ADVERTISEMENT

ವಿಜಯಪುರ: ಜವಳಿ ಉದ್ಯಮಿಗಳಿಂದ ಸೇವಾರ್ಥವಾಗಿ ಜನರಿಗೆ ಉತ್ತರ ಭಾರತ ಉಚಿತ ಯಾತ್ರೆ

ಬಸವರಾಜ ಸಂಪಳ್ಳಿ
Published 22 ಸೆಪ್ಟೆಂಬರ್ 2024, 0:15 IST
Last Updated 22 ಸೆಪ್ಟೆಂಬರ್ 2024, 0:15 IST
ಉತ್ತರ ಭಾರತ ಯಾತ್ರೆಗೆ ಹೊರಡಲು  ಇಂಡಿ ರೈಲು ನಿಲ್ದಾಣದಲ್ಲಿ ಕುಳಿತಿರುವ ಯಾತ್ರಾರ್ಥಿಗಳು
ಉತ್ತರ ಭಾರತ ಯಾತ್ರೆಗೆ ಹೊರಡಲು  ಇಂಡಿ ರೈಲು ನಿಲ್ದಾಣದಲ್ಲಿ ಕುಳಿತಿರುವ ಯಾತ್ರಾರ್ಥಿಗಳು   

ವಿಜಯಪುರ: ಜವಳಿ ಉದ್ಯಮದ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮನೆಮಾತಾಗಿರುವ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಬಾಹುಬಲಿ ಮುತ್ತಿನ ಮತ್ತು ಅಜಿತ್‌ ಮುತ್ತಿನ ಸಹೋದರರು 2,400ಕ್ಕೂ ಅಧಿಕ ಜನರನ್ನು ಉಚಿತವಾಗಿ ಎಂಟು ದಿನಗಳ ಉತ್ತರ ಭಾರತ ಯಾತ್ರೆಗೆ ಕರೆದೊಯ್ದಿದ್ದಾರೆ. ಇದಕ್ಕಾಗಿ ಅವರು ತಮ್ಮ ಸ್ವಂತ ₹ 2 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿದ್ದಾರೆ.

‘ವಿಶೇಷ ರೈಲಿನಲ್ಲಿ ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಯಾದಗಿರಿ, ಸೋಲಾಪುರ, ಸಾಂಗ್ಲಿ, ಸಾತಾರ, ಕೊಲ್ಹಾಪುರ ಜಿಲ್ಲೆಗಳು ಸೇರಿದಂತೆ ಅವಳಿ ರಾಜ್ಯದ ಯಾತ್ರಾರ್ಥಿಗಳಿಗೆ ಉತ್ತರ ಭಾರತದ ಪ್ರಮುಖ ಯಾತ್ರಾ ಸ್ಥಳಗಳಾದ ಕಾಶಿ, ಅಯೋಧ್ಯಾ, ವಾರಣಾಸಿ, ಜೈನರ ಪವಿತ್ರ ಕ್ಷೇತ್ರ ಶಿಖರ್ಜಿ ದರ್ಶನಕ್ಕೆ ಕರೆದೊಯ್ದಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಯಾತ್ರೆಯ ಆಯೋಜಕ, ಜವಳಿ ಉದ್ಯಮಿ ಅಜಿತ್‌ ಎನ್‌. ಮುತ್ತಿನ, ‘ಸೇವಾರ್ಥವಾಗಿ ಉತ್ತರ ಭಾರತ ಯಾತ್ರೆಯನ್ನು ಆಯೋಜಿಸುತ್ತ ಬರುತ್ತಿದ್ದೇವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಉತ್ತರ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ನೋಡಲು ಆಗದವರಿಗಾಗಿ ಈ ಯಾತ್ರೆಯನ್ನು ನಾವು ಸಂಘಟಿಸಿದ್ದೇವೆ’ ಎಂದರು.

ADVERTISEMENT
ಉತ್ತರ ಭಾರತ ಯಾತ್ರೆಯನ್ನು ಉಚಿತವಾಗಿ ಸಂಘಟಿಸಿರುವ ಜವಳಿ ವ್ಯಾಪಾರಿಗಳಾದ ಬಾಹುಬಲಿ ಮುತ್ತಿನ ಮತ್ತು ಅಜಿತ್‌ ಮುತ್ತಿನ ಸಹೋದರರನ್ನು ಯಾತ್ರಿಗಳು ಯಾತ್ರೆಗೂ ಮುನ್ನ ಅಭಿನಂದಿಸಿದರು 

‘ಎಂಟು ದಿನಗಳ ಪ್ರವಾಸದಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಊಟ, ವಸತಿ, ಆರೋಗ್ಯ ಸೇವೆ ಉಚಿತವಾಗಿ ಒದಗಿಸುತ್ತೇವೆ. ಅವರಿಗೆ ನಯಾ ಪೈಸೆ ಖರ್ಚಾಗದಂತೆ ವ್ಯವಸ್ಥೆ ಮಾಡಿರುತ್ತೇವೆ. ಯಾತ್ರೆಯ ಸಂದರ್ಭದಲ್ಲಿ ಸುರಕ್ಷತೆಗಾಗಿ ಹಲವು ಸ್ವಯಂ ಸೇವಕರನ್ನು ನಿಯೋಜಿಸುತ್ತೇವೆ. ಯಾತ್ರಾರ್ಥಿಗಳಿಗೆ ಧಾರ್ಮಿಕ ಸ್ಥಳಗಳ ದರ್ಶನ ಮಾಡಿಸಿ, ಸುರಕ್ಷಿತವಾಗಿ ಕರೆದುಕೊಂಡು ಬರುತ್ತೇವೆ’ ಎಂದು ಹೇಳಿದರು.  

‘ರೈಲು ನಿಲ್ದಾಣಗಳಿಂದ ಯಾತ್ರಾ ಸ್ಥಳಗಳಿಗೆ ತೆರಳಲು ಅನುಕೂಲವಾಗುವಂತೆ ಆಯಾ ಸ್ಥಳಗಳಲ್ಲಿ ಉಚಿತ ಬಸ್‌ ವ್ಯವಸ್ಥೆ, ಜೊತೆಗೆ ಕೆಲವರಿಗೆ ವಿಮಾನದ ಮೂಲಕವೂ ಯಾತ್ರೆಗೆ ಅವಕಾಶ ಮಾಡಿದ್ದೇವೆ’ ಎಂದರು.

‘ಯಾತ್ರೆಗೆ 60 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ. ಯಾತ್ರೆಯಲ್ಲಿ ಕೇವಲ ನಮ್ಮ ಗ್ರಾಹಕರು, ಸಂಬಂಧಿಕರು ಇರುವುದಿಲ್ಲ. ಎಲ್ಲ ಸಮಾಜದವರನ್ನು ಸೇವಾ ದೃಷ್ಟಿಯಿಂದ ಕರೆದುಕೊಂಡು ಹೋಗುತ್ತೇವೆ’ ಎಂದು ಹೇಳಿದರು.

‘ಕೋವಿಡ್‌ ಕಾರಣಕ್ಕೆ ಕಳೆದ ನಾಲ್ಕು ವರ್ಷ ಯಾತ್ರೆ ಏರ್ಪಡಿಸಿರಲಿಲ್ಲ. ಇದೀಗ ಐದನೇ ಬಾರಿಗೆ ಉತ್ತರ ಭಾರತ ಯಾತ್ರೆಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದೇವೆ. ಆರಂಭದ ವರ್ಷಗಳಲ್ಲಿ 500 ಜನರನ್ನು ಕರೆದುಕೊಂಡು ಉತ್ತರ ಭಾರತ ಯಾತ್ರೆ ಮಾಡಲಾಗಿತ್ತು. ಬಳಿಕ ಒಂದು ಸಾವಿರ, ಆ ನಂತರ 3,000 ಜನರನ್ನು ಕರೆದುಕೊಂಡು ಹೋಗಲಾಗಿತ್ತು. ಈ ವರ್ಷ 2,400ಕ್ಕೂ ಅಧಿಕ ಜನರೊಟ್ಟಿಗೆ ಯಾತ್ರೆ ಕೈಗೊಂಡಿದ್ದೇವೆ’ ಎಂದರು.

ಉತ್ತರ ಭಾರತ ಯಾತ್ರೆಗೆ ರೈಲಿನಲ್ಲಿ ತೆರಳಿದ ಮಹಿಳಾ ಯಾತ್ರಾರ್ಥಿಗಳು
ಯಾವುದೇ ಜಾತಿ ಧರ್ಮ ಬೇಧವಿಲ್ಲದೇ ಯಾತ್ರೆಯನ್ನು ಸಂಘಟಿಸುತ್ತಿದ್ದೇವೆ. ಜನರೊಂದಿಗೆ ನಮ್ಮ ಇಡೀ ಕುಟುಂಬವೂ ಇದ್ದು ದೇವರ ದರ್ಶನ ಮಾಡುತ್ತೇವೆ
–ಅಜಿತ್‌ ಎನ್‌. ಮುತ್ತಿನ, ಜವಳಿ ಉದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.