ಆಲಮಟ್ಟಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಗಾದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಸೋಮವಾರ ಜಲಾಶಯ ಅರ್ಧ ಭರ್ತಿಯಾಗಿದೆ.
123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ 64.594 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ಜಲಾಶಯ ಅರ್ಧ ಭರ್ತಿಯಾದಂತಾಗಿದೆ.
ಸೋಮವಾರ ಜಲಾಶಯಕ್ಕೆ 60,603 ಕ್ಯುಸೆಕ್ ( 5.236ಟಿಎಂಸಿ ಅಡಿ ನೀರು) ಹರಿದು ಬಂದಿದ್ದು, 515.16 ಮೀ ಎತ್ತರದವರೆಗೆ ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರದ ಭಾರಿ ಮಳೆ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದೆ. ಸೋಮವಾರ ಪಾಥಗಾಂವದಲ್ಲಿ 32.5 ಸೆಂ.ಮೀ, ರಾಧಾನಗರಿಯಲ್ಲಿ 11.5. ಸೆ.ಮೀ, ನವಜಾದಲ್ಲಿ 11.2 ಸೆಂ.ಮೀ, ಮಹಾಬಲೇಶ್ವರದಲ್ಲಿ 5.1 ಸೆಂ.ಮೀ ಮಳೆಯಾಗಿದೆ. ಇದರಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಮಂಗಳವಾರ 70 ಸಾವಿರ ಕ್ಯುಸೆಕ್ ದಾಟಲಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.
ಕಾಲುವೆಗೆ ನೀರು ಹೆಚ್ಚಿದ ಬೇಡಿಕೆ: ಮುಂಗಾರು ಮಳೆ ಕ್ಷೀಣವಾಗಿದ್ದರಿಂದ, ಮುಂಗಾರು ಬೆಳೆ ನಾಟಿಗಾಗಿ ತಕ್ಷಣವೇ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಬೇಕೆಂಬ ಒತ್ತಡ ದಿನೇ ದಿನೇ ಹೆಚ್ಚುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.