ತಾಳಿಕೋಟೆ: ತಾಲ್ಲೂಕಿನ ಭಂಟನೂರ ಗ್ರಾಮವು ಗ್ರಾಮ ಪಂಚಾಯಿತಿಯ ಕೇಂದ್ರಸ್ಥಾನವಾಗಿದ್ದು, ಸಂಪನ್ಮೂಲಗಳಿದ್ದರೂ ಸದ್ಬಳಕೆಯಾಗುತ್ತಿಲ್ಲ. ಗ್ರಾಮದಲ್ಲಿ 1000ಕ್ಕೂ ಹೆಚ್ಚು ಮನೆಗಳಿದ್ದು, 4,200 ಜನಸಂಖ್ಯೆ ಇದೆ. ಅಂದಾಜು 2,200ರಷ್ಟು ಮತದಾರರಿದ್ದಾರೆ ಆದರೂ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿದೆ.
ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿದ್ದರೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಶುದ್ಧೀಕರಣವಾಗದ ಮಲೀನ ನೀರು ಬರುತ್ತಿದ್ದು, ಜನ ಅನಾರೋಗ್ಯ ಹರಡುವ ಆತಂಕದಲ್ಲಿದ್ದಾರೆ. ಕೆಲವೆಡೆ ತಿಂಗಳಾದರೂ ನೀರು ಬರುತ್ತಿಲ್ಲ ಬಂದರೂ ಮಲೀನ ನೀರು ಎನ್ನುತ್ತಾರೆ ಹಿರಿಯರಾದ ಶಿವರೆಡ್ಡಿ ಐನಾಪುರ ಮತ್ತು ಹನಮಗೌಡ ಬಸರೆಡ್ಡಿ.
ಗ್ರಾಮದಲ್ಲಿ ಹಳೆಯ ಗ್ರಾಮ ಪಂಚಾಯಿತಿ ಬಳಿಯ ಬೋರವೆಲ್ ಹಾಗೂ ಎರಡು ಬಾವಿಗಳಿಂದ ನೀರು ಪಡೆಯುತ್ತಿದ್ದಾರೆ. ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಒಂದು ಮಾತ್ರ ಸುಸ್ಥಿತಿಯಲ್ಲಿದೆ.
ಶುದ್ಧ ಸಿಹಿ ಕುಡಿಯುವ ನೀರು ಬೇಕಾದವರು ಗ್ರಾಮದಿಂದ 2-3 ಕಿ.ಮೀ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಬೋರ್‌ನಿಂದ ಹೊತ್ತು ತರಬೇಕು. ಶಾಲೆಗೆ ಹೋಗುವ ಮಕ್ಕಳೆಲ್ಲ ಓದುವುದನ್ನು ಬಿಟ್ಟು ನೀರು ತರಲು ಹೋಗುತ್ತಿದ್ದು, ಶಿಕ್ಷಣ ಪ್ರಗತಿ ಕುಂಠಿತವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥ ಜೆಟ್ಟೆಪ್ಪ.
ತಾಂಡಾದಲ್ಲಿ ಕಟ್ಟಿದ್ದ ಓವರ್ ಹೆಡ್ ಟ್ಯಾಂಕ್ ನೀರು ತುಂಬಿಸಿದ ದಿನವೇ ಸೋರಲಾರಂಭಿಸಿದ್ದರಿಂದ ಅದನ್ನು ಬಳಸುತ್ತಿಲ್ಲ.
ಶಿಕ್ಷಕರ ಕೊರತೆ: ‘ಶತಮಾನದ ಹೆಗ್ಗಳಿಕೆಯ ಶಾಲೆ ನಮ್ಮದು. ಸುತ್ತಲಿನ ನಾಲ್ಕು ಗ್ರಾಮಗಳಿಂದ ಶಿಕ್ಷಣಕ್ಕಾಗಿ ಬರುತ್ತಿದ್ದರು. ಇಂದು ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ, ಇದ್ದವುಗಳನ್ನು ಸದ್ಬಳಕೆಯಾಗದೇ ಹಾಳಾಗುತ್ತಿವೆ. ಶಿಕ್ಷಕರ ಕೊರತೆಯಿಂದ 500ರಷ್ಟಿದ್ದ ಮಕ್ಕಳ ಸಂಖ್ಯೆ 150ಕ್ಕೆ ಇಳಿದಿದೆ’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ರೇವಣಸಿದ್ಧ ಪೂಜಾರಿ ಇತರರು ಹೇಳಿದರು.
ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಆಸ್ಪತ್ರೆಯನ್ನು ನಿರ್ವಹಣೆಗೆಂದು ಖಾಸಗಿಯವರಿಗೆ ವಹಿಸಿಕೊಟ್ಟಿದ್ದಾರೆ. ಅಲ್ಲಿ ವೈದ್ಯರ ಬದಲಾಗಿ ನರ್ಸ್‌ಗಳೇ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರವೇ ಮತ್ತೆ ತನ್ನ ಸುಪರ್ದಿಗೆ ವಹಿಸಿಕೊಳ್ಳಬೇಕು ಎಂಬುದು ಜನತೆಯ ಬೇಡಿಕೆಯಾಗಿದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯತ್ನಿಸುವೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಹಸ್ತಾಂತರವಾಗಿಲ್ಲ. ಅಲ್ಲಿಂದ ಸದ್ಯಕ್ಕೆ ಶುದ್ಧೀಕರಣವಾದ ನೀರು ಒದಗಿಸುವಂತೆ ಅವರ ಗಮನಕ್ಕೆ ತರುವೆ. ಗ್ರಾಮದಲ್ಲಿ ದುರಸ್ತಿಗೆ ಬಂದಿರುವ ಶುದ್ಧೀಕರಣ ಘಟಕವನ್ನು ಶೀಘ್ರದಲ್ಲಿ ದುರಸ್ತಿ ಮಾಡಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಸುವೆವು. ಜಲಜೀವನಮಿಷನ್ ಯೋಜನೆ ಜಾರಿಯಾಗಿದ್ದು ಕಾರ್ಯಗಳು ಅಂತಿಮ ಹಂತಕ್ಕೆ ಬಂದಿವೆ. ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಕೆಲಸ ನಡೆದಿವೆ ಮಹಿಳಾ ಶೌಚಾಲಯ ಸಮಸ್ಯೆಗೂ ಗ್ರಾಮ ಪಂಚಾಯಿತಿಯಲ್ಲಿ ಚರ್ಚಿಸಿ ಪರಿಹಾರ ನೀಡಲಾಗುವುದು ಎಂದು ಪಿಡಿಒ ಸುರೇಶ ದಳವಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪಾಳು ಬಿದ್ದ ಶೌಚಾಲಯ
ಮಹಿಳೆಯರಿಗೆಂದೇ ಗ್ರಾಮದ ಸಮಾಜಸೇವಕ ಶಾಂತಗೌಡ ನಾವದಗಿ ಹೈಟೆಕ್ ಮಹಿಳಾ ಶೌಚಾಲಯ ನಿರ್ಮಿಸಿದ್ದರು. ಗ್ರಾಮ ಪಂಚಾಯಿತಿ ಅದನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಪಾಳು ಬಿದ್ದಿದೆ. ಬಳಕೆದಾರರು ನಿರ್ವಹಣೆಗಿದ್ದವರಿಗೆ ಹಣ ಕೊಡದಿದ್ದುದರಿಂದ ಲಕ್ಷಾಂತರ ಮೌಲ್ಯದ ಕಟ್ಟಡ ವ್ಯರ್ಥವಾಗಿದೆ. ಶೌಚಾಲಯಕ್ಕೆ ಹೋಗುವ ದಾರಿಗೆ ಅಡ್ಡಲಾಗಿ ಕೊಳಚೆ ನೀರು ನಿಂತಿದೆ. ಇದನ್ನು ಸ್ವಚ್ಛಗೊಳಿಸಿದರೇ ಶೌಚಾಲಯಕ್ಕೆ ತೆರಳಲು ಅನುಕೂಲವಾಗುತ್ತದೆ ಎನ್ನುವುದು ಗ್ರಾಮಸ್ಥರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.