ವಿಜಯಪುರ: ಇಲ್ಲಿನ ಮಹಾನಗರ ಪಾಲಿಕೆ 19ನೇ ವಾರ್ಡಿನ ಪಕ್ಷೇತರ ಸದಸ್ಯೆ ನಿಶಾತ್ ನದಾಫ್ ಅವರ ಪತಿ, ರೌಡಿ ಶೀಟರ್ ಹೈದರ್ ನದಾಫ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ.
ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಜ್ರ ಹನುಮಾನ್ ರೈಲ್ವೆಗೇಟ್ ಸಮೀಪದ ಚಾಂದಾಪುರ ಕಾಲೊನಿಯಲ್ಲಿದ್ದ ತಮ್ಮ ಪತ್ನಿ ಮನೆಯಿಂದಹೈದರ್ ನದಾಫ್ ಶನಿವಾರ ಬೆಳಿಗ್ಗೆ ಹೊರಬಂದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿ ನೆಲಕ್ಕೆ ಉರುಳಿಬಿದ್ದ
ನದಾಫ್ ಅವರಿಗೆ ನಾಲ್ಕು ಗುಂಡು ತಗುಲಿ ಸ್ಥಳದಲ್ಲೇ
ಸಾವಿಗೀಡಾಗಿದ್ದಾರೆ.
‘ವಿಜಯಪುರ ಮಹಾನಗರ ಪಾಲಿಕೆಗೆ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಹೈದರ್ ನದಾಫ್ ಅವರು ವಾರ್ಡ್ ಸಂಖ್ಯೆ 19ರಲ್ಲಿ ತಮ್ಮ ಪತ್ನಿ ನಿಶಾತ್ ನದಾಫ್ ಅವರನ್ನು ಪಕ್ಷೇತರ ವಾಗಿ ಕಣಕ್ಕಿಳಿಸಿ, ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿಯೇ ಈ ಕೃತ್ಯ ಮಾಡಿರು
ವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಹೇಳಿದ್ದಾರೆ.
‘ಹೈದರ್ ನದಾಫ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಸಿ ಕೊಂಡಿದ್ದರು. ಹತ್ಯೆ ಮಾಡಿರುವವರು ಕೂಡ ರೌಡಿಶೀಟರ್ ಆಗಿದ್ದು, ಆರೋಪಿಗಳ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ’ ಎಂದರು.
‘ವಿಧಾನಸಭೆ ಚುನಾವಣೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದೂ ಎಸ್‌ಪಿ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.