ADVERTISEMENT

ತಾಳಿಕೋಟೆ: ಜಮೀನು ದಾರಿಗಾಗಿ ಆಗ್ರಹಿಸಿ ಆಮರಣ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:57 IST
Last Updated 25 ಜೂನ್ 2024, 15:57 IST
ತಾಳಿಕೋಟೆ ತಾಲ್ಲೂಕಿನ ಗೊಟಗುಣಕಿ ಗ್ರಾಮದ ಸರ್ವೆ ನಂಬರ್ 55/1, 55/2 ಜಮೀನಿಗೆ ಹೋಗಲು ದಾರಿ ಬಂದ್‌ ಮಾಡಿ, ಮಣ್ಣಿನ ದಿಬ್ಬು ಹಾಕಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮದ ರೈತ ಸಾಹೇಬಗೌಡ ಬಿರಾದಾರ ಮತ್ತು ಇತರರು ಮಂಗಳವಾರ ಆಮರಣ ಉಪವಾಸ ನಡೆಸಿದರು
ತಾಳಿಕೋಟೆ ತಾಲ್ಲೂಕಿನ ಗೊಟಗುಣಕಿ ಗ್ರಾಮದ ಸರ್ವೆ ನಂಬರ್ 55/1, 55/2 ಜಮೀನಿಗೆ ಹೋಗಲು ದಾರಿ ಬಂದ್‌ ಮಾಡಿ, ಮಣ್ಣಿನ ದಿಬ್ಬು ಹಾಕಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮದ ರೈತ ಸಾಹೇಬಗೌಡ ಬಿರಾದಾರ ಮತ್ತು ಇತರರು ಮಂಗಳವಾರ ಆಮರಣ ಉಪವಾಸ ನಡೆಸಿದರು   

ತಾಳಿಕೋಟೆ: ತಾಲ್ಲೂಕಿನ ಗೊಟಗುಣಕಿ ಗ್ರಾಮದ ಸರ್ವೆ ನಂಬರ್ 55/1, 55/2 ಈ ಜಮೀನುಗಳಿಗೆ ಹೋಗಲು ದಾರಿ ಬಂದ್‌ ಮಾಡಿದ್ದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ. ದಾರಿ ಮಧ್ಯದಲ್ಲಿ ಮಣ್ಣಿನ ದಿಬ್ಬು ಹಾಕಿದ್ದು, ಕೂಡಲೇ ತೆರವುಗೊಳಿಸಿ ದಾರಿ ಮಾಡಿಕೊಡುವ ತನಕ ಆಮರಣ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಸಾಹೇಬಗೌಡ ಬಿರಾದಾರ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ಮಾತನಾಡಿದರು.

ಕಳೆದ ತಿಂಗಳು ಅಹೋ ರಾತ್ರಿ ಧರಣಿ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ತಹಶೀಲ್ದಾರ್‌ ಆಗಮಿಸಿ ದಾರಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆಗ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಗಿತ್ತು. ಮತ್ತೆ ಜಮೀನಿಗೆ ತೆರಳಲು ದಾರಿ ಸಮಸ್ಯೆಯಾಗುತ್ತಿದೆ. ಹಾಗಾಗಿ ಮತ್ತೆ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದರು.

ADVERTISEMENT

ಬಿತ್ತನೆ ಕಾರ್ಯ ಜೋರು ನಡೆದಿದ್ದು, ಬಹುತೇಕ ರೈತರ ಬಿತ್ತನೆ ಮುಗಿಯುವ ಹಂತದಲ್ಲಿದೆ. ಆದರೆ ನನ್ನ ಜಮೀನಿಗೆ ಹೋಗಲು ದಾರಿ ಇಲ್ಲದ ಕಾರಣ ಬಿತ್ತನೆ ಮಾಡಲಾಗಿಲ್ಲ. ಹೀಗಾದರೆ ಒಂದು ವರ್ಷ ಕುಟುಂಬ ಬದಕುವುದಾದರು ಹೇಗೆ ಎಂದು ಅಳಲು ತೋಡಿಕೊಂಡರು.

ಆಮರಣ ಉಪವಾಸ ಕೈಬಿಡುವುದಿಲ್ಲ. ಪ್ರಾಣ ತ್ಯಾಗಕ್ಕೂ ಸಿದ್ದ. ಜೀವಕ್ಕೆ ಏನಾದರೂ ಹಾನಿಯಾದಲ್ಲಿ ಜಮೀನಿಗೆ ದಾರಿ ಕೊಡದ ರೈತರು ಹಾಗೂ ತಾಲ್ಲೂಕು ಆಡಳಿತವೇ ನೇರ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದಾರೆ.

ಅನೀಲಕುಮಾರ ಕಾಜಾಪೂರ, ಶಂಕ್ರೆಮ್ಮ ರಾಜಾಪುರ, ಶೈಲಶ್ರೀ ಬಾರಾದಾರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.