ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಸಂಗಣ್ಣ ಎಲ್. ಲಕ್ಕಣ್ಣವರಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ವೈದ್ಯರ ದಿನಾಚರಣೆ–2022 ಅಂಗವಾಗಿ ನೀಡುವ ರಾಜ್ಯಮಟ್ಟದ ‘ಶ್ರೇಷ್ಠ ವೈದ್ಯ’ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ(ಆಗಸ್ಟ್ 24) ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಡಾ. ಲಕ್ಕಣ್ಣವರಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ಲಕ್ಕಣ್ಣವರ, ‘ಶ್ರೇಷ್ಠ ವೈದ್ಯ ಪ್ರಶಸ್ತಿ ನನಗೆ ಬರಲು ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಕಾರಣ. ನಾನು ಕೇವಲ ಸಾಂಕೇತಿಕವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ಈ ಗೌರವ ನಮ್ಮ ಜಿಲ್ಲಾಸ್ಪತ್ರೆಯ ತಂಡಕ್ಕೆ ಸಲ್ಲಬೇಕು’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆದಷ್ಟು ಶೀಘ್ರ ಜನರ ಸೇವೆಗೆ ಒದಗಿಸಲು ಆದ್ಯತೆ ನೀಡಲಾಗುವುದು. ಈ ಮೂಲಕ ನಮ್ಮ ಜಿಲ್ಲೆಯ ಜನರು ಆರೋಗ್ಯ ಸಂಬಂಧಿ ಚಿಕಿತ್ಸೆಗಾಗಿ ದೂರದ ನಗರಗಳಿಗೆ ಹೋಗುವುದನ್ನು ತಡೆಯಲಾಗುವುದು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಇರುವ ಕಟ್ಟಡಗಳು ಹಳೆಯದಾಗಿದ್ದು, ಅವುಗಳನ್ನು ಹೊಸದಾಗಿ ನಿರ್ಮಿಸುವ ಅಗತ್ಯವಿದೆ. ಜೊತೆಗೆ ಮೂಲಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಹೊಸ ಮೆರಗು ನೀಡುವ ಆಶಯ ಇದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲಾಸ್ಪತ್ರೆಗೆ ‘ಕಾರ್ಪೊರೇಟ್ ಟಚ್’ ನೀಡಬೇಕು ಎಂಬ ನನ್ನ ಆಶಯಕ್ಕೆ ಈಗಾಗಲೇ ಜಿಲ್ಲಾಧಿಕಾರಿ ವಿಜಯಮಹಾಂತೇಶ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅವರ ಮಾರ್ಗದರ್ಶನ, ಸಲಹೆ, ಸಹಕಾರದೊಂದಿಗೆ ಜಿಲ್ಲಾಸ್ಪತ್ರೆಯು ಯಾವುದೇ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇರದಂತೆ ಕಾರ್ಪೊರೇಟ್ ಟಚ್ ನೀಡಲಾಗುವುದು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಅನುದಾನ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತರ ಕರ್ನಾಟಕದಲ್ಲೇ ಮಾದರಿ ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು.
ಲಕ್ಕಣ್ಣವರ ಅನನ್ಯ ವೈದ್ಯಕೀಯ ಸೇವೆ
ವಿಜಯಪುರ: ರಾಜ್ಯಮಟ್ಟದ ‘ಶ್ರೇಷ್ಠ ವೈದ್ಯ’ ಪ್ರಶಸ್ತಿಗೆ ಭಾಜನವಾಗಿರುವ ಜಿಲ್ಲಾ ಸರ್ಜನ್ ಡಾ. ಎಸ್.ಎಲ್.ಲಕ್ಕಣ್ಣವರ ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಗಂಗೂರಿನವರು.
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಹಾಗೂ ಅಲ್ ಅಮಿನ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಪದವಿ ಪಡೆದುಕೊಂಡಿದ್ದಾರೆ.
1998ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರ್ಪಡೆಯಾದ ಲಕ್ಕಣ್ಣವರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ, ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಅಧಿಕಾರಿ,ಜಿಲ್ಲಾ ಕುಟುಂಬ ಯೋಜನಾ ಅಧಿಕಾರಿ,ವಿಜಯಪುರ ಮತ್ತು ಮುದ್ದೇಬಿಹಾಳ ತಾಲ್ಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಜನ ಮನ್ನಣೆ ಗಣಿಸಿದ್ದಾರೆ.
2011ರಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಸರ್ವೇಕ್ಷಣಾಧಿಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಚ್1ಎನ್1 ಸಂದರ್ಭದಲ್ಲಿ ಜನಪರ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 2019ರಲ್ಲಿ ಸಂಭವಿಸಿದ ಪ್ರವಾಹದ ವೇಳೆ ಸಂತ್ರಸ್ತರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿ ಇದ್ದರು.
ಬಸವನ ಬಾಗೇವಾಡಿ ತಾಲ್ಲೂಕು ಆಸ್ಪತ್ರೆಗೆ ‘ಕಾಯಕಲ್ಪ‘ ಪ್ರಶಸ್ತಿ ಇವರ ಅವಧಿಯಲ್ಲೇ ಲಭಿಸಿದೆ. ಕೋವಿಡ್ 1, 2 ಮತ್ತು 3ನೇ ಅಲೆ ಸಂದರ್ಭದಲ್ಲಿ ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದು, ವಿಜಯಪುರ ಜಿಲ್ಲಾಡಳಿತವು ಲಕ್ಕಣ್ಣವರಗೆ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ನೀಡಿ ಗೌರವಿಸಿದೆ.
***
ಶ್ರೇಷ್ಠ ವೈದ್ಯ ಪ್ರಶಸ್ತಿ ಬಂದಿರುವುದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಜಿಲ್ಲೆಯ ಜನತೆಗೆ ಅತ್ಯುತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಶ್ರಮಿಸಲಾಗುವುದು.
–ಡಾ. ಎಸ್. ಎಲ್. ಲಕ್ಕಣ್ಣವರ,ಜಿಲ್ಲಾ ಸರ್ಜನ್, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.