ADVERTISEMENT

ನಿಡಗುಂದಿ: ಬಸವ ಉದ್ಯಾನದಲ್ಲಿ ಅರಳಿದ ವಿದೇಶಿ ಪುಷ್ಪಗಳು

ಚಂದ್ರಶೇಖರ ಕೊಳೇಕರ
Published 25 ಸೆಪ್ಟೆಂಬರ್ 2021, 12:07 IST
Last Updated 25 ಸೆಪ್ಟೆಂಬರ್ 2021, 12:07 IST
ನಿಡಗುಂದಿಯ ಬಸವ ಉದ್ಯಾನದಲ್ಲಿ ಅರಳಿರುವ ದಾಸವಾಳ ಹೂಗಳು
ನಿಡಗುಂದಿಯ ಬಸವ ಉದ್ಯಾನದಲ್ಲಿ ಅರಳಿರುವ ದಾಸವಾಳ ಹೂಗಳು   

ನಿಡಗುಂದಿ: ನೋಡಿದೊಡಣೆ ಮನಸ್ಸಿಗೆ ಮುದ ಹಾಗೂ ಶಾಂತಿ ನೀಡುವ ವಿದೇಶಿ ತಳಿಯ ವೈವಿಧ್ಯಮಯ ಹೂಗಳು, ಅಪರೂಪದ ಸಸ್ಯ ಸಂಕುಲಗಳು ಒಮ್ಮೆ ಕಾಲಿಟ್ಟರೇ ಹೊರಹೋಗಲು ಬಾರದ ಮನಸ್ಸು.

ಈ ರೀತಿಯ ಅಪರೂಪದ ಪುಷ್ಪಗಳು ಕಂಡು ಬರುವುದು ನಿಡಗುಂದಿ ಪಟ್ಟಣದಲ್ಲಿನ ಆಲಮಟ್ಟಿ ರಸ್ತೆಯಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಬಸವ ಉದ್ಯಾನದ ವೈಭವ.

ಆಲಮಟ್ಟಿಯ ಕೆಬಿಜೆಎನ್ ಎಲ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ಉದ್ಯಾನದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಎಲ್ಲಿಯೂ ಬೆಳೆಸದ ಅಪರೂಪದ ಪುಷ್ಪಗಳನ್ನು ಇಲ್ಲಿ ಬೆಳೆಸಲಾಗಿದೆ.

ADVERTISEMENT

ಪ್ರಯೋಗ ಶಾಲೆ:ಆಲಮಟ್ಟಿಯಲ್ಲಿ ನೂರಾರು ಎಕರೆ ವಿಸ್ತಾರದ ಉದ್ಯಾನವಿದ್ದರೂ, ಅಪರೂಪದ ಪುಷ್ಪಗಳು ಇಲ್ಲ. ಆದರೆ, ನಿಡಗುಂದಿಯ ಉದ್ಯಾನ ಪುಷ್ಪ ಕೃಷಿಯ ಪ್ರಯೋಗ ಶಾಲೆಯಾಗಿದೆ.

ಕೆಬಿಜೆಎನ್ ಎಲ್ ಅರಣ್ಯ ವಿಭಾಗದವರು ನಾನಾ ಕಡೆ ಅಧ್ಯಯನ ನಡೆಸಿ, ಪುಷ್ಪ ತಜ್ಞರನ್ನು ಸಂಪರ್ಕಿಸಿ ಈ ವಾತಾವರಣಕ್ಕೆ (ಬಿಸಿಲಿನ) ಒಗ್ಗುವ ರೀತಿಯ ಪುಷ್ಪಗಳನ್ನು ಬೆಳೆಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ನಿಡಗುಂದಿಯ ಬಸವ ಉದ್ಯಾನವನ್ನು ಆಯ್ದುಕೊಂಡರು. ಈಗ ಅದು ಯಶಸ್ಸು ಆಗಿದ್ದು, ಬಹು ಅಪರೂಪದ ದಾಸವಾಳ ಹಾಗೂ ಗುಲಾಬಿ ಸೆಕ್ಟರ್ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ವಿದೇಶಿ ತಳಿಯ ದಾಸವಾಳ:ಕೆಂಪು, ಹಳದಿ ದಾಸವಾಳ ಮಾತ್ರ ನಾವು ನೋಡುತ್ತೇವೆ. ಆದರೆ, ಇಲ್ಲಿ 400 ದಾಸವಾಳ ಗಿಡಗಳನ್ನು ಹಾಕಲಾಗಿದ್ದು, ಸುಮಾರು 40 ವಿವಿಧ ವರ್ಣ ಪುಷ್ಪಗಳು ಇಲ್ಲಿ ಅರಳಿದ್ದು, ಮನಸ್ಸಿಗೆ ಮುದ ನೀಡುತ್ತವೆ. ಜಾಂಬಳಿ, ವೈಲೆಟ್, ಹಳದಿ, ಕೆಂಪು, ಗುಲಾಬಿ, ನೀಲಿ....ಹೀಗೆ ನಾನಾ ವರ್ಣಗಳ ಪುಷ್ಪಗಳು ಮೈಮನಸ್ಸಿಗೆ ಇಂಪು ನೀಡುತ್ತವೆ. ಆಕಾರದಲ್ಲಿಯೂ ದೊಡ್ಡ ಗಾತ್ರ ದಾಸವಾಳ ಹೂಗಳು ಇಲ್ಲಿ ಅರಳಿವೆ.

ಹವಾಯಿ ದ್ವೀಪದಲ್ಲಿ ಬೆಳೆಯುವ ಹವಾಯಿನ್ ಹಾಗೂ ಅಮೆರಿಕಾದಲ್ಲಿ ಬೆಳೆಯುವ ಅಮೇರಿಕನ್ ತಳಿಯ ದಾಸವಾಳ ಪುಷ್ಪಗಳು ಇಲ್ಲಿವೆ. ಮಹಾರಾಷ್ಟ್ರದ ಪುಣಿ ಹಾಗೂ ಆಂಧ್ರಪ್ರದೇಶದ ರಾಜಮಂಡ್ರಿಯ ನಾನಾ ನರ್ಸರಿಗಳಿಂದ ಈ ಪುಷ್ಪಗಳ ಅಗಿಯನ್ನು ತರಿಸಿ ಇಲ್ಲಿ ನೆಡಲಾಗಿದೆ. ಇದು ಯಶಸ್ವಿಯಾದರೇ ಆಲಮಟ್ಟಿಯ ನರ್ಸರಿಯಲ್ಲಿಯೇ ಇವುಗಳನ್ನು ಬೆಳೆಸಲಾಗುವುದು ಎಂದು ಈ ಪುಷ್ಪ ಉದ್ಯಾನದ ರೂವಾರಿ ಆರ್ ಎಫ್ ಓ ಮಹೇಶ ಪಾಟೀಲ ಹೇಳಿದರು.

ತೋಟಗಾರಿಕೆ ಮೇಳ ಸೇರಿ ನಾನಾ ಕಡೆ ಅಧ್ಯಯನ ನಡೆಸಿ ಈ ಉದ್ಯಾನದಲ್ಲಿ ವಿಶೇಷ ಹೂಗಳನ್ನು ಬೆಳೆಸಲಾಗಿದೆ. ಆಲಮಟ್ಟಿಯಲ್ಲಿಯೂ ಈ ಪುಷ್ಪಗಳಿಲ್ಲ ಎಂದರು.

ಗುಲಾಬಿ ಸೆಕ್ಟರ್:400 ಗುಲಾಬಿ ಗಿಡಗಳನ್ನು ನೆಟ್ಟಿದ್ದು, ಅವು ಕೂಡಾ ಅರಳಿವೆ. ಹೈಬ್ರಿಡ್-ಟಿ ವೆರೈಟಿ, ಫ್ಲೋರಿಬೆಂಡಾ ತಳಿ, ಸ್ಪ್ರೇ ತಳಿಗಳ ಹೂಗಳನ್ನು ಇಲ್ಲಿ ಹಚ್ಚಲಾಗಿದೆ. ಹೈಬ್ರಿಡ್-ಟಿ ತಳಿಯ ಗುಲಾಬಿ ಹೂ ಗಾತ್ರದಲ್ಲಿ ದೊಡ್ಡದಾಗಿವೆ. ನಾನಾ ವರ್ಣದ ಗುಲಾಬಿ ಗಿಡಗಳು ಇಲ್ಲಿ ಅರಳಿವೆ.

ಪುಷ್ಪ ಗಿಡಗಳ ಆರೈಕೆ ಮಾತ್ರ ನಿರಂತರ. ಈ ವಾತಾವರಣಕ್ಕೆ ಪೂರಕವಾಗಿ ವೈಜ್ಞಾನಿಕ ಕ್ರಮ ಅನುಸರಿಸಿ, ಹುಳು ಬಾಧೆ ತಡೆಗಟ್ಟುವಿಕೆ, ಬಿಸಿಲಿನ ತಾಪ ಕಡಿಮೆ, ಗೊಬ್ಬರ ನೀಡುವಿಕೆ ಸೇರಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ.

ಯಾವ ಋತುವಿಗೆ ಯಾವ ಗಿಡ ಎಷ್ಟು ದಿನಗಳ ಕಾಲ ಬೆಳೆಯುತ್ತವೆ ಎಂಬುದನ್ನು ನೋಡಿಕೊಂಡು ಆಯಾ ಕಾಲಕ್ಕೆ ಅನುಗುಣವಾಗಿ ಇಲ್ಲಿ ಪುಷ್ಪಗಳನ್ನು ನಾಟಿ ಮಾಡಲು ನಿರ್ಧರಿಸಲಾಗಿದೆ. ಇದರಿಂದ ವರ್ಷದ ಎಲ್ಲ ದಿನಗಳು ಪುಷ್ಪಗಳು ಅರಳುತ್ತವೆ. ಆದರೆ, ಇದರ ಮೇಲ್ವಿಚಾರಣೆಗೆ ಖರ್ಚು ಮಾತ್ರ ಹೆಚ್ಚು. ಇನ್ನೂ ನಾಲ್ಕೈದು ತಿಂಗಳಲ್ಲಿ ಉದ್ಯಾನ ಪೂರ್ಣಗೊಂಡು. ನಂತರ ಅದನ್ನು ಪಟ್ಟಣ ಪಂಚಾಯ್ತಿಗೆ ಹಸ್ತಾಂತರಿಸಲಾಗುವುದು ಎನ್ನುತ್ತಾರೆ ಮಹೇಶ ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.