಕ ಇಲಾಖೆ, ಆರ್.ಡಬ್ಲ್ಯೂ.ಎಸ್., ನೀರಾವರಿ ನಿಗಮದ ಕಚೇರಿಗಳು, ಶಾಸಕ ಸಿ.ಎಸ್. ನಾಡಗೌಡ ಅವರ ನಿವಾಸದವರೆಗೆ ಒಂದಿಲ್ಲೊಂದು ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕಚೇರಿ, ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯುತ್ ನಿಲುಗಡೆ ಮಾಡುತ್ತಿರುವ ಕಾರಣ ಬಾಂಡ್ ಪೇಪರ್, ಜೆರಾಕ್ಸ್ ತೆಗೆದುಕೊಳ್ಳುವುದಕ್ಕೂ ಕಷ್ಟವಾಗಿದೆ. ರೈತರಿಗೆ ಬೆಳೆವಿಮೆ ಅರ್ಜಿ, ಉತಾರ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ.

ADVERTISEMENT

ಸದ್ಯಕ್ಕೆ ಶಾಲೆ, ಕಾಲೇಜು ಆರಂಭದ ಸಮಯವಾಗಿದೆ. ಬಸ್ ಪಾಸ್, ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಹೆಸ್ಕಾಂನಿಂದ ಆಗಾಗ ವಿದ್ಯುತ್ ಕಡಿತ ಮಾಡುತ್ತಿರುವ ಕಾರಣ ಜನರಿಗೆ ಹಾಗೂ ವಕೀಲರಿಗೆ ಕಷ್ಟವಾಗಿದೆ. ನಿಗದಿತ ಕಾಲಕ್ಕೆ ಕೋರ್ಟ್‌ಗಳಿಗೆ ದಾಖಲೆಗಳನ್ನು ಒದಗಿಸುವುದಕ್ಕೂ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.

‘ಪ್ರತಿ ತಿಂಗಳಲ್ಲಿ ಎರಡು ಮೂರು ಬಾರಿ ವಿದ್ಯುತ್ ನಿಲುಗಡೆ ಕುರಿತು ಅಧಿಕೃತ ಪ್ರಕಟಣೆ ಹೆಸ್ಕಾಂನಿಂದ ಹೊರಡಿಸಲಾಗುತ್ತದೆ. ಅದು ಹೊರತುಪಡಿಸಿದರೆ ನಿತ್ಯವೂ ಎಲ್.ಸಿ, ಲೈನ್ ಟ್ರಿಪ್ ಎಂದು ಹತ್ತಾರು ಬಾರಿ ವಿದ್ಯುತ್ ಕಡಿತಗೊಳಿಸುವ ದುರಭ್ಯಾಸ ಹೆಸ್ಕಾಂ ಅಧಿಕಾರಿಗಳಿಗೆ ಬಂದಿದೆ’ ಎಂದು ವಾಲ್ಮೀಕಿ ಸಮಾಜದ ಮುಖಂಡ ರಾಜು ವಾಲೀಕಾರ ದೂರಿದ್ದಾರೆ.

ಹುಡ್ಕೋ ಹೊರತುಪಡಿಸಿದರೆ ಇನ್ನುಳಿದ ಕಡೆಗಳಲ್ಲಿ ವಿದ್ಯುತ್ ಪೂರೈಕೆ ಇರುತ್ತದೆ. ಆದರೆ ಈ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಜನರಿಂದ ಕೇಳಿ ಬಂದಿದೆ? ಕೋರ್ಟ್ ಭಾಗದಲ್ಲಿರುವ ಹಲವಾರು ಜೆರಾಕ್ಸ್, ಆನ್‌ಲೈನ್ ಸೆಂಟರ್‌ಗಳಿಗೆ ನಿಯಮಿತವಾಗಿ ವಿದ್ಯುತ್ ಪೂರೈಕೆ ಇದ್ದಲ್ಲಿ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ, ಅರ್ಜಿ ಹಾಕಿ ಅನುಕೂಲ ಕಲ್ಪಿಸಿಕೊಡಬಹುದು. ಆದರೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆ ಕೆಲಸ ವಿಳಂಬವಾಗುತ್ತಿದೆ’ ಎಂಬ ದೂರುಗಳು ವ್ಯಾಪಕವಾಗಿವೆ.

ವಿದ್ಯುತ್ ಮಾರ್ಗಗಳನ್ನು ಸುಧಾರಿಸಿರುವುದಾಗಿ ಹಿಂದಿನ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಸಾಕಷ್ಟು ವೇದಿಕೆಗಳಿಗೆ ಬಹಿರಂಗವಾಗಿ ಭಾಷಣ ಮಾಡಿದ್ದಾರೆ. ಆದರೆ ಅಧಿಕಾರಿಗಳು ಅದರಂತೆ ವಿದ್ಯುತ್ ಮಾರ್ಗ ಸುಧಾರಿಸಿದ್ದಾರೆಯೋ ಇಲ್ಲವೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಮಳೆ–ಗಾಳಿ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳ್ಳುವುದು ಸಹಜ. ಕೆಲವೆಡೆ ಗಿಡಮರಗಳು ಬಿದ್ದಾಗ ವಿದ್ಯುತ್ ವ್ಯತ್ಯಯವಾಗುತ್ತಿರುತ್ತದೆ. ಆದರೆ ಉದ್ದೇಶಪೂರ್ವಕವಾಗಿ ವಿದ್ಯುತ್‌ ನಿಲುಗಡೆ ಮಾಡುತ್ತಿಲ್ಲ
ಎಸ್.ಎಸ್. ಪಾಟೀಲ್,ಹೆಸ್ಕಾಂ ಸೆಕ್ಷನ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.