ADVERTISEMENT

ವಿಜಯಪುರ: ಸಂತಾನೋತ್ಪತ್ತಿಗೆ ದೇಸಿ–ವಿದೇಶಿ ಹಕ್ಕಿಗಳ ದಾಂಗುಡಿ

12 ವರ್ಷಗಳಿಂದ ಆಹಾರ, ಸಂತಾನೋತ್ಪತ್ತಿಗೆ ಆಗಮಿಸುತ್ತಿರುವ ಪಕ್ಷಿಗಳು

ಪ್ರಜಾವಾಣಿ ವಿಶೇಷ
Published 22 ಫೆಬ್ರುವರಿ 2024, 4:23 IST
Last Updated 22 ಫೆಬ್ರುವರಿ 2024, 4:23 IST
ವಿಜಯಪುರ ನಗರದಲ್ಲಿರುವ ಕಲ್ಲಿನ‌ ಗಣಿಯ ನಡುಗಡ್ಡೆಯಲ್ಲಿನ ಜಾಲಿ ಗಿಡಗಳ ಮೇಲೆ ಕುಳಿತಿರುವ ಪಕ್ಷಿಗಳು
ವಿಜಯಪುರ ನಗರದಲ್ಲಿರುವ ಕಲ್ಲಿನ‌ ಗಣಿಯ ನಡುಗಡ್ಡೆಯಲ್ಲಿನ ಜಾಲಿ ಗಿಡಗಳ ಮೇಲೆ ಕುಳಿತಿರುವ ಪಕ್ಷಿಗಳು   

ವಿಜಯಪುರ: ಚಳಿಗಾಲದ ಸಮಯದಲ್ಲಿ ಉತ್ತರಭಾರತ ಹಾಗೂ ವಿದೇಶಗಳಿಂದ ಹಕ್ಕಿಗಳು ದಕ್ಷಿಣ ಭಾರತಕ್ಕೆ ವಲಸೆ ಬರುವುದು ಸಾಮಾನ್ಯ. ಆದರೇ ಬರದ ನಾಡು ಎಂದು ಕರೆಸಿಕೊಳ್ಳುವ ವಿಜಯಪುರಕ್ಕೆ ದೇಶ ಹಾಗೂ ವಿದೇಶಗಳಿಂದ ಹಕ್ಕಿಗಳು ದಾಂಗುಡಿ ಇಟ್ಟಿರುವುದು ಪಕ್ಷಿ ಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. 

ಹಿಮಾಲಯ ಪ್ರದೇಶಗಳಲ್ಲಿ ಚಳಿಗಾಲದ ಸಮಯದಲ್ಲಿ ವಿಪರೀತ ಹಿಮ ಬೀಳುವುದರಿಂದ ಹಕ್ಕಿಗಳಿಗೆ ಆಹಾರದ ಅಭಾವ ಉಂಟಾಗುತ್ತದೆ. ಚಳಿಯಿಂದ ತಪ್ಪಿಸಿಕೊಳ್ಳಲು ಹಕ್ಕಿಗಳು ವಲಸೆ ಬರುತ್ತವೆ. ಚಳಿಗಾಲ ಆರಂಭದಿಂದ ಮಾರ್ಚ್ ಅಂತ್ಯದವರೆಗೆ ಇಲ್ಲಿಯೇ ಇದ್ದು ಸಂತಾನೋತ್ಪತ್ತಿ ಮಾಡಿ ಬಳಿಕ ಸ್ವದೇಶಕ್ಕೆ ಮರಳುತ್ತವೆ.

ನಗರದ ಪ್ರಮುಖ ಸ್ಥಳಗಳಲ್ಲಿ ಒಂದಾದ, ಸುತ್ತಲೂ ಸದಾ ಜನಜಂಗುಳಿ ಹೊಂದಿರುವ ನಗರದ ಆಶ್ರಮ ರಸ್ತೆಯ ಬಿಎಲ್‌ಡಿಇ ಎಂಜಿನಿಯರಿಂಗ್‌ ಕಾಲೇಜಿನ ಸಮೀಪ ಬೃಹತ್ ಕಲ್ಲಿನ‌ ಗಣಿಯಲ್ಲಿ ನಗರದ ತ್ಯಾಜ್ಯ ನೀರು ಸದಾ ತುಂಬಿಕೊಂಡಿರುವುದರಿಂದ ಕೆರೆಯಂತೆ ಭಾಸವಾಗುತ್ತದೆ. ಪಾಲಿಕೆಯ ನಿರ್ಲಕ್ಷ್ಯದಿಂದ ಈ ಗಣಿಯ ತುಂಬ ಪಾಚಿ ಆವರಿಸಿಕೊಂಡಿದ್ದರೂ, ಹಕ್ಕಿಗಳು ಕಳೆದ 12 ವರ್ಷಗಳಿಂದ ಆಹಾರ ಹಾಗೂ ಸಂತಾನೊತ್ಪತ್ತಿಗಾಗಿ ಇಲ್ಲಿಗೆ ಬರುತ್ತಿರುವುದು ವಿಪರ್ಯಾಸ. ಕಲ್ಲಿನ ಗಣಿ ಸದ್ಯಕ್ಕೆ ಪಕ್ಷಿಧಾಮವಾಗಿ ಪರಿವರ್ತನೆಯಾಗಿದೆ. 

ADVERTISEMENT

ರಾಜ್ಯದಾದ್ಯಂತ ಸರಿಯಾಗಿ ಮಳೆಯಾಗದೇ ಬರ ಆವರಿಸಿದೆ. ಎಲ್ಲೆಡೆ ನೀರಿನ ಅಭಾವ ಉಂಟಾಗಿದೆ. ಕೆಲವೆಡೆ ಪ್ರಾಣಿ, ಪಕ್ಷಿಗಳಿಗೆ ಕುಡಿಯಲೂ ನೀರಿಲ್ಲ. ಇಂಥ ಸ್ಥಿತಿಯಲ್ಲಿ ಪಕ್ಷಿಗಳು ನೀರು ಮತ್ತು ಆಹಾರ ಅರಸಿ ಸೂಕ್ತ ಪರಿಸರ ಹುಡುಕಿ ಬಿಡಾರ ಹೂಡುತ್ತವೆ. 

ಕಲ್ಲಿನ ಗಣಿಯ ಸುತ್ತ ನಾಲ್ಕು ದಿಕ್ಕುಗಳಲ್ಲೂ ಜಾಲಿ ಗಿಡಗಳು ಆವರಿಸಿವೆ. ಇದರಿಂದ ಸಾರ್ವಜನಿಕರು ಇತ್ತ ಬರುವುದು ವಿರಳ. ಪ್ರಶಾಂತ ವಾತಾವರಣ ಬಯಸುವ ಹಕ್ಕಿಗಳಿಗೆ ಈ ಸ್ಥಳ ಸೂಕ್ತ ಎನಿಸಿದೆ. ವಿಸ್ತಾರವಾಗಿರುವ ಈ ಗಣಿಯ ನಡುಗಡ್ಡೆಯಲ್ಲಿ ಬೆಳೆದಿರುವ ವಿಶಾಲ ಜಾಲಿ ಗಿಡಗಳ ಮೇಲೆ ಪಕ್ಷಿಗಳು ಅಹಾರಕ್ಕಾಗಿ ಕಾದು ಕುಳಿತಿರುವುದನ್ನು ಕಾಣುವುದೇ ಚಂದ.

ವಿವಿಧ ಜಾತಿಯ ಬಾತುಕೋಳಿ, ಕೊಕ್ಕರೆ, ಬೆಳ್ಳಕ್ಕಿ, ಬಿಳಿ ಹಾಗೂ ಕರಿ ಬಣ್ಣದ ಕೆಂಬರಲು, ಟಿಟ್ಟಿಭ, ಲಗಡ ಮುಂತಾದ ಪಕ್ಷಿಗಳ ಚಿನ್ನಾಟವನ್ನೂ ಕಣ್ತುಂಬಿಕೊಳ್ಳಬಹುದು.

ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿನ ಬಿಎಲ್‌ಡಿಇ ಎಂಜಿನಿಯರಿಂಗ್‌ ಕಾಲೇಜು ಸಮೀಪ ಇರುವ ಬೃಹತ್ ಕಲ್ಲಿನ‌ ಗಣಿಯಲ್ಲಿ ತ್ಯಾಜ್ಯ ನೀರು ನಿಂತಿರುವ ದೃಶ್ಯ
ಬೇಟೆಗಾಗಿ ಕಾದು ಕುಳಿತಿರುವ ಪೇಂಟೆಡ್‌ ಸ್ಟಾರ್ಕ್‌ (ಬಣ್ಣದ ಕೊಕ್ಕರೆ)
ಬೇಟೆಗಾಗಿ ಕಾದು ಕುಳಿತಿರುವ ಗ್ರೇ ಹೆರಾನ್‌ (ಬೂದು ಕೊಕ್ಕರೆ)
ಬಣ್ಣದ ಕೊಕ್ಕರೆ
ಗ್ರೇ ಹೆರಾನ್‌

ಬಣ್ಣದ ಕೊಕ್ಕರೆ

ಇಲ್ಲಿಗೆ ವಲಸೆ ಬಂದಿರುವ ಪ್ರಮುಖ ಹಕ್ಕಿಗಳಲ್ಲಿ ಹಿಮಾಲಯದಲ್ಲಿ ಕಾಣಸಿಗುವ ಪೇಂಟಡ್‌ ಸ್ಟಾರ್ಕ್ಸ್‌ (ಬಣ್ಣದ ಕೊಕ್ಕರೆ) ಪಾಕಿಸ್ತಾನ ಬಾಂಗ್ಲಾದೇಶ ಹಾಗೂ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುವ ಗ್ರೇ ಹೆರಾನ್ಸ್‌ ಭಾರತದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ಗ್ರೇ ಹೆಡೆಡ್‌ ಸ್ವಾಂಫೆನ್‌ ಪಕ್ಷಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿಯೇ ಬಿಡಾರ ಹೂಡಿವೆ. ಸಣ್ಣ ಮೀನುಗಳನ್ನು ಬೇಟೆಯಾಡಿ ಮರಗಳ ಮೇಲೆ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ. ಮರಿಗಳು ಹಾರಾಡಲು ಆರಂಭಿಸಿದ ನಂತರ ಸ್ವದೇಶಕ್ಕೆ ಮರಳುತ್ತವೆ.

ಕಲ್ಲಿನ ಗಣಿ ಅಭಿವೃದ್ಧಿಯಾಗಲಿ

ಬಿಎಲ್‌ಡಿಇ ಎಂಜಿನಿಯರಿಂಗ್‌ ಕಾಲೇಜು ಸಮೀಪ ಇರುವ ಬೃಹತ್ ಕಲ್ಲಿನ‌ ಗಣಿಯನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಅಭಿವೃದ್ಧಿ ಪಡಿಸಬೇಕಿದೆ. ದೇಶ–ವಿದೇಶ ಹಕ್ಕಿಗಳ ತಾಣವಾಗುತ್ತಿರುವ ಈ ಸ್ಥಳ ಅಭಿವೃದ್ಧಿ ಹೊಂದಬೇಕಿದೆ ಎನ್ನುತ್ತಾರೆ ವೈದ್ಯಾಧಿಕಾರಿ ಪಕ್ಷಿಪ್ರೇಮಿ ಡಾ.ರಮೇಶ ರಾಠೋಡ. ಸದಾ ಬರಗಾಲದಿಂದ ತತ್ತರಿಸಿ ಪಕ್ಷಿ ಸಂಕುಲ ಗಣನೀಯವಾಗಿ ಕಡಿಮೆಯಾಗಿರುವ ಸಂದರ್ಭದಲ್ಲಿ ಹಕ್ಕಿಗಳು ಆಗಮಿಸುತ್ತಿರುವುದು ಸಂತಸದ ವಿಷಯ. ಈ ತಾಣ ಅಭಿವೃದ್ಧಿಗೊಂಡರೆ ಜೀವ ವೈವಿಧ್ಯ ಉಳಿಸಿದಂತಾಗುತ್ತದೆ. ರಾಜ್ಯದ ಪಕ್ಷಿ ಪ್ರೇಮಿಗಳು ಹಾಗೂ ಪ್ರವಾಸಿಗರನ್ನೂ ಆಕರ್ಷಿಸಿದಂತಾಗುತ್ತದೆ ಎನ್ನುತ್ತಾರೆ ಅವರು. ಈ ಕಲ್ಲಿನ ಗಣಿ ನಿರ್ಲಕ್ಷ್ಯಕ್ಕೆ ಗುರಿಯಾಗಿ ತ್ಯಾಜ್ಯ ಎಸೆಯುವ ಬ್ಲ್ಯಾಕ್‌ ಪಾಯಿಂಟ್‌ ಆಗಿ ಪರಿವರ್ತನೆಯಾಗಿದೆ. ಇಲ್ಲಿ ಪಕ್ಷಿ ಸಂಕುಲ ಉಳಿಯಬೇಕಾದರೆ ಇಲ್ಲಿ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಬೇಕು. ಕಲ್ಲಿನ ಗಣಿಯ ಸುತ್ತ ಸುಸಜ್ಜಿತ ಕಾಂಪೌಂಡ್‌ ನಿರ್ಮಿಸಬೇಕು. ನೀರು ಖಾಲಿಯಾಗದಂತೆ ಕ್ರಮ ಕೈಗೊಳ್ಳಬೇಕು. ಗಣಿಯ ಸುತ್ತ ಬಹು ಮಹಡಿ ಕಟ್ಟಡ ತಲೆ ಎತ್ತದಂತೆ ನೋಡಿಕೊಳ್ಲಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷಿಗಳ ಸೂಕ್ಷ್ಮತೆ ಅರಿತು ಸಹಕರಿಸಿ ಹಿಮದ ನಾಡಿನಿಂದ ಬರದ ನಾಡಿಗೆ ಪಕ್ಷಿಗಳು ಆಗಮಿಸಿದ್ದೇ ನಮ್ಮ ಅದೃಷ್ಟ. ಈ ಪಕ್ಷಿಗಳು ಪ್ರತಿ ವರ್ಷ ಬರಬೇಕೆಂದರೆ ಅವುಗಳ ಸೂಕ್ಷ್ಮತೆ ಅರಿತು ಸಹಕಾರ ನೀಡಬೇಕು. ಮಹಾನಗರ ಪಾಲಿಕೆ ಕಲ್ಲಿನ ಗಣಿಯನ್ನು ಪಕ್ಷಿಸಂಕುಲದ ತಾಣವಾಗಿ ನಿರ್ಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ನಿವೃತ್ತ ಮುಖ್ಯ ಯೋಜನಾಧಿಕಾರಿ ಎಂ.ಡಿ. ಪವಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.