ADVERTISEMENT

ಎಂಬಿಬಿಎಸ್‌ ಕಲಿಕೆಗೆ ಆರ್ಥಿಕ ನೆರವು

ಇಬ್ಬರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಶುಲ್ಕ ಭರಿಸಿದ ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 15:48 IST
Last Updated 16 ಸೆಪ್ಟೆಂಬರ್ 2024, 15:48 IST
ಕಾಖಂಡಕಿಯ ಶ್ರೀಧರ ಬಸವರಾಜ ಕಲ್ಯಾಣಿ ಮತ್ತು ಬಿಜ್ದರಗಿಯ ಯಮನಪ್ಪ ಕಾಡಪ್ಪ ಮಾದರ ಅವರಿಗೆ ಸಚಿವ ಎಂ. ಬಿ. ಪಾಟೀಲ ಅವರು ಆರ್ಥಿಕ ನೆರವಿನ ಚೆಕ್ ವಿತರಿಸಿದರು. ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಡಾ. ಆರ್. ವಿ. ಕುಲಕರ್ಣಿ, ಶ್ರೀಧರ ತಾಯಿ ಕಲಾವತಿ ಬಸವರಾಜ ಕಲ್ಯಾಣಿ ಇದ್ದಾರೆ
ಕಾಖಂಡಕಿಯ ಶ್ರೀಧರ ಬಸವರಾಜ ಕಲ್ಯಾಣಿ ಮತ್ತು ಬಿಜ್ದರಗಿಯ ಯಮನಪ್ಪ ಕಾಡಪ್ಪ ಮಾದರ ಅವರಿಗೆ ಸಚಿವ ಎಂ. ಬಿ. ಪಾಟೀಲ ಅವರು ಆರ್ಥಿಕ ನೆರವಿನ ಚೆಕ್ ವಿತರಿಸಿದರು. ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಡಾ. ಆರ್. ವಿ. ಕುಲಕರ್ಣಿ, ಶ್ರೀಧರ ತಾಯಿ ಕಲಾವತಿ ಬಸವರಾಜ ಕಲ್ಯಾಣಿ ಇದ್ದಾರೆ   

ವಿಜಯಪುರ: ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದಿದ್ದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.

ನಗರ ತಮ್ಮ ಗೃಹ ಕಚೇರಿಗೆ ಸೋಮವಾರ ಆಗಮಿಸಿದ ಬಬಲೇಶ್ವರ ತಾಲ್ಲೂಕಿನ ಕಾಖಂಡಕಿ ಗ್ರಾಮದ ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ ಮತ್ತು ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ವಿದ್ಯಾರ್ಥಿ ಯಮನಪ್ಪ ಕಾಡಪ್ಪ ಮಾದರ ಅವರಿಗೆ ಸಚಿವರು ಎಂ. ಬಿ. ಬಿ. ಎಸ್. ಕೋರ್ಸಿನ ಮೊದಲ ವರ್ಷದ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಊಟದ ಶುಲ್ಕಕ್ಕೆ ಅಗತ್ಯವಾಗಿರುವ ₹ 1,29,400 ಹಣದ ಚೆಕ್ ವಿತರಿಸಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ ಕುಲಕರ್ಣಿ, ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ ಅವರ ತಾಯಿ ಕಲಾವತಿ ಉಪಸ್ಥಿತರಿದ್ದರು.

ADVERTISEMENT

ಎಂ.ಬಿ.ಬಿ.ಎಸ್ ಕೋರ್ಸಿಗೆ ಬೋಧನೆ, ಹಾಸ್ಟೇಲ್ ಮತ್ತು ಊಟದ ಖರ್ಚು ಸೇರಿ ಒಟ್ಟು ₹ 5,17,600 ವೆಚ್ಚ ತಗುಲಲಿದ್ದು, ಈ ಎಲ್ಲ ಹಣವನ್ನು ಸಚಿವರು ಬಿ.ಎಲ್.ಡಿ.ಇ ಸಂಸ್ಥೆಯಿಂದ ಭರಿಸಲಿದ್ದಾರೆ. ಅಲ್ಲದೇ, ಇದರ ಮೊದಲ ಕಂತಿನ ಹಣದ ಚೆಕ್ ಅನ್ನು ಸೋಮವಾರ ವಿತರಿಸಿದರು.

ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ ಮಾತನಾಡಿ, ನೀಟ್‌ನಲ್ಲಿ ನನಗೆ 36400 ಸ್ಥಾನ ಬಂದಿದ್ದು, ಕಲಬುರಗಿ ಜಿಮ್ಸ್ ಕಾಲೇಜ್ ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್ ಸೀಟು ಸಿಕ್ಕಿದೆ. ಪ್ರವೇಶ ಶುಲ್ಕ ಭರಿಸಲು ಪರದಾಡುತ್ತಿದ್ದ ನಮಗೆ ಸಚಿವ ಎಂ. ಬಿ. ಪಾಟೀಲ ಅವರು ಆಪದ್ಬಾಂಧವರಾಗಿದ್ದಾರೆ. ನಮಗೆ ಸಹಾಯ ಮಾಡುವ ಮೂಲಕ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಮುಂದೆ ಎಂ.ಡಿ ಓದಿ ವಿಜಯಪುರದಲ್ಲಿಯೇ ಎಂ. ಬಿ. ಪಾಟೀಲ ಅವರ ಹೆಸರಿನಲ್ಲಿ ಆಸ್ಪತ್ರೆ ಪ್ರಾರಂಭಿಸಿ ಬಡಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

ವಿದ್ಯಾರ್ಥಿ ಯಮನಪ್ಪ ಕಾಡಪ್ಪ ಮಾದರ ಮಾತನಾಡಿ, ನನಗೆ ತಂದೆ ಇಲ್ಲ. ತಾಯಿ ಕೂಲಿ ಕೆಲಸ ಮಾಡುತ್ತಾಳೆ. ನೀಟ್ ಪರೀಕ್ಷೆಯಲ್ಲಿ ನನಗೆ 1,87,253 ಸ್ಥಾನ ಬಂದಿದೆ. ಆದರೆ, ಬಡತನದ ಹಿನ್ನೆಲೆಯಲ್ಲಿ ನೀಟ್ ಪಾಸಾದರೂ ಎಂ.ಬಿ.ಬಿ.ಎಸ್ ಪ್ರವೇಶ ಪಡೆಯಲು ಸಂಕಷ್ಟ ಪಡುತ್ತಿದ್ದ ನನಗೆ ಎಂ. ಬಿ. ಪಾಟೀಲರು ದೇವರ ರೂಪದಲ್ಲಿ ಬಂದು ನೆರವಾಗಿದ್ದಾರೆ. ಅವರಿಗೆ ನಾನು ಮತ್ತು ನನ್ನ ತಾಯಿ ಸದಾ ಋಣಿಯಾಗಿರುತ್ತೇವೆ. ಭವಿಷ್ಯದಲ್ಲಿ ಉತ್ತಮ ವೈದ್ಯನಾಗಿ ವಿಜಯಪುರದಲ್ಲಿಯೇ ಬಡಜನರ ಸೇವೆ ಮಾಡುವ ಮಹದಾಸೆ ಇದೆ ಎಂದು ಹೇಳಿದರು.

ನಾನು 1 ರಿಂದ 6ನೇ ತರಗತಿಯವರೆಗೆ ಮದಭಾವಿ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಮಲ್ಲಾಬಾದಿನಲ್ಲಿ ಹಾಸ್ಟೇಲಿನಲ್ಲಿದ್ದುಕೊಂಡು 7ನೇ ತರಗತಿ ಮುಗಿಸಿದ್ದೇನೆ. ನಂತರ 8 ರಿಂದ 10ನೇ ತರಗತಿಯವರೆಗೆ ಬಿಜ್ಜರಗಿ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ವಿಜಯಪುರ ನಗರದಲ್ಲಿರುವ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದ್ದೇನೆ. ಈಗ ಹಾವೇರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಸೀಟು ಸಿಕ್ಕಿದ್ದು, ಸಚಿವರ ಸಹಾಯದಿಂದ ತುಂಬಾ ಸಂತಸವಾಗಿದೆ ಎಂದು ಯಮನಪ್ಪ ಕಾಡಪ್ಪ ಮಾದರ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.