ADVERTISEMENT

ವಿಜಯಪುರ | ಬಡವರ ವಿಶ್ರಾಂತಿ ಧಾಮ ಗಗನಮಹಲ್‌

ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ಬರುವ ಜನರಿಗೆ ಅನುಕೂಲವಾದ ತಾಣ

​ಪ್ರಜಾವಾಣಿ ವಾರ್ತೆ
Published 14 ಮೇ 2024, 4:59 IST
Last Updated 14 ಮೇ 2024, 4:59 IST
ವಿಜಯಪುರ ನಗರದ ಜಿಲ್ಲಾಧಿಕಾರಿ ನಿವಾಸದ ಹತ್ತಿರವಿರುವ ಗಗನಮಹಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜನರು
ವಿಜಯಪುರ ನಗರದ ಜಿಲ್ಲಾಧಿಕಾರಿ ನಿವಾಸದ ಹತ್ತಿರವಿರುವ ಗಗನಮಹಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜನರು   

ವಿಜಯಪುರ: ನಗರದ ಹೃದಯ ಭಾಗವಾಗಿರುವ ಅಂಬೇಡ್ಕರ್‌ ವೃತ್ತ, ಜಿಲ್ಲಾಧಿಕಾರಿ ನಿವಾಸಕ್ಕೆ ಕೂಗಳತೆ ದೂರದಲ್ಲಿರುವ ಗಗನಮಹಲ್‌ ಬಡವರು, ಮಧ್ಯಮ ವರ್ಗದವರ ಅಚ್ಚುಮೆಚ್ಚಿನ ವಿಶ್ರಾಂತಿ ಧಾಮವಾಗಿದೆ.

ನಗರದಲ್ಲಿ ಪ್ರತಿನಿತ್ಯ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ತಾಪಮಾನ ದಾಖಲಾಗುತ್ತಿದ್ದು, ನೆತ್ತಿ ಸುಡುವ ಸೂರ್ಯನ ಝಳಕ್ಕೆ ಕೊಂಚ ಸಮಾಧಾನ ಪಡೆಯಲು ಜನ ಇತ್ತ ಮುಖ ಮಾಡಿ ವಿಶ್ರಾಂತಿ ಪಡೆಯುವುದು ಸಾಮಾನ್ಯ.

ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ವಿವಿಧ ಸಂಘಟನೆಗಳ ಸದಸ್ಯರು, ಸರ್ಕಾರಿ ಕೆಲಸಕ್ಕಾಗಿ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿಗೆ ಬರುವ ಜನರು ಕೆಲಹೊತ್ತು ಇಲ್ಲಿಯೇ ವಿಶ್ರಮಿಸುತ್ತಾರೆ. ವರ್ಷದ 365 ದಿನವೂ ಗಗನ ಮಹಲ್‌ ಜನರಿಂದ ತುಂಬಿರುತ್ತದೆ.

ADVERTISEMENT

ನಗರದ ಕೇಂದ್ರ ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಹಳೆ ತಹಶೀಲ್ದಾರ್ ಕಚೇರಿ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಗಾಂಧಿಚೌಕ್‌ ಕೂಡ ಕೊಂಚ ದೂರ ಇರುವ ಕಾರಣ ಬಡವರ ನೆಚ್ಚಿನ ತಾಣವಾಗಿ ನಿರ್ಮಾಣವಾಗಿದೆ.

ಬಿಸಿಲು ಹೆಚ್ಚಿರುವ ಕಾರಣ ಗಗನ ಮಹಲ್‌ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಗೋಳಗುಮ್ಮಟ ಇಬ್ರಾಹಿಂ ರೋಜಾ ಹೋಗಲು ಶುಲ್ಕ ಪಾವತಿಸಬೇಕು. ಅದಕ್ಕಾಗಿ ಇಲ್ಲಿಗೆ ಕೆಲಹೊತ್ತು ವಿಶ್ರಾಂತಿ ಪಡೆದುಕೊಂಡೆ.
ಸಿದ್ದು ಕಾಂಬಳೆ, ಜಮಖಂಡಿ ನಿವಾಸಿ

ಹೃದಯ ಭಾಗದಲ್ಲಿರುವ ಗಗನ ಮಹಲ್‌ ಆವರಣ ವಿಶಾಲ ಮೈದಾನ ಹೊಂದಿದ್ದು, ಮೈದಾನ ಪೂರ್ತಿ ಹಸಿರು ಹುಲ್ಲಿನ ಹಾಸಿಗೆ ಹೊಂದಿದೆ. ಸುತ್ತಲೂ ಬೃಹತ್ ಮರಗಳ ನೆರಳಿನ ತಂಪು ಆವರಿಸಿದ್ದು, ಬೇಸಿಗೆ ಝಳಕ್ಕೆ ಪರಿತಪಿಸುವ ಜನರು ಹಸಿರ ಹುಲ್ಲುಹಾಸಿನ ಮೇಲೆ ಮಲಗಿ ನಿತ್ಯವೂ ವಿಶ್ರಾಂತಿ ಪಡೆಯುತ್ತಾರೆ.

ವಿಜಯಪುರ ಐತಿಹಾಸಿಕ ನಗರವಾಗಿದ್ದರೂ ಸುಂದರ ಉದ್ಯಾನಗಳ ಕೊರತೆ ಸದಾ ಕಾಡುತ್ತದೆ. ಗೋಳಗುಮ್ಮಟ, ಇಬ್ರಾಹಿಂ ರೋಜಾ ಆವರಣದಲ್ಲಿ ಉದ್ಯಾನಗಳಿದ್ದರೂ, ಅಲ್ಲಿ ಪ್ರವೇಶ ಶುಲ್ಕವಿದೆ. ಬಾರಾಕಮಾನ್‌ ಹಾಗೂ ಗಗನ ಮಹಲ್‌ ನಗರದ ಹೃದಯಭಾಗದಿಂದ ಅಣತಿ ದೂರ ಇರುವ ಕಾರಣ ಬಡವರು ಇತ್ತ ಮುಖ ಮಾಡುತ್ತಾರೆ.

ಬೆಳಿಗ್ಗೆ ಹೊತ್ತು ವಿವಿಧ ಸಂಘಟನೆಗಳ ಸಭೆ, ಚರ್ಚೆಗಳು ಗಗನ ಮಹಲ್‌ ಮೈದಾನದಲ್ಲಿ ನಡೆಯುವುದು ಸಾಮಾನ್ಯ. ಹೋರಾಟಗಳ ನಿರ್ಣಯ ಅಂಗೀಕಾರವಾಗುವುದು ಇದೇ ಉದ್ಯಾನದ ನೆಲದಲ್ಲಿ. ಮುಂಜಾನೆಯಿಂದ– ಮುಸ್ಸಂಜೆಯವರೆಗೂ ಒಟ್ಟಾರೆ ಗಗನ ಮಹಲ್‌ ಚಟುವಟಿಕೆಯ ಕೇಂದ್ರವಾಗಿರುತ್ತದೆ.

ಸರ್ಕಾರಿ ಕೆಲಸಕ್ಕಾಗಿ ಹಳೆ ತಹಶೀಲ್ದಾರ್ ಕಚೇರಿಯತ್ತ ಬಂದಿದ್ದೆ, ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಬಹಳ ಇರುವ ಕಾರಣ, ಗಗನ ಮಹಲ್‌ ನೆನಪಾಗಿ ಇಲ್ಲಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದೇನೆ. ಬಿಸಿಲ ಝಳ ತಗ್ಗಿದ ಬಳಿಕ ನನ್ನ ಕೆಲಸಕ್ಕೆ ಮುಗಿಸಿ ಮನೆಯತ್ತ ಹೊರಡುತ್ತೇನೆ ಎನ್ನುತ್ತಾರೆ ಕನ್ನೂರಿನ ಭೀಮಾಶಂಕರ ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.