ADVERTISEMENT

ಜೆರೇನಿಯಂ ಕೃಷಿ: ಆದಾಯ ಹೆಚ್ಚು

ಹೂವಿನಹಳ್ಳಿ ಗ್ರಾಮದ ಯುವರೈತ ಶಿವರಾಜ್ ಎಸ್. ಪಾಟೀಲ ಯಶೋಗಾಥೆ

ರಮೇಶ ಎಸ್.ಕತ್ತಿ
Published 7 ಜುಲೈ 2023, 5:56 IST
Last Updated 7 ಜುಲೈ 2023, 5:56 IST
ಜೆರೇನಿಯಂ ಬೆಳೆಯೊಂದಿಗೆ ಯುವ ಕೃಷಿಕ ಶಿವಾರಾಜ್ ಪಾಟೀಲ
ಜೆರೇನಿಯಂ ಬೆಳೆಯೊಂದಿಗೆ ಯುವ ಕೃಷಿಕ ಶಿವಾರಾಜ್ ಪಾಟೀಲ   

ಆಲಮೇಲ‌: ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಶಿವರಾಜ್ ಎಸ್. ಪಾಟೀಲ ಬಿ.ಕಾಂ ಪದವೀಧರ . ತನ್ನ 11 ಎಕರೆ ಕೃಷಿ ಭೂಮಿಯಲ್ಲಿ ಹೊಸತೇನಾದರೂ ಮಾಡುವ ತವಕ. ಈ ಭಾಗದಲ್ಲಿ ಅಪರಿಚಿತವಾದ ಜೆರೇನಿಯಂ ಬೆಳೆಯನ್ನು ತನ್ನ 10 ಎಕರೆ ಭೂಮಿಗೆ ಹೊಂದುವಂತೆ ಕ್ಷೇತ್ರವನ್ನಾಗಿ ಮಾಡಿದ. ಅದರ ಬಗ್ಗೆ ಮಹಿತಿ ಪಡೆದುಕೊಂಡು ಅದರಲ್ಲಿ ಭರಪೂರ ಬೆಳೆ ಬೆಳೆದು, ಅಧಿಕ ಆದಾಯ ಗಳಿಸುತ್ತಿದ್ದಾರೆ.

ಜೆರೇನಿಯಂ ಬೆಳೆಯನ್ನು ನೆರೆಯ ಮಹಾರಾಷ್ಟ್ರದ ಕುಂಬಾರಿ ಹಳ್ಳಿಗೆ ಹೋಗಿ ಅಲ್ಲಿನ ರೈತನ ಹೊಲವನ್ನು ನೋಡಿಕೊಂಡು ಬಂದ ಮೇಲೆ ಮೊದಲ ಹಂತವಾಗಿ ಎರಡು ಎಕರೆ ಭೂಮಿಯಲ್ಲಿ ಬೆಳೆದರು.  ಪುಣೆಯಿಂದ ₹ 5  ದರದಲ್ಲಿ 22 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದರು. ಮೊದಲ ಮೂರು ತಿಂಗಳು ಫಸಲು ಬರುತ್ತಿದ್ದಂತೆ ಉಳಿದ 8 ಎಕರೆ ಜಮೀನಿಗೆ ಬೇಕಾಗುವಷ್ಟು ಒಂದು ಲಕ್ಷ ಸಸಿಗಳನ್ನು ತಮ್ಮಲ್ಲಿಯೇ ಬೆಳೆದ ಜೆರೇನಿಯಂ ಗಿಡದಿಂದ ಸಸಿಗಳನ್ನು ತಯಾರು ಮಾಡಿದರು. ಈಗ ಸಂಪೂರ್ಣ ಹೊಲದಲ್ಲಿ ಜೆರೇನಿಯಂ ಬೆಳೆದಿದ್ದಾರೆ.

ಈ ಮೊದಲು ಬೇರೆ ಬೆಳೆಗೆ ನಿರ್ಮಿಸಿದ್ದ ಒಂದು ಶೆಡ್‌ನಲ್ಲಿ ಈ ಬೆಳೆಯಿಂದ ಎಣ್ಣೆ ತೆಗೆಯುವ ಯಂತ್ರದ ಘಟಕ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ತಗುಲಿದ ವೆಚ್ಚ ₹ 20 ಲಕ್ಷ, ಎರಡು ವಿಶಾಲವಾದ ಪ್ಲಾಂಟ್‌ಗಳ ಮೂಲಕ ತಮ್ಮ ಜಮೀನಿನಲ್ಲಿ ಬೆಳೆದ ಸಸ್ಯವನ್ನು ಸುಗಂಧಭರಿತ ಎಣ್ಣೆ (ಸೇಂಟ್) ಯನ್ನು ತಯಾರಿಸಲು ಅನುಕೂಲ ಮಾಡಿಕೊಂಡ ಶಿವರಾಜ್, ಈ ಬೆಳೆಯಿಂದ ಎಕರೆಗೆ ಏನಿಲ್ಲವೆಂದರೂ ₹ 2 ಲಕ್ಷ ಲಾಭ ಪಡೆಯಬಹುದು ಎನ್ನುತ್ತಾರೆ.

ADVERTISEMENT

ಜೆರೇನಿಯಂ ಒಂದು ಸುಗಂಧಯುಕ್ತ ಹಾಗೂ ಔಷಧೀಯ ವನಸ್ಪತಿ. ಈ ಬೆಳೆಯಿಂದ ಎಣ್ಣೆಯನ್ನು ತೆಗೆಯಲಾಗುತ್ತಿದ್ದು, ಝೆರೇನಿಯಂ ತೈಲಕ್ಕೆ ಭಾರತದಲ್ಲಷ್ಟೆ ಅಲ್ಲದೆ, ವಿದೇಶದಲ್ಲಿ ಕೂಡ ಭಾರಿ ಬೇಡಿಕೆ ಇದೆ. ಈ ಬೆಳೆಯಿಂದ ಉತ್ಪಾದನೆಯಾಗುವ ಎಣ್ಣೆಯನ್ನು ಔಷಧ, ಪರ್ಪ್ಯೂಮ್, ಕಾಸ್ಮೆಟಿಕ್, ಮಾರ್ಜಕ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ಒಂದು ಕೆ.ಜಿ ಎಣ್ಣೆಯ ಬೆಲೆ ₹10,500 ರಿಂದ ₹20 ಸಾವಿರ ದವರೆಗೂ ಇದೆ ಎನ್ನುತ್ತಾರೆ.

ಕಬ್ಬಿನ ಬೆಳೆಗಿಂತ ಈ ಬೆಳೆಯು ಸುಲಭವಾಗಿದೆ ಹಾಗೂ ಹೆಚ್ಚಿನ ಪ್ರಮಾಣದ ಇಳುವರಿಯನ್ನು ಪಡೆದುಕೊಳ್ಳಬಹುದು. ಝೆರೇನಿಯಂ ಕೃಷಿ ನಿರ್ವಹಣೆಗೆ ಖರ್ಚು ಬಹಳ ಕಡಿಮೆ.

ಕೇವಲ ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸಿಕೊಂಡು ಒಮ್ಮೆ ನಾಟಿ ಮಾಡಿದರೆ ಮೂರು ವರ್ಷಗಳ ಕಾಲ ಫಸಲು ಪಡೆಯಬಹುದು. ಈ ಬೆಳೆಯನ್ನು ನಾಲ್ಕು ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ಮೂರು ಬಾರಿ ಕಟಾವು ಮಾಡಬಹುದು. ಇದನ್ನು ಬೆಳೆಯಲು ಅಲ್ಪ ಪ್ರಮಾಣದ ನೀರು ಸಾಕು. ಬೇರೆ ಬೆಳೆಗಳಿಗೆ ಹೋಲಿಕೆ ಮಾಡಿದರೆ ಕೀಟನಾಶಕ ಹಾಗೂ ಗೊಬ್ಬರದಲ್ಲಿ ಶೇ 75 ರಷ್ಟು ಖರ್ಚು ಕಡಿಮೆ ಎನ್ನುತ್ತಾರೆ ಶಿವರಾಜ್.

ವರ್ಷಕ್ಕೆ ಒಂದು ಎಕರೆಗೆ 30 ರಿಂದ 35 ಕಿಲೋ ಎಣ್ಣೆಯನ್ನು ಉತ್ಪಾದಿಸಬಹುದು. ಪ್ರತಿ ಎಕರೆಯಲ್ಲಿ 30 ಟನ್ ಬೆಳೆ ಬರುತ್ತದೆ. ಒಂದು ಟನ್ ನಿಂದ 1ಕೆಜಿ ಎಣ್ಣೆ ತಯಾರಾಗುತ್ತದೆ. ಅಲ್ಲದೇ, ಬೇರೆ ಊರಿನವರು ನಮ್ಮಲ್ಲಿ ಬಂದು ತಮ್ಮ ಬೆಳೆಯನ್ನು ತಂದು ಸುಗಂಧ ದ್ರವ್ಯ ಎಣ್ಣೆ ಮಾಡಿಸಿಕೊಂಡು ಹೋಗುತ್ತಾರೆ. ಪ್ರತಿ ಟನ್ ಗೆ ₹ 3 ಸಾವಿರೂ ಖರ್ಚು ತಗುಲುತ್ತದೆ ಎಂದು ಶಿವರಾಜ್ ಹೇಳಿದರು.

ಹೀಗೆ ತಯಾರಿಸಿದ ಎಣ್ಣೆಯನ್ನು ಮುಂಬೈನಲ್ಲಿರುವ ಕೇಳಕರ್ ಕಂಪನಿಯು ಕೆಜಿಗೆ ₹10 ಸಾವಿರದಿಂದ ₹20 ಸಾವಿರ ವರೆಗೆ ನೀಡಿ ಖರೀದಿಸುತ್ತಾರೆ.

ಮಾಹಿತಿಗೆ : ಶಿವರಾಜ್ ಪಾಟೀಲ ಅವರ ಮೊಬೈಲ್‌ ಸಂಖ್ಯೆ: 9686995050

ಝೆರೇನಿಯಂ ಸಸ್ಯದ ತಪ್ಪಲಿನಿಂದ ಸುಗಂಧದ್ರವ್ಯ ಎಣ್ಣೆ ತೆಗೆಯುತ್ತಿರುವ ಶಿವರಾಜ್

ಆರಂಭದಲ್ಲಿ ಎರಡು ಎಕರೆಯಷ್ಟು ಝೆರೇನಿಯಂ ಕೃಷಿ ಮಾಡಬಹುದು ಅನುಕೂಲವಿದ್ದವರು ತಮ್ಮ ಹೊಲದಲ್ಲಿ ಎಣ್ಣೆ ಉತ್ಪದನಾ ಘಟಕ ಸ್ಥಾಪಿಸಿದರೆ ಅನುಕೂಲ ಹಾಗೂ ಲಾಭವೂ ಆಗುತ್ತದೆ

-ಶಿವರಾಜ್ ಪಾಟೀಲ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.