ವಿಜಯಪುರ: ವಿಶ್ವವಿಖ್ಯಾತ ಗೋಳಗುಮ್ಮಟದ ಗೋಡೆಯನ್ನು ಅಲಂಕರಿಸಿರುವ ‘ಸಜ್ಜಾ’ದ ಕಪ್ಪು ಶಿಲೆಯೆ ಕಲಾತ್ಮಕ ಕಲ್ಲುಗಳುಸಡಿಲಗೊಂಡು ಕಳಚಿಬಿದ್ದಿವೆ. ಇದರಿಂದಐತಿಹಾಸಿಕ ಸ್ಮಾರಕದ ಸೌಂದರ್ಯಕ್ಕೆ ದಕ್ಕೆಯಾಗಿದೆ.
1626–56ರಲ್ಲಿ ಆದಿಲ್‌ಶಾಹಿ ಅರಸರ ಕಾಲದಲ್ಲಿನಿರ್ಮಾಣವಾಗಿರುವ ಸ್ಮಾರಕದ ಸುಮಾರು 150 ಅಡಿ ಎತ್ತರದಲ್ಲಿರುವ ಆರನೇ ಅಂತಸ್ತಿನ ಗೋಡೆಯ ಸುತ್ತ ಕಪ್ಪು ಕಲ್ಲಿನಿಂದ ನಿರ್ಮಿಸಿರುವ ಕಲಾತ್ಮಕ ಸಜ್ಜಾ ಮಳೆ, ಗಾಳಿ, ಬಿಸಿಲಿನ ಹೊಡೆತಕ್ಕೆ ಶಿಥಿಲಿಗೊಂಡು ಬಿದ್ದಿದೆ.
ಈಗಾಗಲೇ ಗುಮ್ಮಟದ ಗೋಡೆಗಳ ಹೊರ ಭಾಗದ ಮೇಲೆ ಇರುವ ಶಿಲೆಯಿಂದ ರಚನೆಯಾಗಿರುವ ಪಾರಿವಾಳಾಕೃತಿ, ಆನೆಗಳಾಕೃತಿ, ಕಮಲದಳಾಕೃತಿ ಮತ್ತು ಕಂಠಹಾರಾಕೃತಿಯ ಸುಂದರವಾದ ಕೆತ್ತನೆಯ ಶಿಲ್ಪಗಳು ಹಾಗೂ ಸಜ್ಜಾದ ಕೆಲ ಭಾಗ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿ ಉದುರಿಬಿದ್ದಿವೆ.
ಸಜ್ಜಾಕ್ಕೆ ಅಳವಡಿಸಿರುವ ಕಲ್ಲು ಕುಸಿದು ಕೆಳಗೆ ಬಿದ್ದಿರುವ ಸ್ಥಳದಲ್ಲಿ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಇರುವುದರಿಂದ ಹಾಗೂ ನಿರ್ಜನ ಪ್ರದೇಶವಾಗಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಸಜ್ಜಾ ಕುಸಿದುಬಿದ್ದು ಒಂದು ವಾರವಾದರೂ ಅದನ್ನು ದುರಸ್ತಿ ಮಾಡುವುದಿರಲಿ, ಬಿದ್ದಿರುವ ಕಲ್ಲುಗಳನ್ನು ಎತ್ತಿ ಸಂರಕ್ಷಿಸುವುದಕ್ಕೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸ್ಥಳೀಯ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಗಮನ ಹರಿಸದೇ, ನಿರ್ಲಕ್ಷ್ಯ ವಹಿಸಿರುವುದು ಪ್ರವಾಸಿಗರ ಹಾಗೂ ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಕೇಂದ್ರ ಕಚೇರಿಗೆ ವರದಿ:ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಧಾರವಾಡ ವಲಯ ಅಧೀಕ್ಷಕ ಪುರಾತತ್ವಜ್ಞ(ಸೂಪರಿಟೆಂಡಿಗ್ ಆರ್ಕಿಯಾಲಜಿಸ್ಟ್) ವಿ.ಎಸ್.ಬಡಿಗೇರ, ಸುಮಾರು 400 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗೋಳಗುಮ್ಮಟದ ಕೆಲ ಭಾಗ ಶಿಥಿಲಗೊಂಡಿರುವ ಕಾರಣ ಸಜ್ಜಾಕ್ಕೆ ಅಳವಡಿಸಿರುವ ಕಲ್ಲುಗಳು ಸಡಿಲಗೊಂಡು ಕುಸಿದುಬಿದ್ದಿದೆ. ಈ ಕುರಿತು ಇಲಾಖೆಯ ನವದೆಹಲಿಯ ಕೇಂದ್ರ ಕಚೇರಿಗೆ ವರದಿ ಮಾಡಲಾಗಿದೆ ಎಂದು ಹೇಳಿದರು.
ಗೋಳಗುಮ್ಮಟದ ಶಿಥಿಲಗೊಂಡಿರುವ ಹಾಗೂ ಕುಸಿದುಬಿದ್ದಿರುವ ಭಾಗವನ್ನು ದುರಸ್ತಿ ಮಾಡುವ ಸಂಬಂಧ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಒಮ್ಮೆಗೆ ದುರಸ್ತಿ ಮಾಡಲು ಸಾಧ್ಯವಿಲ್ಲ. ತಾಂತ್ರಿಕ ತಜ್ಞರ ಸಲಹೆ ಮತ್ತು ದೊಡ್ಡ ಮೊತ್ತದ ಹಣಕಾಸು ಅಗತ್ಯ ಇದೆ. ಹೀಗಾಗಿ ಕೇಂದ್ರ ಕಚೇರಿಯಿಂದ ಅನುಮತಿ ದೊರೆತ ಬಳಿಕ ಅದರ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
****
ಗುಮ್ಮಟದ ಸಜ್ಜಾದ ಕಲಾತ್ಮಕ ಕಲ್ಲು ಸಡಿಲಗೊಂಡು ಬಿದ್ದಿದೆ. ಈ ಮೊದಲೂ ಕೆಲ ಭಾಗ ಬಿದ್ದಿದೆ.ದೆಹಲಿಯಎಎಸ್‌ಐ ಕೇಂದ್ರ ಕಚೇರಿಯಿಂದ ಹಣಕಾಸು, ತಾಂತ್ರಿಕ ಒಪ್ಪಿಗೆ ದೊರೆತ ಬಳಿಕ ದುರಸ್ತಿ ಮಾಡಲಾಗುವುದು.
-ವಿ.ಎಸ್.ಬಡಿಗೇರ,ಸೂಪರಿಟೆಂಡಿಗ್ ಆರ್ಕಿಯಾಲಜಿಸ್ಟ್, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಧಾರವಾಡ ವಲಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.