ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಸಡಗರದ ಹನುಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 16:14 IST
Last Updated 23 ಏಪ್ರಿಲ್ 2024, 16:14 IST
ವಿಜಯಪುರ ನಗರದ ಶಹಾಪೂರ ಅಗಸಿ ಬಳಿಯಿರುವ ಆಂಜನೇಯ ದೇವಸ್ಥಾನದಲ್ಲಿ ಮುತ್ತೈದೆಯರು ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ತೂಗಿದರು.
ವಿಜಯಪುರ ನಗರದ ಶಹಾಪೂರ ಅಗಸಿ ಬಳಿಯಿರುವ ಆಂಜನೇಯ ದೇವಸ್ಥಾನದಲ್ಲಿ ಮುತ್ತೈದೆಯರು ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ತೂಗಿದರು.   

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಹನುಮ ಜಯಂತಿಯನ್ನು ಸಂಭ್ರಮ, ಸಡಗರ, ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.

ಹನುಮಾನ್‌ ದೇವಸ್ಥಾನಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನಕ್ಕೆ ಬೆಳಿಗ್ಗೆಯಿಂದಲೇ ಭಕ್ತರು ಬಂದು ತಮ್ಮ ಇಷ್ಟಾರ್ಥ ಈಡೇರಿಸಿದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಕಾಣಿಕೆಗಳನ್ನು ಅರ್ಪಿಸಿದರು.

ಮಹಿಳೆಯರು ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಿಗೆ ಹಾಕಿ ತೂಗಿದರು. ಜೋಗುಳ ಪದಗಳನ್ನು ಹಾಡಿ ಧಾರ್ಮಿಕ ಆಚರಣೆಗೆ ಮೆರುಗು ತಂದರು. ಮಧ್ಯಾಹ್ನ ಕೆಲವೆಡೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮನಗೂಳಿ ಪಟ್ಟಣದಲ್ಲಿರುವ ಐತಿಹಾಸಿಕ ಹನುಮಾನ ಮಂದಿರದಲ್ಲಿ ಹನುಮ ಜಯಂತಿಯನ್ನು ಭಕ್ತಿ–ಸಡಗರದಿಂದ ಆಚರಿಸಲಾಯಿತು.

ಬೆಳಿಗ್ಗೆ ಅಭಿಷೇಕ, ವಿಶೇಷ ಪೂಜೆ ನಡೆದವು. ಮಧ್ಯಾಹ್ನ ಅನ್ನಪ್ರಸಾದ, ಮಹಿಳಾ ಭಕ್ತರು ಬಾಲ ಹನುಮನನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡುವ ಮೂಲಕ ಸಂಭ್ರಮಿಸಿದರು. 

ಮುಖಂಡರಾದ ಚನ್ನಗೌಡ ಪಾಟೀಲ, ಬಸವರಾಜ ಕೋಟ್ಯಾಳ, ಶಿವಾಜಿ ಮೋರೆ, ಮಲ್ಲು ಲೇಸಪ್ಪಗೋಳ, ಪುಟ್ಟು ತೇಲಿ, ಲಕ್ಷ್ಮಣ ಹಡಪದ, ಸತ್ಯಪ್ಪ ಪೂಜಾರಿ, ಸುರೇಶ ಜಮಖಂಡಿ, ಸದಾಶಿವ ಇದ್ದರು.

ನಗರದ ಹೊರವಲಯದಲ್ಲಿರುವ ಭೂತನಾಳ ಹತ್ತಿರ ಇರುವ ಘಂಟೆ ಆಂಜನೇಯ ಮಂದಿರದಲ್ಲಿ ಶ್ರದ್ಧಾ–ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು. ವಿಶೇಷ ಪೂಜೆಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಭಾಗವಹಿಸಿ, ಆಂಜನೇಯನ ದರ್ಶನ ಪಡೆದುಕೊಂಡರು. 

ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ಭಕ್ತರು ಗ್ರಾಮದ ಹನುಮಾನ ಮಂದಿರಕ್ಕೆ ತೆರಳಿ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಿದರು. 

ವಿಜಯಪುರ ನಗರದ ಹೊರವಲಯದ ಭೂತನಾಳ ಹತ್ತಿರ ಇರುವ ಘಂಟೆ ಆಂಜನೇಯ ಮಂದಿರಕ್ಕೆ ರಾಮನಗೌಡ ಪಾಟೀಲ ಯತ್ನಾಳ ಆಗಮಿಸಿ ದೇವರ ದರ್ಶನ ಪಡೆದರು.

ಹನುಮಂತನ ವಿಗ್ರಹಕ್ಕೆ ತುಪ್ಪದಿಂದ ಮತ್ತು ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಮಲ್ಲು ಹೂಗಾರ, ನವೀನ ಗುಣಕಿ, ಪ್ರಶಾಂತ ತಳವಾರ, ಸಿದ್ದು ಕನ್ನೋಳ್ಳಿ, ರಾಜು ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.