ADVERTISEMENT

ಡೋಣಿ ನದಿ ಪ್ರವಾಹ | ಜಮೀನುಗಳು ಜಲಾವೃತ; ಕೊಚ್ಚಿ ಹೋದ ಫಲವತ್ತಾದ  ಮಣ್ಣು

ಶರಣಬಸಪ್ಪ ಎಸ್‌.ಗಡೇದ
Published 11 ಜೂನ್ 2024, 6:38 IST
Last Updated 11 ಜೂನ್ 2024, 6:38 IST
ಡೊಣಿ ನದಿ ಪ್ರವಾಹದಿಂದ ತಾಲ್ಲೂಕಿನ ಬೋಳವಾಡ, ಗುತ್ತಿಹಾಳ ಸೇರಿದಂತೆ ಹತ್ತಾರು ಗ್ರಾಮಗಳ ರೈತರ ಜಮೀನುಗಳಲ್ಲಿ ನದಿ ನೀರು ಆವೃತವಾಗಿದೆ
ಡೊಣಿ ನದಿ ಪ್ರವಾಹದಿಂದ ತಾಲ್ಲೂಕಿನ ಬೋಳವಾಡ, ಗುತ್ತಿಹಾಳ ಸೇರಿದಂತೆ ಹತ್ತಾರು ಗ್ರಾಮಗಳ ರೈತರ ಜಮೀನುಗಳಲ್ಲಿ ನದಿ ನೀರು ಆವೃತವಾಗಿದೆ   

ತಾಳಿಕೋಟೆ: ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ನಾಲ್ಕೈದು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಳಿಕೋಟೆ ತಾಲ್ಲೂಕು ವ್ಯಾಪ್ತಿ ಸೇರಿದಂತೆ ಜಿಲ್ಲೆಯಾದ್ಯಂತ ಎಡಬಲ ದಂಡೆಗಳ ಫಲವತ್ತಾದ ನೂರಾರು ಹೆಕ್ಟೇರ್ ಭೂಮಿ ಜಲಾವೃತವಾಗಿದೆ.

ಅರ್ಧಕ್ಕೂ ಹೆಚ್ಚು ರೈತರು ಬಿತ್ತನೆ ಮಾಡಿದ್ದರು. ಅದೆಲ್ಲ ಈಗ ನದಿಯ ಪಾಲಾಗಿದೆ ಎಂದು ಬೋಳವಾಡದ ರೈತರಾದ ಹಣಮಂತ್ರಾಯ ಬಸಪ್ಪ ನಾಯ್ಕೋಡಿ, ಪರಪ್ಪ ಹರಿಜನ ಗೋಳಿಟ್ಟರು.

ಶಿವಲಿಂಗಯ್ಯ ಹಿರೇಮಠ, ಸಿದ್ದಪ್ಪ ಬಿರಾದರ, ಗ್ರಾಮದ ಈರಪ್ಪ ಹರಿಜನ, ಶಾಂತಗೌಡ ಪಾಟೀಲ, ಶಿವಣ್ಣ ಬಿರಾದಾರ, ಸಿದ್ದಪ್ಪ ಭಾಗಪ್ಪ ಹರಿಜನ, ಸಾಯಬಣ್ಣ ಬಿರಾದಾರ, ಸಂಗನಗೌಡ ಪಾಟೀಲ, ಸಂಗಣ್ಣ ವಡವಡಗಿ, ಭೀಮಣ್ಣ ಬರಮಗೌಡ ವಡವಡಗಿ ಮೊದಲಾದ ರೈತರ ಜಮೀನು ಸಂಪೂರ್ಣ ಹಾಳಾಗಿದೆ.

ADVERTISEMENT

ಡೋಣಿ ನದಿ ದಂಡೆಯಲ್ಲಿರುವ ತುಂಬಗಿ, ಫತ್ತೆಪೂರ, ಬೊಮ್ಮನಳ್ಳಿ, ಗುತ್ತಿಹಾಳ, ಸಾಸನೂರ, ಹಿರೂರ, ತಾಳಿಕೋಟೆ ಗ್ರಾಮಗಳ ಸಾವಿರಾರು ಎಕರೆ ಭೂಮಿ ನೀರಲ್ಲಿದೆ, ಹೆಚ್ಚಿನೆಡೆ ಕೊಚ್ಚಿ ಹೋಗಿದೆ. ಇತ್ತ ಮೂಕಿಹಾಳ ಬಳಿಯ ಸೋಗಲಿ ಹಳ್ಳವೂ ಅಪಾಯದ ಮಟ್ಟ ದಾಟಿದೆ. ಮೂಕಿಹಾಳ, ಹರನಾಳ, ಕಲ್ಲದೇವನಹಳ್ಳಿ, ಹಡಗಿನಾಳ ಮೊದಲಾದ ಗ್ರಾಮಗಳ ಜಮೀನುಗಳಲ್ಲಿ ಅಪಾರ ಕೊರೆತವುಂಟಾಗಿದ್ದು ಫಲವತ್ತಾದ ಮಣ್ಣೆಲ್ಲ ಕೊಚ್ಚಿ ಹೋಗಿದೆ. ಬೆಳೆ, ಭೂಮಿ ನಾಶವಾದ ಜನರಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು ಎಂದು ಕಲ್ಲದೇವನಹಳ್ಳಿ ರೈತ ಸೋಮನಗೌಡ ಬಿರಾದಾರ ಒತ್ತಾಯಿಸಿದರು.

ಬೆಳಿಗ್ಗೆ ಶಾಲೆ- ಕಾಲೇಜುಗಳಿಗೆ ಬಂದಿದ್ದ ಮಿಣಜಗಿ, ಬಳಗಾನೂರ, ಹಿರೂರ ಮೊದಲಾದ ಗ್ರಾಮಗಳ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು ಡೋಣಿ ನದಿ ಮೇಲ್ಸೇತುವೆ ಮತ್ತೆ ಜಲಾವೃತವಾಗಿ ವಾಹನ ಸಂಚಾರ ನಿಲುಗಡೆಯಾಗಿದ್ದರಿಂದ ಡೋಣಿ ನದಿಗೆ ನಿರ್ಮಿಸಿರುವ ಶಿಥಿಲ ಸೇತುವೆ ಮೇಲೆಯೇ ಮೂರ್ನಾಲ್ಕು ಕಿ.ಮೀ ದೂರ ನಡೆದು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

ಡೊಣಿ ನದಿ ಪ್ರವಾಹದಿಂದ ತಾಲ್ಲೂಕಿನ ಬೋಳವಾಡ ಗುತ್ತಿಹಾಳ ಸೇರಿದಂತೆ ಹತ್ತಾರು ಗ್ರಾಮಗಳ ರೈತರ ಜಮೀನುಗಳಲ್ಲಿ ನದಿ ನೀರು ಆವೃತವಾಗಿದೆ

ಡೋಣಿ ನದಿಗೆ ಮುಂದುವರೆದ ಪ್ರವಾಹ

ಡೋಣಿ ನದಿ ಪ್ರವಾಹ ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನ 2 ಗಂಟೆಯವರೆಗೆ ಇಳಿಮುಖವಾಗಿದ್ದ ಕಾರಣ ವಾಹನ ಸಂಚಾರ ಪ್ರಾರಂಭವಾಗಿತ್ತು. ಆದರೆ ಸೋಮವಾರ ಮಧ್ಯಾಹ್ನ ಮತ್ತೆ ಡೋಣಿ ಸೇತುವೆ ಜಲಾವೃತವಾಗಿದ್ದರಿಂದ ವಾಹನಗಳ ಸವಾರರು ಮಿಣಜಗಿ ಮೂಕಿಹಾಳ ಹಡಗಿನಾಳ ಮಾರ್ಗದಲ್ಲಿ ಸುತ್ತು ಹಾಕಿ ಪಯಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.