ಬಸವನಬಾಗೇವಾಡಿ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಸೇರಿದಂತೆ ಹೊಸ ಆವಿಷ್ಕಾರದಕಲೆಯನ್ನು ಕರಗತ ಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದ ಆದರ್ಶ ವಿದ್ಯಾಲಯದ (ಆರ್.ಎಂ.ಎಸ್.ಎ) ಅಟಲ್ ಟಿಂಕರಿಂಗ್ ಲ್ಯಾಬ್ ಪ್ರಮುಖ ಪಾತ್ರ ವಹಿಸುತ್ತಿದೆ.
ಶಾಲೆಯಲ್ಲಿ 1,500 ಚದರ ಅಡಿ ಸುಸಜ್ಜಿತ ವಿಶಾಲ ಕೊಠಡಿಯಲ್ಲಿ ಪ್ರತಿದಿನ ವಿದ್ಯಾರ್ಥಿಗಳು ಸಾಫ್ಟವೇರ್ ಎಂಜಿನಿಯರ್ ಹಾಗೂ ವಿಜ್ಞಾನಿಗಳ ಹಾಗೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಜಿಲ್ಲೆಯಲ್ಲೇ ಪ್ರಥಮ ಲ್ಯಾಬ್ ಹೊಂದಿದ ಹೆಗ್ಗಳಿಕೆ ಈ ಶಾಲೆ ಇದು.
₹ 20 ಲಕ್ಷ ವೆಚ್ಚದ ಲ್ಯಾಬ್‌ನಲ್ಲಿ ರೋಬೋಟ್, ತ್ರೀಡಿ ಪ್ರಿಂಟರ್, ರೋಬೋಟ್ ಕಾರ್, ಸೆನ್ಸರ್ ದಿಂದ ಮಳೆ ಪ್ರಮಾಣ ಕಂಡು ಹಿಡಿಯವುದು, ನೀರಿನ ಶುದ್ಧತೆ ಮಾಪನ ಮಾಡುವುದು, ರಕ್ತದ ಗುಂಪು ತಪಾಸಣೆ ಹಾಗೂ ರೋಗಗಳ ಲಕ್ಷಣ ಕಂಡು ಹಿಡಿಯುವುದು, ಸ್ವಯಂ ಚಾಲಿತ ಬೋರ್ಡ್ (ಧ್ವನಿಯು ಅಕ್ಷರ ರೂಪದಲ್ಲಿ ರೂಪಾಂತರಗೊಂಡು ಬೋರ್ಡ್ ಮೇಲೆ ಕಾಣಿಸಿಕೊಳ್ಳುವುದು), ಡ್ರೋಣ್, ಟೆಲಿಸ್ಕೋಪ್, ಲ್ಯಾಪಟ್ಯಾಪ್ ಸೇರಿದಂತೆ ಲ್ಯಾಬ್‌ನಲ್ಲಿ ₹10 ಲಕ್ಷ ವೆಚ್ಚದ ವಿವಿಧ ಉಪಕರಣಗಳಿವೆ. ಲ್ಯಾಬ್ ನಿರ್ವಹಣೆಗಾಗಿ ಪ್ರತಿ ವರ್ಷ ₹2 ಲಕ್ಷ ದಂತೆ ಐದು ವರ್ಷದ ನಿರ್ವಹಣೆಗಾಗಿ ₹10 ಲಕ್ಷ ವೆಚ್ಚ ಮಾಡಲಾಗುತ್ತಿದೆ.
8 ರಿಂದ 10ನೇ ತರಗತಿಯ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ದಿನ ಶಾಲಾ ಅವಧಿ ನಂತರ ಒಂದು ಗಂಟೆ ವಿಶೇಷ
ತರಬೇತಿ ನೀಡಲಾಗುತ್ತಿದೆ. ಆರಂಭದಲ್ಲಿ ಉಪಕರಣಗಳನ್ನು ಪರಿಚಯಿಸುವುದು, ಅವುಗಳ ಕಾರ್ಯ ವಿಧಾನ ತಿಳಿಸಿಕೊಡುವ ಮೂಲಕ ಮಕ್ಕಳಲ್ಲಿ ಹೊಸ ಅವಿಷ್ಕಾರದ ಗುಣ ಬೆಳೆಸಲಾಗುತ್ತಿದೆ. ವಿದ್ಯಾರ್ಥಿಗಳ ಗುಂಪು ರಚಿಸಿ ಅವರಿಗೆ ಒಂದು ಮಾದರಿ ತಯಾರಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಪೂರಕವಾಗಲಿದೆ ಎನ್ನುತ್ತಾರೆ ತರಬೇತುದಾರ ಶಿಕ್ಷಕ ಪ್ರಸನ್ ಹೆಗಡೆ.
ಆದರ್ಶ ಶಾಲೆಯ ವಿದ್ಯಾರ್ಥಿಗಳಲ್ಲದೇ ಸುತ್ತಮುತ್ತಲಿನ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶಿಕ್ಷಕರಿಗೆ ಲ್ಯಾಬ್‌ನ ಉದ್ದೇಶ, ಅದರ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡುವ ಯೋಜನೆ ಹೊಂದಿದೆ. ಮೂರು ದಿನದ ತರಬೇತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ವಿಶೇಷ ತರಬೇತಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯು ಈ ಶಾಲೆಯಲ್ಲಿದೆ.
ಲ್ಯಾಬ್ ಉಸ್ತುವಾರಿ ಪಡೆದು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಶಿಕ್ಷಕ ಪ್ರಸನ್ ಹೆಗಡೆ ಅವರು ಬೆಂಗಳೂರಿನಲ್ಲಿ ಒಂದು ವಾರ ವಿಶೇಷ ತರಬೇತಿ ಪಡೆದು ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರದಗುಣ ಬೆಳೆಸುವ ನಿಟ್ಟಿನಲ್ಲಿ ತರಬೇತುಗೊಳಿಸುತಿದ್ದಾರೆ. ಲ್ಯಾಬ್ ಆರಂಭವಾದ ಒಂದು ತಿಂಗಳಲ್ಲೇ ವಿದ್ಯಾರ್ಥಿಗಳು ಸಂಗೀತಕ್ಕೆ ಅನುಗುಣವಾಗಿ ಬಣ್ಣ ಬಣ್ಣದ ಬಲ್ಬ್‌ಗಳು ಉರಿಯುವ ವಿಧಾನವನ್ನು ಅವಿಷ್ಕಾರಗೊಳಿಸಿದ್ದಾರೆ. ರಿಮೋಟ್ ಮೂಲಕ ವಿದ್ಯುತ್ ಬಲ್ಬ್‌ಗಳನ್ನು ಉರಿಸುವ, ಆರಿಸುವ ವಿಧಾನ, ಟ್ರಾಫಿಕ್ ಸಿಗ್ನಲ್ ಲೈಟ್ ಸೇರಿದಂತೆ ವಿವಿಧ ಮಾದರಿಗಳನ್ನು ತಯಾರಿಸುವಲ್ಲಿ ಶಾಲೆಯ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.
*
ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲು ಹಾಗೂ ಹೊಸ ಅವಿಷ್ಕಾರ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಲ್ಯಾಬ್ ಸಹಕಾರಿಯಾಗಿದೆ
-ಎಸ್.ಟಿ.ಹರಿಜನ, ಮುಖ್ಯೋಪಾಧ್ಯಾಯ
*
ಪ್ರೌಢಶಾಲಾ ಹಂತದಲ್ಲೇ ಹೊಸ ಅವಿಷ್ಕಾರ ಮಾಡುವುದನ್ನು ಕಲಿಯುತ್ತಿರುವುದು ಸಂತಸ ತಂದಿದೆ. ಇದರಿಂದ ಉಪಯೋಗವಾಗಲಿದೆ.
-ತೇಜಶ್ರೀ ಉತ್ನಾಳ, 9ನೇ ತರಗತಿ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.