ADVERTISEMENT

ತಿಕೋಟಾ: ಪೇರಲ ಕೃಷಿಯಲ್ಲಿ ಲಾಭದ ನಿರೀಕ್ಷೆ

4 ಎಕರೆ ಜಮೀನಿನಲ್ಲಿ ₹ 4 ಲಕ್ಷ ಖರ್ಚು; 2 ಸಾವಿರ ಸಸಿ ನಾಟಿ

ಪರಮೇಶ್ವರ ಎಸ್.ಜಿ.
Published 20 ಸೆಪ್ಟೆಂಬರ್ 2024, 6:04 IST
Last Updated 20 ಸೆಪ್ಟೆಂಬರ್ 2024, 6:04 IST
ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ಕ್ರಾಸ್ ಹತ್ತಿರ ಜತ್ತ-ವಿಜಯಪುರದ ರಾಜ್ಯ ಹೆದ್ದಾರಿಯ ಪಕ್ಕ ಇರುವ ತಮ್ಮ ಪೇರಲ ತೋಟದಲ್ಲಿ ರೈತ ಮಲ್ಲಿಕಾರ್ಜುನ ಬನಪ್ಪಾ ಮೇತ್ರಿ
ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ಕ್ರಾಸ್ ಹತ್ತಿರ ಜತ್ತ-ವಿಜಯಪುರದ ರಾಜ್ಯ ಹೆದ್ದಾರಿಯ ಪಕ್ಕ ಇರುವ ತಮ್ಮ ಪೇರಲ ತೋಟದಲ್ಲಿ ರೈತ ಮಲ್ಲಿಕಾರ್ಜುನ ಬನಪ್ಪಾ ಮೇತ್ರಿ    

ತಿಕೋಟಾ: ಜತ್ತ-ವಿಜಯಪುರದ ರಾಜ್ಯ ಹೆದ್ದಾರಿಯ ಸೋಮದೇವರಹಟ್ಟಿ ಹಟ್ಟಿ ಕ್ರಾಸ್ ಹತ್ತಿರ ಇರುವ ರೈತ ಮಲ್ಲಿಕಾರ್ಜುನ ಬನಪ್ಪಾ ಮೇತ್ರಿ ತಮ್ಮ ಹನ್ನೆರಡು ಎಕರೆ ಜಮೀನಿನಲ್ಲಿ ಎಂಟು ಎಕರೆ ದ್ರಾಕ್ಷಿ ಬೆಳೆಯ ಜೊತೆ ಪರ್ಯಾಯ ಬೆಳೆಯಾಗಿ ನಾಲ್ಕು ಎಕರೆ ಜಮೀನಿನಲ್ಲಿ ಪೇರಲ ಸಸಿ ನೆಟ್ಟು ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.

ದ್ರಾಕ್ಷಿ ಬೆಳೆಯಿಂದ ಕಡಿಮೆ ಆದಾಯ ಬಂದಿರುವುದರಿಂದ, ಪೇರಲ ಮೊರೆ ಹೋಗಿದ್ದಾರೆ. ಸಾಲಿನಿಂದ ಸಾಲಿಗೆ ಹನ್ನೊಂದು ಅಡಿ, ಗಿಡದಿಂದ ಗಿಡಕ್ಕೆ ಎಂಟು ಅಡಿ ಸಸಿ ನೆಟ್ಟಿದ್ದು, ನಾಲ್ಕು ಎಕರೆಗೆ ಎರಡು ಸಾವಿರ ಸಸಿ ನಾಟಿ ಮಾಡಿದ್ದಾರೆ. ಗುಜರಾತ್‌ ರಾಜ್ಯದಿಂದ ರೆಡ್ ಡೈಮಂಡ್ (ಜಪಾನ) ತಳಿಯ ಸಸಿ ತಂದಿದ್ದಾರೆ. ರೈತನ ತೋಟಕ್ಕೆ ಒಂದು ಸಸಿ ತಲುಪಬೇಕಾದರೆ ₹ 200 ಖರ್ಚಾಗಿದೆ. ಒಟ್ಟು ಎರಡು ಸಾವಿರ ಸಸಿಗೆ ₹ 4 ಲಕ್ಷ ಖರ್ಚು ಮಾಡಿದ್ದಾರೆ. ಸಸಿ ನಾಟಿ, ಡ್ರಿಪ್ ಜೋಡಣೆ, ಕೂಲಿಕಾರರ ಪಗಾರ ಸೇರಿ ಎಕರೆಗೆ ಒಂದು ಲಕ್ಷದಂತೆ ನಾಲ್ಕು ಎಕರೆಗೆ ₹ 4 ಲಕ್ಷ ಖರ್ಚಾಗಿದೆ. ಒಟ್ಟು ಮೊದಲ ವರ್ಷವೇ ₹ 8 ಲಕ್ಷ ಖರ್ಚಾಗಿದೆ.

ಪೇರಲ ಸಸಿ ನಾಟಿ ಮಾಡಿ ಈಗ ಒಂದೂವರೇ ವರ್ಷವಾಯಿತು. ಆರೇಳು ಅಡಿ ಎತ್ತರವಾಗಿವೆ. ಪ್ರತಿ ಗಿಡಕ್ಕೆ 20 ಕೆ.ಜಿಗೂ ಹೆಚ್ಚು ಪೇರಲ ಕಾಯಿ ಆಗಿವೆ. ಪ್ರತಿ ಪೇರಲ ಹಣ್ಣಿಗೆ ಸುರಕ್ಷಾ ಕವರ್ ಹಾಕಿದ್ದು, ಕೀಟಗಳ ತೊಂದರೆ ಆಗುವುದಿಲ್ಲ. ಹಣ್ಣು ದಪ್ಪ ಬೆಳೆದು ತೂಕ ಜಾಸ್ತಿ ಆಗುತ್ತದೆ. ಇನ್ನೂ ಒಂದು ತಿಂಗಳಲ್ಲಿ ಹಣ್ಣಾಗಿ ಐದು ಟನ್ ಕಾಯಿ ಮಾರುಕಟ್ಟೆಗೆ ಸಾಗಿಸುವ ಹಂತ ತಲುಪಲಿದೆ. ಸದ್ಯದ ದರ ಕೆ.ಜಿ.ಗೆ ₹ 60 ಇದೆ. ಇದೇ ದರ ಮುಂದುವರಿದರೆ ನಾಲ್ಕು ಎಕರೆಗೆ ₹ 3 ಲಕ್ಷಕ್ಕೂ ಹೆಚ್ಚು ಆದಾಯ ಮೊದಲ ವರ್ಷವೇ ಕೈ ಸೇರಲಿದೆ. ಎರಡನೇ ವರ್ಷ ಪೇರಲ ಗಿಡಗಳು ಇನ್ನೂ ದೊಡ್ಡದಾಗಿ ಆದಾಯ ದ್ವೀಗುಣವಾಗುತ್ತದೆ. ಖರ್ಚು ಮಾತ್ರ ಕಡಿಮೆಯಾಗಿ ಔಷಧ, ಗೊಬ್ಬರ, ಕೂಲಿಕಾರರ ಪಗಾರ ಅಷ್ಟೇ ಇರುತ್ತದೆ. ಹೀಗೆ ಪ್ರತಿ ವರ್ಷ ಆದಾಯ ಹೆಚ್ಚುತ್ತ ಹೋಗುತ್ತದೆ’ ಎಂದು ರೈತ ಮಲ್ಲಿಕಾರ್ಜುನ್‌ ತಿಳಿಸಿದರು.

ADVERTISEMENT

ಆಸರೆಯಾದ ನೀರಾವರಿ ಯೋಜನೆ: ತೋಟದಲ್ಲಿ ನಾಲ್ಕು ಬೊರವೆಲ್, ಒಂದು ಬಾವಿ, ಒಂದು ಕೃಷಿ ಹೊಂಡ ಇವೆ. ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಫಲವಾಗಿ ಅಂತರ್ಜಲ ಹೆಚ್ಚಾಗಿದೆ. ಕಾಲುವೆಗಳ ಮೂಲಕ ನೀರು ಹರಿದಿದ್ದರಿಂದ ಸಾಕಷ್ಟು ನೀರಿನ ಅನೂಕೂಲತೆ ಆಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೇರಲ ಕಾಯಿ
ಪೇರಲ ಕಾಯಿ
ಪೇರಲಕ್ಕೆ ಮೊದಲ ವರ್ಷ ಖರ್ಚು ಬರಬಹುದು. ನಂತರ ಖರ್ಚು ಇಲ್ಲ. ದ್ರಾಕ್ಷಿಗೆ ಖರ್ಚು ಜಾಸ್ತಿ ಆದಾಯ ಬರುವ ಕುರಿತು ಗ್ಯಾರಂಟಿ ಇಲ್ಲ. ಆದರೆ ಪೇರಲ ಮಾತ್ರ ಆದಾಯ ಪಕ್ಕಾ
ಮಲ್ಲಿಕಾರ್ಜುನ ಬನಪ್ಪಾ ಮೇತ್ರಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.