ADVERTISEMENT

ಆಲಮಟ್ಟಿ | ಹೆಚ್ಚುತ್ತಿರುವ ಮೊಸಳೆ ಸಂತತಿ; ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆ

20ಕ್ಕೂ ಹೆಚ್ಚು ಮೊಸಳೆಗಳು ಆಲಮಟ್ಟಿ ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 5:43 IST
Last Updated 29 ಅಕ್ಟೋಬರ್ 2024, 5:43 IST
ಆಲಮಟ್ಟಿಯ ಉದ್ಯಾನದಲ್ಲಿ ಈಚೆಗೆ ಸೆರೆ ಹಿಡಿಯಲಾದ ಮೊಸಳೆ
ಆಲಮಟ್ಟಿಯ ಉದ್ಯಾನದಲ್ಲಿ ಈಚೆಗೆ ಸೆರೆ ಹಿಡಿಯಲಾದ ಮೊಸಳೆ   

ಆಲಮಟ್ಟಿ: ಮೊದಲೆಲ್ಲ ಆಲಮಟ್ಟಿ ಜಲಾಶಯದ ಹಿನ್ನೀರು ಕಡಿಮೆಯಾಗುತ್ತಲೇ ಆಹಾರ ಆರಿಸಿ ನಾಡಿಗೆ ದಾಳಿ ಇಡುತ್ತಿದ್ದ ಮೊಸಳೆಗಳು ಈಗ ಜಲಾಶಯ ಪೂರ್ಣ ಭರ್ತಿಯಾಗಿ, ಮಳೆ ಸುರಿಯುತ್ತಿರುವ ಮಧ್ಯೆಯೇ ನಾಡಿಗೆ ಬರುತ್ತಿರುವುದು ಅಚ್ಚರಿ ಉಂಟು ಮಾಡಿದೆ.

ಜಲಾಶಯದಲ್ಲಿ ಸಾಕಷ್ಟು ನೀರಿರುವ ಈ ವರ್ಷ ಜೂನ್ ತಿಂಗಳಿಂದ ಅಕ್ಟೋಬರ್‌ವರೆಗೆ 20ಕ್ಕೂ ಹೆಚ್ಚು ಮೊಸಳೆಗಳು ಆಲಮಟ್ಟಿ ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆ ಇಟ್ಟಿವೆ. ಮೊದಲೆಲ್ಲಾ ನೀರಿರುವ ವೇಳೆಯಲ್ಲಿ ಒಂದೆರೆಡು ಪ್ರಕರಣಗಳು ಮಾತ್ರ ಕಂಡು ಬರುತ್ತಿದ್ದವು. ಮೊಸಳೆ ಸಂತತಿ ಹೆಚ್ಚಳವಾಗುತ್ತಿರುವುದರಿಂದ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ ಎನ್ನುತ್ತಾರೆ  ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ಇಲಾಖೆಯ ಆರ್.ಎಫ್.ಒ. ಬಸನಗೌಡ ಬಿರಾದಾರ. 

‘ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ (ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕು) ಈಚಿನ ವರ್ಷಗಳಲ್ಲಿ ವಾರ್ಷಿಕ 60ಕ್ಕೂ ಹೆಚ್ಚು ಮೊಸಳೆಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಮೊಸಳೆ ಹಿಡಿಯಲು ನುರಿತ ಸಿಬ್ಬಂದಿ ಇದ್ದಾರೆ’ ಎನ್ನುತ್ತಾರೆ ಅವರು.

ADVERTISEMENT

‘ನೀರಾವರಿ ಪ್ರದೇಶ ಹೆಚ್ಚಿದೆ. ಕಾಲುವೆಯ ಮೂಲಕ ಕೆರೆಗಳ ಭರ್ತಿಗಾಗಿ ನೀರು ಬಿಡಲಾಗುತ್ತಿದೆ. ಕಾಲುವೆಯಗುಂಟ ಹಳ್ಳ, ಕೊಳ್ಳಗಳು, ಬಾವಿಯತ್ತ ಮೊಸಳೆಗಳು ನುಗ್ಗುತ್ತಿವೆ. ಒಂದೇ ವಾರದಲ್ಲಿ ಆಲಮಟ್ಟಿಯಲ್ಲಿ ಎರಡು ಮೊಸಳೆಗಳು ಕಂಡು ಬಂದಿವೆ.  ಮೂರು ವರ್ಷಗಳ ಹಿಂದೆ ಮೂರು ಜನರನ್ನು ಮೊಸಳೆ ಬಲಿ ಪಡೆದಿದೆ. ಮೂರು ವರ್ಷಗಳಿಂದ ಜೀವಹಾನಿಯ ಯಾವುದೇ ಪ್ರಕರಣ ಈ ಭಾಗದಲ್ಲಿ ದಾಖಲಾಗಿಲ್ಲ’ ಎಂದರು.

ಜೀವಶಾಸ್ತ್ರೀಯ ಬದಲಾವಣೆಗೆ ಅಧ್ಯಯನ: ಹೆಚ್ಚಿನ ಮೀನಿನ ಬೇಟೆ, ಚಿಕ್ಕ ಚಿಕ್ಕ ಮೀನುಗಳ ಶಿಕಾರಿಯ ಕಾರಣ ಮೀನಿನ ಸಂತತಿ ಆಲಮಟ್ಟಿ ಜಲಾಶಯದಲ್ಲಿ ಕಡಿಮೆಯಾಗುತ್ತಿದೆ. ಇದರಿಂದ ದೇಶ, ವಿದೇಶದ ಪಕ್ಷಿಗಳ ವಲಸೆಯೂ ಕಡಿಮೆಯಾಗುತ್ತಿವೆ. ಮೊಸಳೆಗಳ ಮೊಟ್ಟೆಗಳನ್ನು ಈ ಪಕ್ಷಿಗಳು ತಿನ್ನುತ್ತಿದ್ದವು. ಹೀಗಾಗಿ ಮೊಸಳೆಗಳ ಸಂತತಿ ಕ್ರಮೇಣ ಹೆಚ್ಚುತ್ತಿದೆ. ಮೊಸಳೆಗಳಿಗೆ ಸಂಪೂರ್ಣ ಆಹಾರ ಲಭಿಸುತ್ತಿಲ್ಲ. ಹೀಗಾಗಿ ಆಹಾರ ಅರಸಿ ಮೊಸಳೆಗಳು ನಾಡಿಗೆ ಬರುತ್ತಿವೆ. ಕೆಲವೊಮ್ಮೆ ನದಿಯ ಹರಿವಿನಗುಂಟ ಬೇರೆ ಪ್ರದೇಶದ ಮೊಸಳೆಗಳು ಆಲಮಟ್ಟಿ ಹತ್ತಿರ ಬಂದರೆ, ಮೊದಲೇ ವಾಸವಿರುವ ಮೊಸಳೆಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ ಆಗಲೂ ನಾಡಿಗೆ ಬರುತ್ತವೆ’ ಎನ್ನುತ್ತಾರೆ ಬಸನಗೌಡ ಬಿರಾದಾರ.

‘ಮೊಸಳೆಯ ಸಂತತಿ ಹೆಚ್ಚಲು ಕಾರಣವೇನು? ಎಂಬ ಅಧ್ಯಯನಕ್ಕಾಗಿ ವನ್ಯ ಜೀವಿ ತಜ್ಞ ಸಮರ್ಥ ಕೊಟ್ಟೂರ ನೇತೃತ್ವದ ತಂಡ ಆಲಮಟ್ಟಿ ಭಾಗಕ್ಕೆ ಶೀಘ್ರ ಆಗಮಿಸಲಿದೆ. ಅವರು ಆರು ತಿಂಗಳಗಳ ಕಾಲ ಈ ಬಗ್ಗೆ ನಿಖರವಾಗಿ ಅಧ್ಯಯನ ನಡೆಸಲಿದ್ದಾರೆ’ ಎಂದು ಅವರು ತಿಳಿಸಿದರು.

‘ಮೊಸಳೆ ಪಾರ್ಕ್ ನಿರ್ಮಿಸಿ’

ಆಲಮಟ್ಟಿ ಹಲವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಸಾಕಷ್ಟು ಮೊಸಳೆಗಳು ಆಲಮಟ್ಟಿ ಭಾಗದಲ್ಲಿ ಸಿಗುತ್ತವೆ. ಅವನ್ನೆಲ್ಲ ಹಿಡಿದು ಮತ್ತೆ ಕೃಷ್ಣಾ ನದಿಗೆ ಬಿಡಲಾಗುತ್ತದೆ. ಅದರ ಬದಲು ಆಲಮಟ್ಟಿ ಭಾಗದಲ್ಲಿಯೇ ಮೊಸಳೆ ಪಾರ್ಕ್ ಮಾಡಿ ಸಿಕ್ಕ ಮೊಸಳೆಗಳನ್ನೆಲ್ಲ ಅಲ್ಲಿಯೇ ಬಿಡಬೇಕು ಎನ್ನುತ್ತಾರೆ ಅರಳದಿನ್ನಿಯ ಮಹಾಂತೇಶ ಬೆಳಗಲ್ ಸಲಿಂ ಮುಲ್ಲಾ ಬಸವರಾಜ ಹೆರಕಲ್ ಶಂಕರ ಜಲ್ಲಿ ಮತ್ತಿತರರು. ಆಲಮಟ್ಟಿಯಲ್ಲಿ ಮೊಸಳೆ ಪಾರ್ಕ್ ನಿರ್ಮಾಣದ ಪ್ರಸ್ತಾವವೂ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.