ADVERTISEMENT

‘ಸರ್ವಪಕ್ಷೀಯ ಸರ್ಕಾರದ ಆಡಳಿತ ನಡೆಯಲಿ’

ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2018, 15:58 IST
Last Updated 11 ಜುಲೈ 2018, 15:58 IST

ವಿಜಯಪುರ:‘ರಾಜ್ಯದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಗೆ ಸರ್ವಪಕ್ಷೀಯ ಸರ್ಕಾರದ ಆಡಳಿತವೇ ಸೂಕ್ತ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

‘ಯಾವಾಗ ಸರ್ಕಾರ ಬೀಳಲಿದೆ ? ಎಂಬ ಕುತೂಹಲಕ್ಕೆ ಇತಿಶ್ರೀ ಹಾಕಲು, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದನ್ನು ತಡೆಯಲು, ಶಾಸಕರ ಕುದುರೆ ವ್ಯಾಪಾರ, ಆಪರೇಷನ್‌, ರೆಸಾರ್ಟ್‌ ರಾಜಕಾರಣ ಭವಿಷ್ಯದಲ್ಲಿ ನಡೆಯದಂತೆ ತಡೆಗಟ್ಟಲು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕು. ಇಲ್ಲದಿದ್ದರೇ ಸರ್ವಪಕ್ಷೀಯ ಸರ್ಕಾರ ಅಸ್ತಿತ್ವಕ್ಕೆ ಬರಬೇಕು’ ಎಂದು ಬುಧವಾರ ರಾತ್ರಿ ಇಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ಈ ಹಿಂದೆ ಕಾಂಗ್ರೆಸ್‌–ಜೆಡಿಎಸ್‌, ಬಿಜೆಪಿ–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಮೂರು ಪಕ್ಷಗಳು ಸೇರಿ ಆಡಳಿತ ನಡೆಸಿದರೆ, ಸರ್ಕಾರ ಪತನದ ಭಯವೇ ಸೃಷ್ಟಿಯಾಗಲ್ಲ’ ಎಂದು ಹೇಳಿದರು.

ADVERTISEMENT

‘ವಿದೇಶಗಳಲ್ಲಿ ಯುದ್ಧದ ಸಮಯದಲ್ಲಿ ಸರ್ವಪಕ್ಷೀಯ ಸರ್ಕಾರದ ಆಡಳಿತ ನಡೆದಿದೆ. ನಮ್ಮಲ್ಲೂ ಈ ಸರ್ಕಾರ ನಡೆಯಲಿ. ಮೂರು ಪಕ್ಷಗಳು ಒಂದಾಗಿ ತಮ್ಮ ಸಾಮಾನ್ಯ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವಂತಾಗಲಿ’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ಕಾಂಗ್ರೆಸ್ಸಿಗರೇ ಆದ ಎಚ್‌.ಕೆ.ಪಾಟೀಲ ಸೇರಿದಂತೆ ಇತರರು ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಧ್ವನಿ ಎತ್ತಿದ್ದಾರೆ. ನಾವೂ ಎಲ್ಲವನ್ನೂ ಸಮಗ್ರವಾಗಿ ನೋಡುತ್ತೇವೆ. ಮುಖ್ಯಮಂತ್ರಿಗಳು ದಕ್ಷಿಣದವರಿಗೆ ಬೇಸರವಾಗದಂತೆ, ಉತ್ತರದವರಿಗೆ ಅಸಮಾಧಾನವಾಗದಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಲಿ’ ಎಂದು ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಪ್ರತಿಕ್ರಿಯಿಸಿದರು.

‘ರೈತರಿಗೆ ಅನುಕೂಲವಾಗುವ ಸಾಲಮನ್ನಾ ಯೋಜನೆ ಜಾರಿಯಾಗಲಿ. ಆದರೆ ಇದರಿಂದ ಯಾರಿಗೂ ಅನ್ಯಾಯವಾಗಬಾರದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.