ADVERTISEMENT

ನಿಡಗುಂದಿ: ಅಂಕಪಟ್ಟಿಯಲ್ಲಿನ ಲೋಪ ಸರಿಪಡಿಸಿದ ಪರೀಕ್ಷಾ ಮಂಡಳಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 15:20 IST
Last Updated 1 ಜೂನ್ 2024, 15:20 IST

ನಿಡಗುಂದಿ: ತಾಲ್ಲೂಕಿನ ಗೊಳಸಂಗಿ ಗ್ರಾಮದ ರಾಮಸ್ವಾಮಿ ಅಪ್ಪಣ್ಣಪ್ಪ ದಳವಾಯಿ (ಎಸ್‌ಆರ್‌ಎಡಿ) ಪ್ರೌಢಶಾಲೆಯ ವಿದ್ಯಾರ್ಥಿ ಸುಮಂತ ಡಿ. ಕುಪ್ಪಸ್ತ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉಂಟಾಗಿದ್ದ ಲೋಪವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶನಿವಾರ ಸರಿಪಡಿಸಿದೆ.

ಸುಮಂತಗೆ ಸಮಾಜ ವಿಜ್ಞಾನ ವಿಷಯದಲ್ಲಿ ಆಂತರಿಕ ಅಂಕ ಹೊರತುಪಡಿಸಿ ಕೇವಲ 30 ಅಂಕ ಮಾತ್ರ ಲಭಿಸಿತ್ತು. ಇದರಿಂದ ಆಘಾತಗೊಂಡಿದ್ದ ವಿದ್ಯಾರ್ಥಿ ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿ ಪರಿಶೀಲಿಸಿದಾಗ ಆಂತರಿಕ ಅಂಕ ಬಿಟ್ಟು 77 ಅಂಕ ಲಭಿಸಿರುವುದು ತಿಳಿಯಿತು. ಆದರೆ ಮರುಮೌಲ್ಯಮಾಪನದ ಅವಧಿ ಮೀರಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿತ್ತು.

ಈ ಕುರಿತು ‘ಪ್ರಜಾವಾಣಿ’ ಗುರುವಾರ ಸುದ್ದಿ ಪ್ರಕಟಿಸಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ಅವರು ಗೊಳಸಂಗಿ ಎಸ್‌ಆರ್‌ಎಡಿ ಮುಖ್ಯಶಿಕ್ಷಕ ಎಸ್.ಎಂ.ತಾವರಖೇಡ ಅವರಿಗೆ ಶನಿವಾರ ಕರೆ ಮಾಡಿ, ಸುಮಂತ ಕುಪ್ಪಸ್ತನ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿನ ಲೋಪವನ್ನು ಸರಿಪಡಿಸಲಾಗಿದ್ದು, ತಾತ್ಕಾಲಿಕ ಅಂಕಪಟ್ಟಿ ರವಾನಿಸಲಾಗಿದೆ  ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.