ಕಡಣಿ (ವಿಜಯಪುರ): ‘ಸಹಕಾರಸಕ್ಕರೆ ಕಾರ್ಖಾನೆಯನ್ನು ಯಾಕಾದರೂ ಪ್ರಾರಂಭಿಸಿದೆ ಎಂದು ಈಗ ಅನಿಸುತ್ತಿದೆ’ ಎಂದು ಇಂಡಿ ಶಾಸಕ, ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಆಲಮೇಲ ತಾಲ್ಲೂಕು ಕಡಣಿ ಗ್ರಾಮದಲ್ಲಿ ಶನಿವಾರ ಜರುಗಿದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘30 ವರ್ಷಗಳ ನನ್ನ ರಾಜಕಾರಣ ಸಾಮಾಜಿಕ ನ್ಯಾಯದಡಿ ಸಾಗಿ ಬಂದಿದೆ. ಖಾಸಗಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ್ದರೆ ನನ್ನ ಮಗನನ್ನೇ ವ್ಯವಸ್ಥಾಪಕ ನಿರ್ದೇಶಕನನ್ನಾಗಿ ಮಾಡಬಹುದಾಗಿತ್ತು. ಸದ್ಯ, ಕಾರ್ಖಾನೆ ಆಡಳಿತ ಮಂಡಳಿಗೆ ರಾಜೀನಾಮೆ ನೀಡಲು ತೀರ್ಮಾನಿಸಿರುವೆ’ ಎಂದು ತಿಳಿಸಿದರು.
‘ನನ್ನನ್ನು ನಂಬಿ ಬ್ಯಾಂಕ್ ₹ 200 ಕೋಟಿ ಸಾಲ ನೀಡಿದೆ. ಅದನ್ನು ಮರುಪಾವತಿ ಮಾಡುವವರೆಗೆ ಮುಂದುವರಿಯಲೇ ಎಂದು ಆಲೋಚನೆ ಮಾಡುತ್ತಿರುವೆ’ ಎಂದು ಅವರು ಆವೇಶದಿಂದ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಸೂಚಕರ ನಕಲಿ ಸಹಿಯನ್ನು ಮಾಡಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪದ ಮೇಲೆ ಯಶವಂತರಾಯಗೌಡ ಪಾಟೀಲ, ಬೆಂಬಲಿಗರಾದ ಮಲ್ಲನಗೌಡ ಪಾಟೀಲ ಹಾಗೂ ಜೆಟ್ಟೆಪ್ಪ ರವಳಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಗುಲ್ಬರ್ಗಾ ಹೈಕೋರ್ಟ್ ಪೀಠ ನೀಡಿದ್ದ ಸೂಚನೆಯಂತೆ ಇಂಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.