ADVERTISEMENT

ವಿಜಯಪುರ | ‘ಕೃಷ್ಣಾ ಆರತಿ’ಗೂ ಹೆಚ್ಚಿದ ಕೂಗು

‘ಗಂಗಾ ಆರತಿ’ ಮಾದರಿಯಲ್ಲಿ ’ಕಾವೇರಿ ಆರತಿ’ಗೆ ಮುಂದಾದ ರಾಜ್ಯ ಸರ್ಕಾರ

ಬಸವರಾಜ ಸಂಪಳ್ಳಿ
Published 24 ಜುಲೈ 2024, 5:51 IST
Last Updated 24 ಜುಲೈ 2024, 5:51 IST
ಆಲಮಟ್ಟಿ ಜಲಾಶಯ –ಪ್ರಜಾವಾಣಿ ಚಿತ್ರ
ಆಲಮಟ್ಟಿ ಜಲಾಶಯ –ಪ್ರಜಾವಾಣಿ ಚಿತ್ರ   

ವಿಜಯಪುರ: ‘ವಾರಾಣಸಿಯ ಗಂಗಾ ಆರತಿ ಮಾದರಿಯಲ್ಲೇ ಕಾವೇರಿ ನದಿಗೆ ಆರತಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಜೀವನದಿ ಕೃಷ್ಣೆಗೂ ಆರತಿ ಕಾರ್ಯಕ್ರಮ ಮಾಡುವಂತೆ ಜಿಲ್ಲೆಯಲ್ಲಿ ಒತ್ತಾಯ ಕೇಳಿಬಂದಿದೆ.

ಪ್ರತಿ ವರ್ಷ ಕೃಷ್ಣಾ ನದಿ ತುಂಬಿ ಹರಿಯುವಾಗ ಮುಖ್ಯಮಂತ್ರಿ, ಸಚಿವರು ಬಾಗಿನ ಅರ್ಪಿಸುವುದು ಸದ್ಯ ರೂಢಿಯಲ್ಲಿದೆ. ಆದರೆ, ಬಾಗಿನ ಅರ್ಪಿಸುವುದು ಕೇವಲ ಸರ್ಕಾರಿ ಕಾರ್ಯಕ್ರಮವಾಗಿದ್ದು, ಈ ಸಂದರ್ಭದಲ್ಲಿ ಕೇವಲ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮಾತ್ರ ಅವಕಾಶವಿದ್ದು, ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಕೃಷ್ಣಾ ಆರತಿ ಏರ್ಪಡಿಸಿದರೆ ಪ್ರವಾಸಿಗರನ್ನೂ ಆಲಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆಲಮಟ್ಟಿ ಜಲಾಶಯ ವೀಕ್ಷಣೆಗೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆಲಮಟ್ಟಿ ಜಲಾಶಯದ ವ್ಯಾಪ್ತಿಯಲ್ಲಿರುವ ಹತ್ತು ಹಲವು ಉದ್ಯಾನಗಳಲ್ಲಿ ಸುತ್ತಾಡಿ, ಖುಷಿಯಿಂದ ತೆರಳುತ್ತಾರೆ. ಕೃಷ್ಣೆಯನ್ನು ನೋಡಿಲು ಕಣ್ತುಂಬಿಕೊಳ್ಳಲು ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದೆ. ಈ ನಡುವೆ ಕೃಷ್ಣಾ ಆರತಿ ನೆಪದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ರಾಜ್ಯ, ನೆರೆ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.

ADVERTISEMENT

ವಿಜಯಪುರ ಜಿಲ್ಲೆಯಲ್ಲಿ ವಿಶ್ವ ಪ್ರಸಿದ್ಧ ಸ್ಮಾರಕಗಳು, ಪ್ರವಾಸಿ ತಾಣಗಳು ಇದ್ದರೂ ಸದ್ಯ ಯಾವುದೇ ದೊಡ್ಡ ಮಟ್ಟದ ಉತ್ಸವಗಳು ನಡೆಯುತ್ತಿಲ್ಲ. ಈ ಹಿಂದೆ ನಡೆಯುತ್ತಿದ್ದ ‘ನವರಸಪುರ ಉತ್ಸವ’ ಬಂದ್‌ ಆಗಿ ಹಲವು ವರ್ಷಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಆರತಿ ಏರ್ಪಡಿಸಿದರೆ ಜಿಲ್ಲೆಗೆ ದೊಡ್ಡ ಗೌರವ ಲಭಿಸಲಿದೆ. ಅಲ್ಲದೇ, ಕೃಷ್ಣೆಗೂ ಕೃತಜ್ಞತೆ ಸಲ್ಲಿಸಿದಂತಾಗಲಿದೆ.

ಆಲಮಟ್ಟಿ ಜಲಾಶಯದ ವ್ಯಾಪ್ತಿಯಲ್ಲಿ ಅಥವಾ ಯಲಗೂರು ಆಂಜನೇಯ ದೇವಸ್ಥಾನ ಅಥವಾ ಚಂದ್ರಮ್ಮ ದೇವಸ್ಥಾನ, ಕೂಡಲಸಂಗಮ ಅಥವಾ ಚಿಕ್ಕ ಸಂಗಮದ ಬಳಿ ಕೂಡ ಕೃಷ್ಣಾ ನದಿಗೆ ಆರತಿ ಕಾರ್ಯಕ್ರಮ ಆಚರಿಸಲು ಅವಕಾಶವಿದೆ. ಇದರಿಂದ ಅವಳಿ ಜಿಲ್ಲೆಗೆ ಅವಕಾಶ ಲಭಿಸಲಿದೆ.

‘ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಹಚ್ಚಿಕೊಂಡೇ ಇರುವ ಚಂದ್ರಮ್ಮ ದೇವಸ್ಥಾನದ ಬಳಿ ನಿತ್ಯ ನೂರಾರು ಜನರು ಕೃಷ್ಣಾ ನದಿ ಸ್ನಾನಕ್ಕೆ ಬರುತ್ತಾರೆ. ಹುಣ್ಣಿಮೆ, ಅಮಾವಾಸ್ಯೆಯ ವಿಶೇಷ ದಿನಗಳಲ್ಲಿ ಅದು ಸಾವಿರ ಸಂಖ್ಯೆ ದಾಟುತ್ತದೆ. ಹೀಗಾಗಿ ಅಲ್ಲಿ ಭಕ್ತರ ಸ್ನಾನಕ್ಕೆ ಅನುಕೂಲಕ್ಕಾಗಿ ಸ್ನಾನ ಘಟ್ಟ ನಿರ್ಮಿಸಬೇಕು. ಅಲ್ಲಿಯೇ, ಆರತಿ ಪೂಜಾ ವಿಧಾನಕ್ಕೆ ಒಂದು ಕಟ್ಟೆ ನಿರ್ಮಿಸಬೇಕು. ಅಲ್ಲಿಯೇ ಗಂಗಾ ಆರತಿ ಮಾದರಿಯಲ್ಲಿ ಕೃಷ್ಣಾ ಆರತಿ ಆರಂಭಿಸಬೇಕು. ಈಗ ತಾತ್ಕಾಲಿಕವಾಗಿ ನದಿ ತೀರದಲ್ಲಿಯೇ ಆರಂಭಿಸಬಹುದು. ಇದಕ್ಕಾಗಿ ಕಳೆದ ಐದು ವರ್ಷಗಳಿಂದ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ’ ಎನ್ನುತ್ತಾರೆ ಆಲಮಟ್ಟಿಯ ಶಂಕರ ಜಲ್ಲಿ, ಮಲ್ಲೇಶ ರಾಠೋಡ, ಮಂಜುನಾಥ ಹಿರೇಮಠ, ರಮೇಶ ಆಲಮಟ್ಟಿ.

ಯಲಗೂರದಲ್ಲಿ ಮಾಡಿ: ಸಹಸ್ರಾರು ಭಕ್ತ ಜನರಿಂದ ಪುಣ್ಯಕ್ಣೇತ್ರ ಯಲಗೂರ ಬಳಿಯ ಕೃಷ್ಣಾ ನದಿ ತೀರದಲ್ಲಿ ಕೃಷ್ಣಾರತಿಗೆ ಪ್ರಶಸ್ತ ಸ್ಥಳವಿದೆ. ಗಂಗಾ ನದಿ ತೀರದಂತೆ ಯಲಗೂರದಲ್ಲಿ ಕ್ರೀಯಾಕರ್ಮಗಳಿಗೆ ರಾಜ್ಯದ ನಾನಾ ಕಡೆ ಜನ ಬರುತ್ತಾರೆ. ಹಲವಾರು ಪುರೋಹಿತರು ಇಲ್ಲಿದ್ದಾರೆ. ಈಗಾಗಲೇ ಸ್ನಾನ ಘಟ್ಟಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಮುಕ್ತಾಯ ಹಂತದಲ್ಲಿದೆ. ಪವಿತ್ರ ಸ್ಥಳವಾಗಿರುವ ಯಲಗೂರದಲ್ಲಿ ಕೃಷ್ಣಾರತಿ ಸರ್ಕಾರದಿಂದಲೇ ಮಾಡುವಂತಾಗಲಿ’ ಎಂದು ಗೋಪಾಲ ಗದ್ದನಕೇರಿ, ಶ್ಯಾಮ ಪಾತರದ, ಸಂತೋಷ ಪೂಜಾರ, ಮಹಾಂತೇಶ ಡೆಂಗಿ ಮನವಿ ಮಾಡಿದ್ದಾರೆ.

ಕಾವೇರಿಗಿಂತ ಕೃಷ್ಣಾ ಅತಿ ದೊಡ್ಡ ನದಿ. ಮೂರ್ನಾಲ್ಕು ರಾಜ್ಯದಲ್ಲಿ ಕೃಷ್ಣೆ ಹರಿಯುತ್ತಾಳೆ. ಲಕ್ಷಾಂತರ ಜನರಿಗೆ ಜೀವನಾಡಿಯಾಗಿದ್ದಾಳೆ. ಕೃಷ್ಣೆಗೆ ಆರತಿ ಕಾರ್ಯ ಮಾಡುವುದು ಹೆಚ್ಚು ಅವಶಕ್ಯತೆ ಇದೆ. ನಮ್ಮದು ಬೇಡಿಕೆ ಇದೆ.
ಎಸ್‌.ಕೆ.ಬೆಳ್ಳುಬ್ಬಿ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.