ADVERTISEMENT

ಬಸವನಬಾಗೇವಾಡಿ: ಕುಡಿಯುವ ನೀರಿಗೆ ಗ್ರಾಮಸ್ಥರ ಬವಣೆ

ಪ್ರಕಾಶ ಎನ್.ಮಸಬಿನಾಳ
Published 27 ಮಾರ್ಚ್ 2024, 4:59 IST
Last Updated 27 ಮಾರ್ಚ್ 2024, 4:59 IST
ಬಸವನಬಾಗೇವಾಡಿ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತೋಟಕ್ಕೆ ತೆರಳುತ್ತಿರುವ ಮಹಿಳೆಯರು
ಬಸವನಬಾಗೇವಾಡಿ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತೋಟಕ್ಕೆ ತೆರಳುತ್ತಿರುವ ಮಹಿಳೆಯರು   

ಬಸವನಬಾಗೇವಾಡಿ: ತಾಲ್ಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಬಾಗೇವಾಡಿಯಿಂದ ಮೂರುವರೆ ಕಿ.ಮೀ ಅಂತರದಲ್ಲಿರುವ ನಾಗೂರ ಗ್ರಾಮ ಹಲವು ಮೂಲ ಸೌಲಭ್ಯ ಕೊರತೆಯಿಂದ ಸೊರಗಿದೆ. ಅಂದಾಜು 5,000 ಜನಸಂಖ್ಯೆ ಇರುವ ಗ್ರಾಮ ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಆರೇಶಂಕರ ಕೆರೆಯಿಂದ ನೀರು ಸರಬರಾಜು ಆಗುತ್ತಿದ್ದರೂ, ಅದು ಕುಡಿಯಲು ಯೋಗ್ಯವಾಗಿರದ ಕಾರಣ ಗ್ರಾಮಸ್ಥರು ಕುಡಿಯುವ ನೀರಿನ ಕೊರತೆ ಎದುರಿಸುವಂತಾಗಿದೆ.

ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಒಂದು ಘಟಕ ದುರಸ್ತಿಯಲ್ಲಿರುವುದರಿಂದ ಒಂದೇ ಘಟಕದ ನೀರು ಸಾಕಾಗುತ್ತಿಲ್ಲ. ಜನರು ನೀರಿಗಾಗಿ ಗ್ರಾಮದ ಸುತ್ತಮುತ್ತಲಿನ ತೋಟಗಳ ಕೊಳವೆ ಬಾವಿಗೆ ಅಲೆದಾಡುವಂತಾಗಿದೆ. ಬೇಸಿಗೆಯಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎನ್ನುವುದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ಗ್ರಾಮಕ್ಕೆ ನಿತ್ಯ ಬಸವನಬಾಗೇವಾಡಿಯಿಂದ ಬೆಳಿಗ್ಗೆ ಮತ್ತು ಸಂಜೆ ಬಸ್ ಬರುತ್ತಿದೆ. ಆದರೆ ಬಸವನಬಾಗೇವಾಡಿಯ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿಲ್ಲ. ಶಾಲಾ, ಕಾಲೇಜು ಆರಂಭದ ಮುನ್ನ, ಶಾಲೆ ಬಿಟ್ಟ ನಂತರ ಬಸ್ ಬರುವಂತಾದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನಕೂಲವಾಗಲಿದೆ. ‘ಬಸವನಬಾಗೇವಾಡಿಯಿಂದ ನಿಡಗುಂದಿಗೆ ತೆರಳುವ ಸಿಟಿ ಬಸ್ ಶಾಲಾ, ಕಾಲೇಜಿನ ಸಮಯಕ್ಕನುಗುಣವಾಗಿ ನಾಗೂರ ಗ್ರಾಮದ ಮಾರ್ಗವಾಗಿ ಹೋಗುವಂತಾಗಬೇಕು’ ಎನ್ನುವುದು ಗ್ರಾಮದ ವಿದ್ಯಾರ್ಥಿಗಳ ಒತ್ತಾಯ.

ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ. ಗ್ರಾಮದ ಸಮೀಪದಲ್ಲಿನ ಗೋಮಾಳ ಜಾಗೆಯಲ್ಲಿ ಪ್ರೌಡಶಾಲೆ ಕಟ್ಟಡ ನಿರ್ಮಾಣವಾದರೆ ನಾಗೂರ ಗ್ರಾಮದ ವಿದ್ಯಾರ್ಥಿಗಳು ಸೇರಿದಂತೆ, ಮಣ್ಣೂರ, ಮಣ್ಣೂರ ತಾಂಡಾ, ಉಪ್ಪಲದಿನ್ನಿ, ಉಪ್ಪಲದಿನ್ನಿ ತಾಂಡಾ, ನಾಗೂರ ತಾಂಡಾ 1 ಮತ್ತು 2, ಕರಿಹಳ್ಳ ತಾಂಡಾ, ಬಿಂಗೆಪ್ಪನಹಳ್ಳ, ಬಿಂಗೆಪ್ಪನಹಳ್ಳ ತಾಂಡಾ ವಿದ್ಯಾರ್ಥಿಗಳಿಗೆ ಅನಕೂಲವಾಗಲಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಂದೇನವಾಜ ವಾಲೀಕಾರ.

ಗ್ರಾಮದಲ್ಲಿನ ಯಮನೂರೇಶ್ವರ ದೇವಸ್ಥಾನಕ್ಕೆ ಪ್ರತಿನಿತ್ಯ ಹಿಂದೂ, ಮುಸ್ಲಿಂ ಧರ್ಮದ ಜನರು ಬರುತ್ತಾರೆ. ಕಳೆದ 8 ವರ್ಷಗಳ ಹಿಂದೆ ₹35 ಲಕ್ಷ ವೆಚ್ಚದಲ್ಲಿ ಈ ದೇವಸ್ಥಾನ ಜೋರ್ಣೋದ್ಧಾರ ಗೊಳಿಸಲಾಗಿತ್ತು. ಪ್ರತಿ ವರ್ಷ ಹೋಳಿ ಹಬ್ಬದಲ್ಲಿ 5 ದಿನಗಳವರೆಗೆ ನಡೆಯುವ ಜಾತ್ರೆಗೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಭಕ್ತರು ಬಂದು ತಮ್ಮ ಹರಕೆ ತೀರಿಸುತ್ತಾರೆ.

ಬಸವನಬಾಗೇವಾಡಿ ತಾಲ್ಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನ

ಗ್ರಾಮದಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. 3 ಕೊಳವೆಬಾವಿ ಹಾಕಿಸಿದರೂ ನೀರು ಬಂದಿಲ್ಲ. ಜಲಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಈಗಾಗಲೇ ಭೂಮಿಪೂಜೆ ನೆರವೇರಿದೆ

-ಎಸ್.ಆರ್.ತೋಳನೂರ ಪಿಡಿಒ‌ ಮಣ್ಣೂರ ಗ್ರಾ.ಪಂ

ಗ್ರಾಮದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಅಂತರಜಲಮಟ್ಟ ಹೆಚ್ಚಳಕ್ಕಾಗಿ ಕೆರೆ ನಿರ್ಮಾಣ ಮಾಡಬೇಕು

-ಮಹಾಂತೇಶ ಗೌರಾ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.