ADVERTISEMENT

ಪಂಚಭೂತಗಳಲ್ಲಿ ಶಾಸಕ ಮನಗೂಳಿ ಲೀನ

ಅಂತಿಮ ಯಾತ್ರೆಗೆ ಸಾಗರದಂತೆ ಹರಿದು ಬಂದ ಅಭಿಮಾನಿಗಳು, ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 14:23 IST
Last Updated 29 ಜನವರಿ 2021, 14:23 IST
ಸಿಂದಗಿಯಲ್ಲಿ ಶುಕ್ರವಾರ ಶಾಸಕ ಎಂ.ಸಿ.ಮನಗೂಳಿ ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮನಗೂಳಿ ಪುತ್ರರಿಗೆ ಸಾಂತ್ವನ ಹೇಳಿದರು
ಸಿಂದಗಿಯಲ್ಲಿ ಶುಕ್ರವಾರ ಶಾಸಕ ಎಂ.ಸಿ.ಮನಗೂಳಿ ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮನಗೂಳಿ ಪುತ್ರರಿಗೆ ಸಾಂತ್ವನ ಹೇಳಿದರು   

ಸಿಂದಗಿ (ವಿಜಯಪುರ): ಅನಾರೋಗ್ಯದಿಂದ ನಿಧನರಾದ ಶಾಸಕ ಎಂ.ಸಿ.ಮನಗೂಳಿ(85) ಅವರ ಅಂತ್ಯಕ್ರಿಯೆ ಸಕಲಸರ್ಕಾರಿ ಗೌರವ ಹಾಗೂ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಶುಕ್ರವಾರ ನೆರವೇರಿತು.

ಅಂತ್ಯಕ್ರಿಯೆಗೂ ಮುನ್ನಾ ಮನಗೂಳಿ ಅವರುಪಾರ್ಥಿವ ಶರೀರದ ಅಂತಿಮ ಯಾತ್ರೆ ಪಟ್ಟಣದಲ್ಲಿ ನಡೆಯಿತು. ಅಪಾರ ಜನಸಾಗರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಮನಗೂಳಿ ಮುತ್ಯಾಗೆ ಜೈ, ಮನಗೂಳಿ ಮಾಮಾಗೆ ಜೈ, ಮನಗೂಳಿ ಕಾಕಾಗೆ ಜೈ ಎಂಬ ಜಯಘೋಷ ಹಾಕಿದರು.

ಪಟ್ಟಣದ ಮನಗೂಳಿ ಅವರ ಮನೆಯಿಂದ ಬೆಳಿಗ್ಗೆ ಆರಂಭವಾದ ಅಂತಿಮ ಯಾತ್ರೆ ಪ್ರಮುಖ ರಸ್ತೆಗಳಲ್ಲಿ ಹಾದು ಮಧ್ಯಾಹ್ನ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಮೈದಾನಕ್ಕೆ ತಲುಪಿತು.

ADVERTISEMENT

ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ಮನಗೂಳಿ ಅಭಿಮಾನಿಗಳು ಸಮಾವೇಶಗೊಂಡಿದ್ದರು. ಅಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಮನಗೂಳಿ ಸರಳ, ಸಜ್ಜನ ರಾಜಕಾರಣಿ. ಅವರೊಂದಿಗೆ ನನ್ನದು 40 ವರ್ಷದ ಬಾಂಧವ್ಯ ಇದೆ. ಅವರ ಸಾಧನೆ ದೊಡ್ಡ ಪ್ರಮಾಣದ್ದು ಎಂದು ಸ್ಮರಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನವೊಲಿಸಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ. ಮನಗೂಳಿ ತಮಗಾಗಿ ಬದುಕದೇ ಸಮಾಜಕ್ಕಾಗಿ ಬದುಕಿದವರು. ಅವರು ಹಾಕಿಕೊಂಡ ಜನಪರ ಕಾರ್ಯಕ್ರಮ ಪೂರ್ಣಗೊಳಿಸುವ ಜವಾಬ್ದಾರಿ ಅವರ ಕುಟುಂಬದವರು ಮತ್ತು ಸಮಾಜದ್ದಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮನಗೂಳಿ ಸರಳ, ಸಜ್ಜನಿಕೆಯ ಹಿರಿಯ ವ್ಯಕ್ತಿ. ಅವರದು ಆದರ್ಶ ರಾಜಕಾರಣ. ನೀರಾವರಿ ಯೋಜನೆ ಜಾರಿಗೆಗಾಗಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಚಪ್ಪಲಿ ಧರಿಸದೇ ಸಂಚರಿಸಿದ ಪ್ರತಿಜ್ಞೆ ಅವರದ್ದಾಗಿತ್ತು. ಅವರ ಹೋರಾಟ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.

2018 ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವರು ಒಪ್ಪದೇ ತಮ್ಮ ಪುತ್ರರಲ್ಲೊಬ್ಬರಿಗೆ ಅವಕಾಶ ಕೋರಿದ್ದರು. ಅವರು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ನಿರಂತರ ಒತ್ತಡ ಹಾಕುವ ಮೂಲಕ ಆಲಮೇಲ ತಾಲ್ಲೂಕು ಆಗಿ ರಚನೆಯಾಗಲು ಯಶಸ್ವಿಯಾದರು ಎಂದು ಹೇಳಿದರು.

ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ ಅವರ ಕನಸಾಗಿತ್ತು. ಅದು ನನಸಾಗಬೇಕಿದೆ ಎಂದು ಹೇಳಿದರು.

ಮನಗೂಳಿ ಆಸ್ತಿ ಸಂಪಾದಿಸಿಲ್ಲ. ಜನರನ್ನು ಸಂಪಾದಿಸಿದ್ದಾರೆ. ದೇವೇಗೌಡರು ದೆಹಲಿಯಿಂದ ಆದಷ್ಟು ಬೇಗ ಸಿಂದಗಿಗೆ ಬಂದು ಮನಗೂಳಿ ಕುಟುಂಬಕ್ಕೆ ಸಾಂತ್ವನ ಹೇಳುವರು ಎಂದು ತಿಳಿಸಿದರು.

ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ, ಯಶವಂತರಾಯಗೌಡ ಪಾಟೀಲ, ಅಜಯಸಿಂಗ್, ಈಶ್ವರ ಖಂಡ್ರೆ, ದೇವಾನಂದ ಚವ್ಹಾಣ ಹಾಗೂ ಎಂ.ಪಿ.ನಾಡಗೌಡ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಅಶೋಕ ಶಾಬಾದಿ ಶ್ರದ್ದಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಸಾರಂಗಮಠದ ಡಾ.ಪ್ರಭು ಸಾರಂಗದೇವ ಸ್ವಾಮೀಜಿ, ಕೊಣ್ಣೂರ ಡಾ.ವಿಶ್ವಪ್ರಭು ಸ್ವಾಮೀಜಿ, ಮನಗೂಳಿ ಸ್ವಾಮೀಜಿ, ಕನ್ನೊಳ್ಳಿ ಸ್ವಾಮೀಜಿ, ಶಾಂತಗಂಗಾಧರ ಸ್ವಾಮೀಜಿ ಸೇರಿದಂತೆ50ಕ್ಕೂ ಅಧಿಕ ಮಠಾಧೀಶರು ಉಪಸ್ಥಿತರಿದ್ದರು.

ಶಾಸಕ ಮನಗೂಳಿ ಅವರ ಪತ್ನಿ ಸಿದ್ದಮ್ಮ, ಪುತ್ರರಾದ ಡಾ.ಅರವಿಂದ, ಅಶೋಕ, ಡಾ.ಚನ್ನವೀರ, ಡಾ.ಶಾಂತವೀರ, ಪುತ್ರಿ ಅನ್ನಕ್ಕ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ವೇದಿಕೆಯಲ್ಲಿದ್ದರು.

ಮೈದಾನದ ಬಲ ಬದಿಯಲ್ಲಿ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಹತ್ತಿರ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಿತು.

ಸಿಂದಗಿ ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಪಾಠಶಾಲೆ ವಟುಗಳಿಂದ ಕ್ರಿಯಾ ಸಂಸ್ಕಾರ ಜರುಗಿತು. ಮೂರು ಸಾವಿರದಷ್ಟು ಶಿವಯೋಗಮಂದಿರದ ವಿಭೂತಿಗಳನ್ನು ಬಳಕೆ ಮಾಡಿಕೊಂಡು ಕ್ರಿಯಾ ಸಂಸ್ಕಾರ ನಡೆಸಲಾಯಿತು.

ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ತಹಶೀಲ್ದಾರ್‌ ಸಂಜೀವ ಕುಮಾರ್‌ ದಾಸರ ಪಾಲ್ಗೊಂಡಿದ್ದರು.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸಿ ಗೌರವ ವಂದನೆ ಸಲ್ಲಿಸಿದರು.ಮೃತರ ಗೌರವಾರ್ಥ ಸ್ಥಳೀಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

***

ಮನಗೂಳಿ ಅವರು ಜೀವನದುದ್ದಕ್ಕೂ ನೀರಾವರಿ ಯೋಜನೆಗಾಗಿ ಹೋರಾಟ ನಡೆಸಿದ್ದಾರೆ. ಜನಪರ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದಾರೆ.
-ಗೋವಿಂದ ಕಾರಜೋಳ,ಉಪಮುಖ್ಯಮಂತ್ರಿ

***

ಮನಗೂಳಿ ಅಪರೂಪದ ಪ್ರಾಮಾಣಿಕ ರಾಜಕಾರಣಿ. ದೇವೇಗೌಡರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು ಅವರ ಹೆಗಲಿಗೆ ಹೆಗಲು ಕೊಟ್ಟವರು. ಕೊನೆಯವರೆಗೂ ಪಕ್ಷ ನಿಷ್ಠೆ ಬದಲಿಸಲಿಲ್ಲ.
-ಎಚ್.ಡಿ.ಕುಮಾರಸ್ವಾಮಿ,ಮಾಜಿ ಮುಖ್ಯಮಂತ್ರಿ

***

ಸರಳ, ಸಜ್ಜನ ವ್ಯಕ್ತಿತ್ವದ, ಗ್ರಾಮ ಸೇವಕರಿಂದ ಗ್ರಾಮೀಣಾಭಿವೃದ್ಧಿ ಸಚಿವರಾಗುವವರೆಗೆ ಎಂ.ಸಿ.ಮನಗೂಳಿ ಅವರು ನಡೆದ ದಾರಿ ಯುವ ರಾಜಕಾರಣಿಗಳಿಗೆ ಮಾದರಿ
-ಎಂ.ಬಿ.ಪಾಟೀಲ್,ಶಾಸಕ, ಬಬಲೇಶ್ವರ

***

ಗುರುಲಿಂಗಜಂಗಮ ಪ್ರೇಮಿಗಳೂ, ಆದರ್ಶ ರಾಜಕಾರಣಿಗಳೂ ಆಗಿದ್ದ ಮನಗೂಳಿ ಅವರ ಅಗಲುವಿಕೆಯಿಂದ ಒಬ್ಬ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.
-ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ,ಜಂಗಮಮಠ ವಾರಾಣಸಿ

***

ಮಿತ ಮಾತುಗಾರರು, ಛಲಗಾರರು, ಹಠವಾದಿಗಳು ಆಗಿದ್ದ ಎಂ.ಸಿ.ಮನಗೂಳಿ ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
-ಶಿವಾನಂದ ಪಾಟೀಲ,ಶಾಸಕ, ಬಸವನ ಬಾಗೇವಾಡಿ

****

ಹಿರಿಯ ಮುತ್ಸದ್ಧಿ ರಾಜಕಾರಣಿ ಎಂ.ಸಿ.ಮನಗೂಳಿ ಅವರ ನಿಧನದಿಂದ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಗೆ ಅಪಾರ ನೋವು ತಂದಿದೆ.
-ಎ.ಎಸ್‌.ಪಾಟೀಲ ನಡಹಳ್ಳಿ,ಶಾಸಕ, ಮುದ್ದೇಬಿಹಾಳ

****

ಹಿರಿಯ ಮುತ್ಸದ್ಧಿ ರಾಜಕಾರಣಿ ಎಂ.ಸಿ.ಮನಗೂಳಿ ಅವರ ನಿಧನದಿಂದ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಗೆ ಅಪಾರ ನೋವು ತಂದಿದೆ.
-ಎ.ಎಸ್‌.ಪಾಟೀಲ ನಡಹಳ್ಳಿ,ಶಾಸಕ, ಮುದ್ದೇಬಿಹಾಳ

****

ಮನಗೂಳಿ ರಾಜ್ಯ ಕಂಡ ಅಪ್ರತಿಮ ಜನ ನಾಯಕ, ಹೋರಾಟಗಾರ, ಕಾಯಕ ನಿಷ್ಠೆ ಹೊಂದಿದ್ದ ಅತ್ಯಂತ ಸರಳ ವ್ಯಕ್ತಿತ್ವದದ ಅಜಾತಶತ್ರುವಾಗಿದ್ದರು.
-ಅರುಣ ಶಹಾಪುರ,ವಿಧಾನ ಪರಿಷತ್‌ ಸದಸ್ಯ

****

ಗುತ್ತಿ ಬಸವಣ್ಣ ಏತನೀರಾವರಿ ಯೋಜನೆ ಅನುಷ್ಠಾನವಾಗುವವರೆಗೂ ಚಪ್ಪಲಿ ಧರಿಸಲ್ಲ ಎಂದು ಶಪಥ ಮಾಡಿದ್ದ ಮನಗೂಳಿ ಅವರ ಸಾಧನೆ ಶ್ಲಾಘನೀಯ.
-ಯಶವಂತರಾಯಗೌಡ ಪಾಟೀಲ,ಶಾಸಕ, ಇಂಡಿ

****

ಮನಗೂಳಿ ಕಾಕಾ ಅವರ ಕೊಡುಗೆ ಅನನ್ಯ, ಅವರು ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ರಾಜ್ಯ ಕಂಡ ಮುತ್ಸದ್ಧಿ ರಾಜಕಾರಣಿಯಾಗಿದ್ದರು.
-ಬಸನಗೌಡ ಪಾಟೀಲ ಯತ್ನಾಳ,ಶಾಸಕ, ವಿಜಯಪುರ

****

ಜಿಲ್ಲೆಯು ಹಿರಿಯ ರಾಜಕಾರಣಿಯನ್ನು ಕಳೆದುಕೊಂಡು ಬಡವಾಗಿದೆ. ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳದೇ ವಿನಯವಂತಿಕೆಯಿಂದ ರಾಜಕಾರಣ ಮಾಡಿರುವುದು ಎಲ್ಲರಿಗೂ ಆದರ್ಶಪ್ರಾಯ.
-ದೇವಾನಂದ ಚವ್ಹಾಣ,ಶಾಸಕ, ನಾಗಠಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.