ಹೊರ್ತಿ: ಹಲವು ದಿನಗಳ ಹಿಂದೆ ಬಿತ್ತನೆ ಮಾಡಿದ ತೊಗರಿ ಬೆಳೆ ತಲೆ ಎತ್ತರಕ್ಕೆ ಮತ್ತೆ ಕೆಲವು ಹೊಲದಲ್ಲಿ ಎದೆ ಮಟ್ಟಕ್ಕೆ ಬೆಳೆದು ನಿಂತಿವೆ. ಮೇಲಿಂದ ಮೇಲೆ ಮಳೆ ಹನಿ ಉದುರುತ್ತಿರುವುದರಿಂದ ಬೆಳೆಗಳ ನಡುವೆ ಬೆಳೆದಿರುವ ಕಳೆ ತೆಗೆಯುವುದು ಕಷ್ಟಕರವಾಗಿದೆ.
ಎತ್ತುಗಳು ಹೊಲದಲ್ಲಿ ತಿರುಗಾಡುವುದು ಕಷ್ಟಕರವಾದ್ದರಿಂದ ಎಡೆ ಕುಂಟೆ ಹೊಡೆಯಲಾಗದೇ, ಕೆಲವು ಕಡೆಯ ತೊಗರಿ ಹಾಗೂ ಇತರ ಬೆಳೆಗಳಲ್ಲಿ ಕಳೆಯೇ ಎದ್ದು ಕಾಣುವಂತಾಗಿದೆ. ಕೀಟಬಾಧೆಯಿಂದ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದು, ಫಸಲು ಕೈ ಸೇರುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ರೈತರು ಬೆಳೆಗೆ ಕೀಟ ನಾಶಕ ಸಿಂಪಡಿಸಲು ಹಾಗೂ ಉತ್ತಮ ಇಳುವರಿಗಾಗಿ ಔಷಧ ಸಿಂಪಡಣೆ ಮಾಡಲು ಡ್ರೋನ್ ಮೊರೆ ಹೋಗಿದ್ದಾರೆ.
ಒಂದು ವಾರದಿಂದ ಮಳೆಯು ಬಿಡುವು ನೀಡಿದ್ದರಿಂದ ಕೂಲಿಕಾರರಿಗೆ ದುಂಬಾಲು ಬಿದ್ದು ಅವರು ಹೇಳಿದಷ್ಟು ಹಣ ನೀಡಿ ಕ್ರಿಮಿನಾಶಕ ಸಿಂಪಡಿಸಿ ಬೆಳೆ ರಕ್ಷಣೆ ಮಾಡಿಕೊಂಡಿದ್ದಾರೆ. ಇದೀಗ ಎರಡು ದಿನಗಳಿಂದ ಅಲ್ಲೊಂದು ಇಲ್ಲೊಂದು ಹನಿಮಳೆ ಆರಂಭವಾಗಿದೆ. ಇದರಿಂದ ಬೆಳೆಗಳಿಗೆ ತಾಮ್ರ, ಹಳದಿ, ಬೂದು ಸೇರಿ ಮತ್ತಿತರ ಹಲವು ರೋಗಗಳ ಹಾವಳಿಯೂ ಆರಂಭವಾಗಿದೆ. ಬೆಳೆಗಳ ಮಧ್ಯ ವಿಷ ಜಂತುಗಳಿರುವ ಭಯವೂ ಇದೆ. ಹೀಗಾಗಿ ಕೆಲವು ಪ್ರಗತಿಪರ ರೈತರು ತಮ್ಮ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆಯುವ ತೊಗರಿ ಬೆಳೆಗಳನ್ನು ಕೀಟಗಳಿಂದ ರಕ್ಷಿಸಿಕೊಳ್ಳಲು ಡ್ರೋನ್ ಸಹಾಯ ಪಡೆದಿದ್ದಾರೆ.
‘ಡ್ರೋನ್ ಮೂಲಕ ಪ್ರತಿ ಎಕರೆ ಬೆಳೆಗೆ ಕೀಟನಾಶಕ ಸಿಂಪಡಣೆಗೆ ₹ 500 ಪಡೆಯುತ್ತಿದ್ದು, 10 ಎಕರೆ ಪ್ರದೇಶದಲ್ಲಿ ಕೀಟ ನಾಶಕ ಹಾಗೂ ಔಷಧ ಸಿಂಪಡಣೆಗೆ ಡ್ರೋನ್ ಬಳಸಲಾಗಿದೆ’ ಎನ್ನುತ್ತಾರೆ ಚಡಚಣ ತಾಲ್ಲೂಕಿನ ಡ್ರೋನ್ ಪೈಲಟ್ ಅಪ್ಪು ಮ. ಎಳೆಗಾಂವ.
₹ 8 ಲಕ್ಷ ಬೆಲೆ ಬಾಳುವ ಡ್ರೋನ್ ನಿರ್ವಹಣೆಗೆ ಮೂವರ ತಂಡ ನಿರಂತರ ಕೆಲಸ ಮಾಡಬೇಕಾಗುತ್ತದೆ. ಒಂದು ಜೀಪ್‌ನಲ್ಲಿ 1 ಡ್ರೋನ್, 1 ಪೆಟ್ರೋಲ್ ಜನರೇಟರ್ ಅದಕ್ಕೆ ಚಾರ್ಜ್ ಮಾಡಲು 2 ಸೆಟ್ ಬ್ಯಾಟರಿ ಇರುತ್ತದೆ. 3 ಜನ ತಂಡದೊಂದಿಗೆ ಈ ಡ್ರೋನ್ 10 ಲೀಟರ್ ತೂಕದ ಔಷಧ ಅಥವಾ ಕೀಟನಾಶಕವನ್ನು ಹೊತ್ತು 1 ಎಕರೆ ತೊಗರಿ ಬೆಳೆಗೆ ಸಿಂಪಡಣೆ ಮಾಡಬಲ್ಲದು. ನಂತರ ಮತ್ತೆ ಅದಕ್ಕೆ ಚಾರ್ಜ್ ಬ್ಯಾಟರಿ ಹಾಕಿ ಮತ್ತೆ 10 ಲೀಟರ್ ಹಾಕಿ ಬಳಸಲಾಗುತ್ತದೆ.
ಸಮಯದ ಉಳಿತಾಯ ಸಾಧ್ಯ
ಇದೇ ಮೊದಲ ಬಾರಿಗೆ ಇಂಚಗೇರಿ ಗ್ರಾಮದಲ್ಲಿ ತೊಗರಿ ಬೆಳೆಗೆ ಕೀಟ ನಾಶಕ ಹಾಗೂ ಔಷಧ ಸಿಂಪಡಣೆಗೆ ಡ್ರೋನ್ ತಂತ್ರಜ್ಞಾನ ಬಳಸಲಾಗಿದೆ. ಇದರಿಂದ ಸಮಯದ ಉಳಿತಾಯವಾಗಿದೆ. ನೀರು ಕಡಿಮೆ ಬಳಕೆಯಾಗುತ್ತಿದೆ. ಔಷಧ ಕೂಡ ಹಾಳಾಗುವುದು ಕಡಮೆ. ವಿಷಜಂತುಗಳ ಭಯವಿಲ್ಲದೇ ಬೆಳೆಗಳನ್ನು ಕೀಟಗಳಿಂದ ರಕ್ಷಿಸಿಕೊಳ್ಳಬಹುದು. ಮಹಾದೇವ ಬನ್ನಿ ಇಂಚಗೇರಿರೈತ ಔಷಧ ಪ್ರಮಾಣ ಕಡಿಮೆ ‘ಗುಡ್ಡಗಾಡು ಪ್ರದೇಶದಲ್ಲಿ ಗುಂಡು ಕಲ್ಲುಗಳು ಹಾಗೂ ಗಿಡಗಂಟಿಗಳಿರುವ ಹೊಲಗಳಲ್ಲಿ ಈ ಡ್ರೋನ್ ಬಳಕೆ ಮಾಡುವುದು ಕಷ್ಟದಾಯಕ. ಅದರೂ ಭಾನುವಾರ 10 ಎಕರೆ ಪ್ರದೇಶದಲ್ಲಿ ಔಷಧ ಸಿಂಪಡಿಸಲಾಗಿದೆ. ಇದರಿಂದ ಸಮಯದ ಉಳಿತಾಯ ನೀರು ಮತ್ತು ಔಷಧ ಕೂಡ ಕಡಿಮೆ ಬಳಕೆಯಾಗುತ್ತದೆ. ಅಪ್ಪು ಮಲಕಪ್ಪ ಎಳೆಗಾಂವ ಡ್ರೋನ್ ಪೈಲಟ್ ತದ್ದೇವಾಡಿ ಚಡಚಣ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.