ADVERTISEMENT

ದೇವರಹಿಪ್ಪರಗಿ: ಮೂಲಸೌಲಭ್ಯ ವಂಚಿತ ಆಸರೆ ಮನೆಗಳು

ಸಾತಿಹಾಳ: ಶುದ್ದ ಕುಡಿಯುವ ನೀರಿನ ಘಟಕ ಬಂದ್‌, ಸುಸಜ್ಜಿತ ಚರಂಡಿಗಳೇ ಇಲ್ಲ

ಅಮರನಾಥ ಹಿರೇಮಠ
Published 23 ಜುಲೈ 2024, 4:33 IST
Last Updated 23 ಜುಲೈ 2024, 4:33 IST
ಸಾತಿಹಾಳ ಗ್ರಾಮದ ಆಸರೆ ಮನೆಗಳಿದ್ದ ಪುನರ್ವಸತಿ ಕೇಂದ್ರದಲ್ಲಿ ಸುಸಜ್ಜಿತ ಚರಂಡಿಗಳಿಲ್ಲದೇ ನಿಂತ ಚರಂಡಿ ಹಾಗೂ ಮಳೆಯ ನೀರು
ಸಾತಿಹಾಳ ಗ್ರಾಮದ ಆಸರೆ ಮನೆಗಳಿದ್ದ ಪುನರ್ವಸತಿ ಕೇಂದ್ರದಲ್ಲಿ ಸುಸಜ್ಜಿತ ಚರಂಡಿಗಳಿಲ್ಲದೇ ನಿಂತ ಚರಂಡಿ ಹಾಗೂ ಮಳೆಯ ನೀರು   

ದೇವರಹಿಪ್ಪರಗಿ: ಹಲವು ಮನೆಗಳು ಬಳಕೆಯಿಲ್ಲದೇ ಖಾಲಿ, ಇದ್ದ ಕುಟುಂಬಗಳು ಚರಂಡಿ ವ್ಯವಸ್ಥೆಯಿಂದ ವಂಚಿತ, ಹೆಸರಿಗಷ್ಟೇ ಜೆಜೆಎಂ ಕುಡಿಯುವ ನೀರು ಯೋಜನೆ, ಮಳೆಯಾದರೆ ಸಾಕು ನಡುಗಡ್ಡೆಯಂತಾಗುವ ಕೆರೆದಡದ ಮನೆಗಳು. ಪ್ರತಿ ವರ್ಷ ಮಳೆಗಾಲದಲ್ಲಿ ಆತಂಕದ ನಡುವೆಯೂ ಪರದಾಟ...

ಇದು ಆಸರೆ ಪುನರ್ವಸತಿ ಕೇಂದ್ರದ ವಾಸ್ತವಿಕ ಸ್ಥಿತಿ.

ತಾಲ್ಲೂಕಿನ ಸಾತಿಹಾಳ ‘ಆಸರೆ' ಪುನರ್ವಸತಿ ಕೇಂದ್ರ ಜನತೆಗೆ ಮಳೆಯೇಂದರೇ ಆತಂಕ. ಇಲ್ಲಿ ನೆಲೆಸಿರುವ 224 ಕುಟುಂಬಗಳ ಮನೆಗಳಲ್ಲಿ 60 ಕ್ಕೂ ಹೆಚ್ಚು ಕೆರೆ ದಂಡೆಯ ಮನೆಗಳು ಮಳೆ ಬರುವುದೇ ತಡ ಸುತ್ತಲೂ ನೀರಿನಿಂದ ಆವೃತ್ತವಾಗಿ ದ್ವೀಪದಂತಾಗುತ್ತವೆ. ಮಳೆ ನಿಂತರೂ ಸಹ ನೀರಿನ ನೆರೆ ನಿಲ್ಲದು.

ADVERTISEMENT

ಪುನರ್ವಸತಿ ಕೇಂದ್ರದ ಮೇಲಿರುವ ಕೆರೆ ಹಾಗೂ ಕಾಲುವೆಯಿಂದ ನೀರು ಸತತವಾಗಿ ಬಸಿಯುವಿಕೆಯೇ ಈ ಅವಸ್ಥೆಗೆ ಕಾರಣ ಎನ್ನುವುದು ಸ್ಥಳೀಯರ ಅಭಿಪ್ರಾಯ.

‘ಪುನರ್ವಸತಿ ಕೇಂದ್ರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಬಂದಾಗಿ ಎಷ್ಟೋ ವರ್ಷಗಳಾಗಿವೆ. ನಮಗೆ ನಳದ ನೀರೇ ಗತಿ. ಶುದ್ಧ ಕುಡಿಯುವ ನೀರಿನ ಘಟಕ ಆರಂಭಗೊಂಡು ಕೆಲವು ದಿನಗಳ ಮಾತ್ರ ಸರಿಯಾಗಿದ್ದು, ನಂತರ ಕೆಟ್ಟು ಹೋಯಿತು. ಈಗ ಅದು ರಿಪೇರಿ ಮಾಡಲಾಗದಷ್ಟು ಹಾಳಾಗಿದೆ. ಇನ್ನೂ ಜೆಜೆಎಂ ಕಾಮಗಾರಿ ಮುಗಿದಿದ್ದರೂ ಇನ್ನೂ ನೀರು ಬರುತ್ತಿಲ್ಲ. ಅದು ಸಹ ಗ್ರಾಮ ಪಂಚಾಯಿತಿಗೆ ಹಸ್ತಾಂತರವಾಗುವ ಮುನ್ನವೇ ಎಲ್ಲಿ ಹಾಳಾಗುತ್ತದೆ ಎನ್ನುವಂತಾಗಿದೆ’ ಎಂದು ಬಸವರಾಜ ಅವಟಿ ಹೇಳಿದರು.

‘ಪುನರ್ವಸತಿ ಕೇಂದ್ರದಲ್ಲಿ ಸಂಚಾರಕ್ಕೆ ಎರಡು ಮುಖ್ಯ ರಸ್ತೆಗಳು ಮಾತ್ರ ಸಿಸಿ ರಸ್ತೆಗಳಾಗಿವೆ. ಇನ್ನೂಳಿದಂತೆ ಮಣ್ಣಿನ ರಸ್ತೆಗಳೇ. ಮಳೆಯಾದರೆ ಸಾಕು ಕೊಳಚೆ ಹಾಗೂ ಎರೆಮಣ್ಣಿನ ನೀರಿನಿಂದ ರಸ್ತೆಗಳೆಲ್ಲಾ ಕೆಸರುಮಯವಾಗಿ ಇಡೀ ವಾತಾವರಣ ಕಲುಷಿತಗೊಳ್ಳುತ್ತದೆ’ ಎಂದು ಬಂಡೆಪ್ಪ ಬೆನಕನಹಳ್ಳಿ ಆರೋಪಿಸಿದರು.

ಪುನರ್ವಸತಿ ಕೇಂದ್ರದಲ್ಲಿ ಸುಸಜ್ಜಿತ ಚರಂಡಿಗಳೇ ಇಲ್ಲ. ಇದರಿಂದ ಕಲುಷಿತ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದೆ ಜೊತೆಗೆ ಡೆಂಗ್ಯೂ ಭಯ ಕಾಡುತ್ತಿದೆ. ಇದು ಕೇವಲ ಒಂದು, ಎರಡು ದಿನದ ಸಮಸ್ಯೆಯಲ್ಲ. ಕಳೆದ 10-12 ವರ್ಷಗಳಿಂದ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ನಮಗೆ ಆತಂಕ ಎದುರಾಗುತ್ತದೆ ಎನ್ನುತ್ತಾರೆ ಅವರು.

‘ಆಸರೆ ಮನೆಗಳಿದ್ದ ಪುನರ್ವಸತಿ ಕೇಂದ್ರದಲ್ಲಿ ಸುಸಜ್ಜಿತ ಚರಂಡಿ, ಸಿಸಿ ರಸ್ತೆಗಳನ್ನು ಎಲ್ಲೆಡೆ ನಿರ್ಮಿಸಿ ಸ್ವಚ್ಛತೆ ಹಾಗೂ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಬೇಕು’ ಎಂದು ವಸಂತ ಬಾಗೇವಾಡಿ’ ಒತ್ತಾಯಿಸಿದರು.

ಗ್ರಾ.ಪಂಗೆ ಇನ್ನೂ ಜೆಜೆಎಂ ಹಸ್ತಾಂತರಗೊಂಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿರುವ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದೆ. ಚರಂಡಿ ರಸ್ತೆಗಳ ನಿರ್ಮಾಣ ಕುರಿತು ಅಗತ್ಯ ಕ್ರಮವಹಿಸಲಾಗುವುದು

-ಎಂ.ಎನ್.ಕತ್ತಿ. ಪಿಡಿಒ ಸಾತಿಹಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.