ವಿಜಯಪುರ: ನಗರದ ನಂಜನಗೂಡು ರಾಯರ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ಉತ್ತರಾರಾಧನೆ ಭಕ್ತಿಭಾವದಿಂದ ಜರುಗಿತು.
ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ ಜರುಗಿದವು. ಬಳಿಕ ಅಷ್ಟೋತ್ತರ, ಫಲ ಪಂಚಾಮೃತ ಅಭಿಷೇಕ ಜರುಗಿತು. ಬೆಳಿಗ್ಗೆ 11ಕ್ಕೆ ಪ್ರಲ್ಹಾದ ರಾಜರ ಉತ್ಸವಮೂರ್ತಿಗೆ ಪಾದಪೂಜೆ ಸಲ್ಲಿಸುವುದರೊಂದಿಗೆ ರಾಜಬೀದಿಯ ಭವ್ಯ ರಥೋತ್ಸವಕ್ಕೆ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಚಾಲನೆ ನೀಡಿದರು.
ಅಲಂಕೃತ ವಾಹನದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಉತ್ಸವಮೂರ್ತಿ ಹಾಗೂ ಗುರುಸಾರ್ವಭೌಮರ ಭಾವಚಿತ್ರ ಆಕರ್ಷಕವಾಗಿತ್ತು. ಜುಮನಾಳದ ಪ್ರಸಿದ್ಧ ಜೋತಿಷಿ ರಾಮಭಟ್ ಮನೆತನದ ಕಿರಣಭಟ್ ಅವರ ನೇತ್ರತ್ವದ ಪಂಢರಪುರ ವಿಠ್ಠಲ ಮಂದಿರದ ಭಕ್ತರು ವಾರಕರಿ ಸಂಪ್ರದಾಯದಂತೆ ವೇಷಭೂಷಣ ತೊಟ್ಟು, ಭಜನೆ ಮಾಡುತ್ತ, ಮೆರವಣಿಗೆಯಲ್ಲಿ ಸಾಗಿದರು.
ಪ್ರಲ್ಹಾದರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಭಕ್ತರು ಮೂರ್ತಿಯೊಂದಿಗೆ ಪ್ರದಕ್ಷಿಣೆ ಹಾಕಿದರು.
ಪಂಡಿತ ಮಧ್ವೇಶಾಚಾರ್ಯ ಜೋಶಿ (ಮುತ್ತಗಿ) ರಾಯರ ಮಹಿಮೆ ಕುರಿತು ಪ್ರವಚನ ನೀಡಿದರು. ಬಳಿಕ ಶ್ರೀಮಠದ ಆವರಣದಲ್ಲಿ ನಡೆದ ರಥೋತ್ಸವದಲ್ಲಿ ಸಂಗೀತ, ವಾದ್ಯ, ನೃತ್ಯ ಜರುಗಿತು. ಬಳಿಕ ರಥೋತ್ಸವದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು.
ಬಳಿಕ ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ, ಪಾದಪೂಜೆ ನೆರವೇರಿಸಲಾಯಿತು. ಆನಂತರ ಅರ್ಚನೆ ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ ಜರುಗಿ ತೀರ್ಥ ಪ್ರಸಾದ ನಡೆಯಿತು.
ಶ್ರೀಮಠದ ಅರ್ಚಕ ರವಿ ಆಚಾರ್ಯ, ಶ್ರೀಧರಾಚಾರ್ಯರು, ದಾಮೋದರಾಚಾರ್ಯ, ಪವಮಾನ ಜೋಶಿ, ವಾಮನರಾವ ದೇಶಪಾಂಡೆ, ಶ್ರೀಕೃಷ್ಣ ಪಡಗಾನೂರ, ಅಶೋಕ ದಿಕ್ಷಿತ, ಶಾಮಭಟ್ಟ ಜೋಶಿ, ಶಂಭುಭಟ್ ಜೋಶಿ, ಕಿರಣ ಕುಲಕರ್ಣಿ, ಬಂಡಾಚಾರ್ಯ ಜೋಶಿ(ಕೂಡಗಿ) ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.