ಬಬಲೇಶ್ವರ (ವಿಜಯಪುರ):‘ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಯ ಕೆಲ ಮನೆ, ದೇಗುಲಗಳಲ್ಲಿ ಕಳವು ನಡೆಸಿದ್ದ ಏಳು ಅಂತರರಾಜ್ಯ ದರೋಡೆಕೋರನ್ನು ಬಂಧಿಸಿ, ಆರೋಪಿಗಳಿಂದ ₹ 35.07 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ತಿಳಿಸಿದರು.
ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಗಿರಗಾಂವ ವಲಿದೊಡ್ಡಿಯ ಬಬ್ಲು ಚವ್ಹಾಣ, ಬೆಳ್ಳುಂಡಗಿಯ ಮಚ್ಚೇಂದ್ರ ಅಲಿಯಾಸ್ ಅನಿಲ ಚವ್ಹಾಣ, ಶ್ರೀಶೈಲ ಚವ್ಹಾಣ, ಸೋನ್ಯಾಳದ ಸುಲ್ಪ್ಯಾ ಅಲಿಯಾಸ್ ಸಂತೋಷ ಶಿಂಧೆ, ವಕೀಲ್ಯಾ ಅಲಿಯಾಸ್ ರವಿ ಶಿಂಧೆ, ಗೋವಿಂದ ಶಿಂಧೆ, ಇಂಡಿ ತಾಲ್ಲೂಕಿನ ಕನಕನಾಳದ ಮಚ್ಚೇಂದ್ರ ಢಗೆ ಬಂಧಿತರು ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವಿಜಯಪುರ ಜಿಲ್ಲೆಯ ಸಾರವಾಡ, ಕನಮಡಿ, ಹೊರ್ತಿ, ಚಿಕ್ಕರೂಗಿಯಲ್ಲಿ ಮನೆಗಳವು, ಇಟ್ಟಂಗಿಹಾಳ, ಹಿರೇರೂಗಿ, ಮಿರಗಿ ಗ್ರಾಮದ ದೇಗುಲಗಳಲ್ಲಿ ಕಳವು ಹಾಗೂ ಬಾಗಲಕೋಟೆ ಜಿಲ್ಲೆಯ ನಾವಲಗಿ, ಕುಳಲಿ, ಮಳಲಿ ಮತ್ತು ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಈ ತಂಡ ಮನೆಗಳವು ಮಾಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರಿಂದ 1101 ಗ್ರಾಂ ಬಂಗಾರದ ಆಭರಣ, 2100 ಗ್ರಾಂ ತೂಕದ ಬೆಳ್ಳಿ ಆಭರಣ, ₹ 15,600 ನಗದು, ಕಳವಿಗೆ ಬಳಸಿದ ₹ 1.05 ಲಕ್ಷ ಮೌಲ್ಯದ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದೇವೆ. ಇವರ ವಿರುದ್ಧ ಮಹಾರಾಷ್ಟ್ರ, ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ ಎಂದು ಎಸ್‌ಪಿ ಹೇಳಿದರು.
ಡಿವೈಎಸ್‌ಪಿ ಡಿ.ಅಶೋಕ ಮಾರ್ಗದರ್ಶನದಲ್ಲಿ ವಿಜಯಪುರ ಗ್ರಾಮೀಣ ವೃತ್ತದ ಸಿಪಿಐ ಶಂಕರಗೌಡ ಬಿರಾದಾರ ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.