ಹುಬ್ಬಳ್ಳಿ: ಏಕ ಪೋಷಕ ಹಾಗೂ ಬಡತನದಲ್ಲಿರುವ ಮಕ್ಕಳ ಬೆಳವಣಿಗೆಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪ್ರಾಯೋಜಕತ್ವ ಯೋಜನೆ’ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ.
ಜಿಲ್ಲೆಯಲ್ಲಿ ಸದ್ಯ 438 ಮಕ್ಕಳಿಗೆ ಈ ಯೋಜನೆಯಡಿ ಪ್ರತಿ ತಿಂಗಳು ₹4,000 ಸಹಾಯಧನ ಸಿಗುತ್ತಿದೆ. ಇದರಲ್ಲಿ 216 ಬಾಲಕರು ಮತ್ತು 222 ಬಾಲಕಿಯರು ಇದ್ದಾರೆ.
ಏಕ ಪೋಷಕ (ತಂದೆ ಅಥವಾ ತಾಯಿ ಮಾತ್ರ), ಅನಾಥ, ಅನಾರೋಗ್ಯ ಪೀಡಿತ ಹಾಗೂ ಅಸಹಾಯಕ ಗುಂಪಿನ ಕುಟುಂಬದಲ್ಲಿ ಜನಿಸಿದ ಮಕ್ಕಳ ಶಿಕ್ಷಣ, ಆರೋಗ್ಯ ಸುಧಾರಣೆಗೆ ಈ ಪ್ರಾಯೋಜಕತ್ವ ಯೋಜನೆ ರೂಪಿಸಲಾಗಿದೆ.
2012ರಿಂದ 2022ರ ವರೆಗೆ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಪ್ರತಿ ಮಗುವಿಗೆ ತಿಂಗಳಿಗೆ ಆರ್‌ಟಿಜಿಎಸ್ ಮೂಲಕ ₹1,000 ಆರ್ಥಿಕ ನೆರವು ನೀಡಲಾಗುತಿತ್ತು. 2022–23ನೇ ಸಾಲಿನಿಂದ ಕೇಂದ್ರ ಸರ್ಕಾರ ‘ಮಿಷನ್ ವಾತ್ಸಲ್ಯ’ ಅಡಿ ಹೊಸ ಮಾರ್ಗಸೂಚಿ ಹೊರಡಿಸಿ, ಪ್ರಾಯೋಜಕತ್ವ ಯೋಜನೆಯಲ್ಲಿ ಪ್ರತಿ ಮಗುವಿಗೆ ತಿಂಗಳಿಗೆ ₹ 4,000 ಆರ್ಥಿಕ ನೆರವು ನೀಡಲಾಗುತ್ತಿದೆ.
ಯೋಜನೆಯಡಿ ಅರ್ಹರಾದ ಮಕ್ಕಳಿಗೆ ಮೂರು ವರ್ಷಗಳವರೆಗೆ ಅಥವಾ 18 ವರ್ಷ ವಯಸ್ಸು ತುಂಬುವವರೆಗೆ (ಯಾವುದೂ ಮೊದಲು ಅದು) ಹಣ ಪಾವತಿಸಲಾಗುತ್ತದೆ. ಹಣವನ್ನು ಮಕ್ಕಳ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಇದರಿಂದ ಅರ್ಹ ಮಕ್ಕಳಿಗೆ ಸಂಪೂರ್ಣ ಪ್ರಮಾಣದಲ್ಲಿ ಹಣ ತಲುಪುತ್ತದೆ. ಈ ಹಣದಿಂದ ಮಕ್ಕಳು, ತಮ್ಮ ಶಿಕ್ಷಣ ಮತ್ತು ವೈದ್ಯಕೀಯ ಖರ್ಚು ನಿಭಾಯಿಸಿಕೊಳ್ಳುತ್ತಾರೆ.
‘ಪ್ರಾಯೋಜಕತ್ವ ಯೋಜನೆ’ಯನ್ನು ಜಾರಿಗೊಳಿಸಲು ಜಿಲ್ಲಾಧಿಕಾರಿ ಅಧ್ಯಕ್ಷೆಯಲ್ಲಿ ಜಿಲ್ಲಾ ಪ್ರಾಯೋಜಕತ್ವ ಮತ್ತು ಪೋಷಕತ್ವ ಅನುಮೋದನಾ ಸಮಿತಿಯನ್ನೂ ರಚಿಸಲಾಗಿದೆ. ಅದೇ ಸಮಿತಿ ಮೂಲಕ ಫಲಾನುಭವಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ.
ಯಾರೆಲ್ಲ ಅರ್ಹರು: ಏಕ ಪೋಷಕ, ಅನಾಥ, ನಿರ್ಗತಿಕ ಮಕ್ಕಳು, ಭಿಕ್ಷೆ ಬೇಡುತ್ತಿರುವ ಮಕ್ಕಳು, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು, ಬಾಲಮಂದಿರಗಳಿಂದ ನಿರ್ಗಮಿತ ಮಕ್ಕಳು, ಜೈಲು ಶಿಕ್ಷೆಗೆ ಗುರಿಯಾದ ಹಾಗೂ ಲೈಂಗಿಕ ಕಾರ್ಯಕರ್ತೆಯರ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಯೋಜನೆಯ ಫಲಾನುಭವಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.