ವಿಜಯಪುರ: ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್, ಸಂಗೀತ ಮಹಲ್, ಆನಂದ ಮಹಲ್, ಗಗನ್ ಮಹಲ್ ಸೇರಿದಂತೆ ಐತಿಹಾಸಿಕ ಸ್ಮಾರಕಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ವಿಜಯಪುರ ನಗರ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.
2019ರ ಕೋವಿಡ್ ಲಾಕ್‌ಡೌನ್ ಬಳಿಕ ಗುಮ್ಮಟನಗರಿಗೆ ಬರುವ ದೇಶಿ, ವಿದೇಶಿ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕ್ಷೀಣಗೊಂಡಿತ್ತು. ಬಳಿಕ 2021–22ರಿಂದ ದೇಶಿ ಪ್ರವಾಸಿಗರು ಎಂದಿನಂತೆ ಬಂದು ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ, ವಿದೇಶಿ ಪ್ರವಾಸಿಗರು ಇತ್ತ ಮುಖ ಮಾಡುತ್ತಿಲ್ಲದಿರುವುದು ಪ್ರವಾಸೋದ್ಯಮಕ್ಕೆ ದೊಡ್ಡ ಹಿನ್ನೆಡೆಯಾಗಿದೆ.
2021–22ರಲ್ಲಿ ಗೋಳಗುಮ್ಮಟಕ್ಕೆ ಕೇವಲ 29 ಮತ್ತು ಇಬ್ರಾಹಿಂರೋಜಾಕ್ಕೆ 20 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 2022–23ರಲ್ಲಿ ಗೋಳಗುಮ್ಮಟಕ್ಕೆ 688 ಮತ್ತು ಇಬ್ರಾಹಿಂರೋಜಾಕ್ಕೆ 604 ಜನ ವಿದೇಶಿ ಯಾತ್ರಿಕರು ಭೇಟಿ ನೀಡಿ, ಸ್ಮಾರಕಗಳ ಸೌಂದರ್ಯ ಸವಿದಿದ್ದಾರೆ. ವಿಜಯಪುರಕ್ಕೆ ಭೇಟಿ ನೀಡಿದ ವಿದೇಶಿಗರಲ್ಲಿ ಫ್ರಾನ್ಸ್ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಉಪ ನಿರ್ದೇಶಕ ವಿಜಯ ‘ಪ್ರಜಾವಾಣಿ’ಗೆ ತಿಳಿಸಿದರು.
ಗೋಳಗುಮ್ಮಟ ಇಬ್ರಾಹಿಂರೋಜಾ ಬಾರಾ ಕಮಾನ್‌ಗೆ ವಿದೇಶಿಗರನ್ನು ಆಕರ್ಷಿಸುವ ವಾತಾವರಣ ಮೂಲಸೌಲಭ್ಯ ಇಲ್ಲ. ಜೊತೆಗೆ ಈ ಸ್ಮಾರಕಗಳು ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾದರೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ರಾಜಶೇಖರ ಎಂ.ಕಲ್ಯಾಣಮಠ, ಉಪಾಧ್ಯಕ್ಷ, ಕರ್ನಾಟಕ ಪ್ರವಾಸಿ ಮಾರ್ಗದರ್ಶಿಗಳ ಸಂಘ, ವಿಜಯಪುರ
ನೆರೆಯ ಬಾಗಲಕೋಟೆ ಜಿಲ್ಲೆಯ ಪ್ರವಾಸಿತಾಣಗಳಾದ ಪಟ್ಟದಕಲ್ಲು, ಐಹೊಳೆ, ಬಾದಾಮಿ ಹಾಗೂ ವಿಜಯನಗರ ಜಿಲ್ಲೆಯ ಹಂಪಿಗೆ ಕಳೆದ ಎರಡು ವರ್ಷಗಳಲ್ಲಿ ಸಾವಿರಾರು ವಿದೇಶಿ ಪ್ರವಾಸಿಗರು ಪ್ರತಿನಿತ್ಯ ಭೇಟಿ ನೀಡಿ, ಆನಂದಿಸುತ್ತಿದ್ದಾರೆ! ಈ ನಿಟ್ಟಿನಲ್ಲಿ ಐತಿಹಾಸಿಕ ವಿಜಯಪುರ ನಗರ ವಿದೇಶಿ ಪ್ರವಾಸಿಗರ ಆಕರ್ಷಣೆಯಲ್ಲಿ ಹಿಂದೆ ಬಿದ್ದಿರುವುದು ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ.
ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರ ಸ್ಮಾರಕಗಳ ಬಗ್ಗೆ ಸರಿಯಾದ ಮಾಹಿತಿ, ಪ್ರಚಾರ ಇಲ್ಲದಿರುವುದು ಹಾಗೂ ವಿಜಯಪುರಕ್ಕೆ ಬರಲು ವಿದೇಶಿ ಪ್ರವಾಸಿಗರಿಗೆ ಸೂಕ್ತ ಸಾರಿಗೆ ಸಂಪರ್ಕದ ಕೊರತೆಯ ಜೊತೆಗೆ ಅಗತ್ಯ ಮೂಲಸೌಲಭ್ಯ ಸಿಗದಿರುವುದು ಹಾಗೂ ಪ್ರವಾಸಿತಾಣಗಳಲ್ಲಿ ಆಹ್ಲಾದಕರ ವಾತಾವರಣ ಲಭಿಸದಿರುವುದೇ ಪ್ರವಾಸಿಗರ ಕ್ಷೀಣಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲು ಸಜ್ಜಾಗಿರುವ ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧಿಗಳು, ಪ್ರವಾಸೋದ್ಯಮ ಇಲಾಖೆಯು ವಿಜಯಪುರಕ್ಕೆ ದೇಶಿ, ವಿದೇಶಿ ಪ್ರವಾಸಿಗಳ ಆಕರ್ಷಣೆಗೆ ಏನಾದರೂ ಕ್ರಮಕೈಗೊಳ್ಳುವರೇ ಅಥವಾ ಕಾಟಾಚಾರಕ್ಕೆ ಪ್ರವಾಸೋದ್ಯಮ ದಿನ ಆಯೋಜಿಸುವರೇ ಎಂಬುದನ್ನು ಕಾದುನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.