ADVERTISEMENT

ಜನೌಷಧ ಕೇಂದ್ರ ಗ್ರಾಮಗಳಿಗೆ ವಿಸ್ತರಣೆ: ಎಸ್‌.ಟಿ.ಸೋಮಶೇಖರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 13:28 IST
Last Updated 20 ನವೆಂಬರ್ 2020, 13:28 IST
ವಿಜಯಪುರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ಅಗ್ಗದ ದರದಲ್ಲಿ ಔಷಧ ಒದಗಿಸುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ನಗರ, ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದ್ದು, ಅವುಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು ಸಹಕಾರ ಇಲಾಖೆ ಉದ್ದೇಶಿಸಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಥಮ ಹಂತವಾಗಿ ರಾಜ್ಯದ 600 ಹಳ್ಳಿಗಳಲ್ಲಿ ಜನೌಷಧ ಕೇಂದ್ರ ಆರಂಭಿಸಲಾಗುವುದು ಎಂದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ರಾಜ್ಯದಲ್ಲೇ ನಂಬರ್‌ ಒನ್‌ ಬ್ಯಾಂಕ್‌ ಆಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ವರ್ಷ ₹ 1200 ಕೋಟಿ ಸಾಲ ನೀಡಲು ಉದ್ದೇಶಿಸಿದ್ದು, ಈಗಾಗಲೇ ₹ 600 ಕೋಟಿ ಸಾಲ ನೀಡಿದೆ ಎಂದು ಹೇಳಿದರು.

ADVERTISEMENT

ಸಹಕಾರ ಕ್ಷೇತ್ರದಲ್ಲಿ ಕರ್ನಾಟಕವು ದೇಶದಲ್ಲೇ ನಂಬರ್‌ ಒನ್‌ ಆಗಿದೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ₹ 53 ಕೋಟಿ ನಿಧಿಯನ್ನು ಸಹಕಾರ ಸಂಸ್ಥೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. 42,540 ಆಶಾ ಕಾರ್ಯಕರ್ತೆಯರಿಗೆ ತಲಾ ₹ 3 ಸಾವಿರದಂತೆ ಒಟ್ಟು ₹12.75 ಕೋಟಿ ನೆರವು ನೀಡಿದ್ದೇವೆ ಎಂದು ತಿಳಿಸಿದರು.

ಕೋವಿಡ್‌ ಸಂದರ್ಭದಲ್ಲಿವಿವಿಧ ಹಾಲು ಒಕ್ಕೂಟಗಳ ಮೂಲಕ 2.11 ಕೋಟಿ ಲೀಟರ್‌ ಹಾಲನ್ನು ಉಚಿತವಾಗಿ ಬಡವರಿಗೆ, ಕೊಳೆಗೇರಿ ನಿವಾಸಿಗಳಿಗೆ ವಿತರಿಸಿದ್ದೇವೆ ಎಂದು ಹೇಳಿದರು.

ಸಹಕಾರಿ ಹಾಲು ಒಕ್ಕೂಟ, ಸಹಕಾರ ಬ್ಯಾಂಕುಗಳ ಮೂಲಕ 5 ಸಾವಿರ ಜನ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಆತ್ಮ ನಿರ್ಭರ ಯೋಜನೆಯಡಿ ಸಹಕಾರ ಇಲಾಖೆಗೆ ₹ 625 ಕೋಟಿ ನೆರವು ನೀಡುವಂತೆಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ನೆಹರೂ ಸ್ಮರಣೆ:

ಶಾಸಕ ಯಶವಂತ ರಾಯಗೌಡ ಪಾಟೀಲ ಮಾತನಾಡಿ, ನೆಹರೂ ಜನ್ಮ ದಿನವನ್ನು ದೇಶದಾದ್ಯಂತ ಒಂದು ವಾರಗಳ ಕಾಲ ಸಹಕಾರಿ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ವರ್ಗೀಸ್‌ ಕುರಿಯನ್‌ ಮತ್ತು ಶರದ್‌ ಪವಾರ್‌ ಈ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕರು ಇದ್ದಾಗ ಮಾತ್ರ ಬೆಳೆಯಲು ಸಾಧ್ಯ. ಸರ್ಕಾರ ಮಾಡದ ಕೆಲಸವನ್ನು ಸಹಕಾರಿ ಕ್ಷೇತ್ರದಿಂದ ಆಗಿದೆ ಎಂದು ಶ್ಲಾಘಿಸಿದರು.

ಯತ್ನಾಳ ವಿರೋಧ:

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ನೆಹರೂ ಕೊಡುಗೆ ಏನೂ ಇಲ್ಲ. ಅಮುಲ್‌ನಲ್ಲಿ ಕುರಿಯನ್‌ ಜಾತಿರಾಜಕಾರಣ ಮಾಡಿದರು. ಕೆಲವೊಂದು ಮಂದಿ ತಮಗೆ ತಾವು ಪುಸ್ತಕ ಬರೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಯಶವಂತರಾಯಗೌಡರ ಮಾತಿಗೆ ವಿರೋಧ ವ್ಯಕ್ತಪಡಿಸಿದರು.

‘ಸಹಕಾರ ರತ್ನ’ ಪ್ರಶಸ್ತಿಯನ್ನು ಅರ್ಹರಿಗೆ ನೀಡಬೇಕು ಎಂದ ಅವರು, ಗೌರವ ಡಾಕ್ಟರೇಟ್‌ ಮತ್ತು ಸಹಕಾರ ರತ್ನ ಪ್ರಶಸ್ತಿಯನ್ನು ಎಂದಿಗೂ ನಾನು ಪಡೆಯುವುದಿಲ್ಲ ಎಂದು ಹೇಳಿದರು.

ಸಹಕಾರ ಕ್ಷೇತ್ರ ಬೆಳೆಯಬೇಕಾದರೆ ಹಳೆಯ ಕಾಯ್ದೆಗಳಿಗೆ ತಿದ್ದುಪಡಿಯಾಗಬೇಕು. ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸಲು ಕನಿಷ್ಠ ಮೂರು ಸಾಮಾನ್ಯಸಭೆಗೆ ಹಾಜರಾಗಬೇಕು ಎಂಬ ನಿಯಮ ತೆಗೆದುಹಾಕಬೇಕು ಎಂದರು.

ಶಾಸಕ ಎಂ.ಸಿ.ಮನಗೂಳಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ವಿಜಯಪುರ–ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಎಸ್‌.ಎಸ್‌.ಮಿಸಾಳೆ, ನಂದಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ವಿಜಯಪುರ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕಿ ಸಂಯುಕ್ತಾ ಪಾಟೀಲ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ.ಚಿಕ್ಕಾಡಿ, ವಿಜಯಪುರ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪಿ.ಬಿ.ಕಾಳಗಿ ಉಪ‍ಸ್ಥಿತರಿದ್ದರು.

ಮರು ಜೋಡಣೆಯಾಗಲಿ: ಶಿವಾನಂದ ಪಾಟೀಲ

ವಿಜಯಪುರ: ಸಹಕಾರ ಇಲಾಖೆಯಿಂದ ಈಗಾಗಲೇ ಪ್ರತ್ಯೇಕಗೊಳಿಸಲಾಗಿರುವ ವಿವಿಧ ಇಲಾಖೆಗಳನ್ನು ಮರು ಜೋಡಣೆ ಮಾಡಬೇಕಾದ ಅಗತ್ಯವಿದೆ ಎಂದು ಶಾಸಕ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ ಪ್ರತಿಪಾದಿಸಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಮಾರಂಭಕ್ಕೆ ವಿವಿಧ ದೇಶದ ಸಹಕಾರಿ ಸಾಧರಕನ್ನು ಆಹ್ವಾನಿಸುವ ಉದ್ದೇಶವಿದೆ ಎಂದರು.

ಸಹಕಾರ ಚಳವಳಿ ಹುಟ್ಟಿದ್ದು ಅಖಂಡ ಧಾರವಾಡ ಜಿಲ್ಲೆಯಲ್ಲಾದರೂ ಅದು ಬೆಳೆದಿರುವುದು ವಿಜಯಪುರ ಜಿಲ್ಲೆಯಲ್ಲಿ. ಹಾಲು ಉತ್ಪಾದನೆಯಲ್ಲಿ ಇತರೆ ಒಕ್ಕೂಟಗಳಿಗಿಂತ ವಿಜಯಪುರ ಹಾಲು ಒಕ್ಕೂಟ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.