ವಿಜಯಪುರ: ಐತಿಹಾಸಿಕ ತಾಜ್ ಬಾವಡಿಯಲ್ಲಿ ಇರುವ ನೀರನ್ನು ಆ ಭಾಗದ ನಿವಾಸಿಗಳಿಗೆ ಕುಡಿಯಲು ಪೂರೈಸುವ ಸದುದ್ದೇಶದಿಂದ ಮಹಾನಗರ ಪಾಲಿಕೆಯು ತನ್ನ 15ನೇ ಹಣಕಾಸು ಯೋಜನೆಯಡಿ ₹ 1 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ಮಹತ್ವಾಕಾಂಕ್ಷಿ ಜಲ ಶುದ್ಧೀಕರಣ ಘಟಕ ನಿರ್ಮಾಣ ಯೋಜನೆಗೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ.
ಜಲ ಶುದ್ಧೀಕರಣ ಘಟಕ ನಿರ್ಮಾಣ ಕ್ರೀಯಾಯೋಜನೆಗೆ ಜಿಲ್ಲಾಧಿಕಾರಿ ಅವರಿಂದ ಮಹಾನಗರ ಪಾಲಿಕೆ ಅಧಿಕೃತವಾಗಿ ಅನುಮೋದನೆ ಪಡೆದುಕೊಂಡಿದ್ದು, ಜೂನ್ 2ರಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಅನಗತ್ಯ ವಿರೋಧ ದಾಖಲಾಗಿದೆ.
‘ಸಂರಕ್ಷಿತ ಸ್ಮಾರಕ ತಾಜ್ ಬಾವಡಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಎಎಸ್‌ಐ ಮತ್ತು ವಕ್ಫ್ ಬೋರ್ಡ್ ಅನುಮತಿ ಪಡೆದಿಲ್ಲ.ಅಲ್ಲದೇ, ಜಲ ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ಮುಂದಾಗುವ ಮೂಲಕ ಕೋಮು ದ್ವೇಷ ಹರಡಲಾಗುತ್ತಿದೆ’ ಎಂಬ ಆರೋಪ ವ್ಯಕ್ತವಾಗಿದೆ. ಆದರೆ, ಈ ಮೊದಲು ಇಲ್ಲಿ ಶುದ್ಧ ನೀರಿನ ಘಟಕ(ಆರ್‌ಒ ಪ್ಲಾಂಟ್) ಆರಂಭಿಸುವಾಗ ಇಲ್ಲದ ವಿರೋಧ ಈಗೇಕೆ ಎಂಬ ಪ್ರಶ್ನೆ ಮೂಡಿದೆ.
ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಅವರು ಈ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿದ್ದಾರೆ. ತಾಜ್ ಬಾವಡಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಏಳು, ಎಂಟು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವುದರಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಂಕಷ್ಟ ನಿವಾರಣೆಯಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೇಂದ್ರ ಜಲಶಕ್ತಿ ಅಭಿಯಾನ್ ಪ್ರಕಾರ ಜಲಮೂಲಗಳನ್ನು ಪುನಶ್ಚೇತನಗೊಳಿಸಿ, ಅವುಗಳನ್ನು ಭವಿಷ್ಯದ ದೃಷ್ಟಿಯಿಂದ ಕಾಪಾಡಬೇಕು. ಇವುಗಳ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂಬ ನಿರ್ದೇಶನವಿದೆ. ಈ ಹಿನ್ನೆಲೆಯಲ್ಲಿ ತಾಜ್‌ಬಾವಡಿಯನ್ನು ಬಳಸಿಕೊಳ್ಳಲಾಗುತ್ತಿದೆ. ಸಕಾರಣವಿಲ್ಲದೇ ವಿರೋಧ ವ್ಯಕ್ತಪಡಿಸುವುದು ನಗರದ ಅಭಿವೃದ್ಧಿ ದೃಷ್ಟಿಯಿಂದ ಸೂಕ್ತವಲ್ಲ ಎಂದಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಸಂಬಂಧ ಮಾರ್ಚ್‌ನಲ್ಲೇ ಜಲ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ವಕ್ಫ್ ಬೋರ್ಡ್‌ಗೆ ಪತ್ರ ಬರೆದು ಅನುಮತಿ ಕೋರಿದ್ದಾರೆ. ಅಲ್ಲದೇ, ಈ ಸ್ಮಾರಕವು ಎಎಸ್‌ಐ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ಅವರ ಅನುಮತಿಯ ಅಗತ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಿದ್ದ ತಾಜ್ ಬಾವಡಿಯನ್ನುಮೂರು ವರ್ಷಗಳ ಹಿಂದೆ ಶಾಸಕ ಎಂ.ಬಿ.ಪಾಟೀಲ ಅವರು ಸಚಿವರಾಗಿದ್ದಾಗ ಕೆಬಿಜಿಎನ್‌ಎಲ್ ಮತ್ತು ಸಿಎಸ್‌ಅರ್ ಅನುದಾನ ಸೇರಿದಂತೆ ಒಟ್ಟು ₹3.5 ಕೋಟಿ ಮೊತ್ತದಲ್ಲಿ ಬಾವಡಿಯ ಹೂಳು ತೆಗೆದು ಪುನಶ್ಚೇತನಗೊಳಿಸಲಾಗಿದೆ. ಬಾವಡಿಗೆ ಹರಿದುಬರುತ್ತಿದ್ದ ಒಳಚರಂಡಿ ನೀರನ್ನು ತಡೆದು ನಿಲ್ಲಿಸಲಾಗಿದೆ. ಇದೀಗ ಸುಮಾರು 5 ಎಂಎಲ್‌ಡಿ ನೀರು ಸಂಗ್ರಹವಾಗಿದೆ. ಈ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಶುದ್ಧ ನೀರಿನ ಘಟಕ ನಿರ್ಮಾಣದಿಂದ ಸ್ಮಾರಕಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಸ್ಮಾರಕದ ವ್ಯಾಪ್ತಿಯಲ್ಲಿರುವ 1500 ಚದರ ಅಡಿ ಜಾಗದಲ್ಲಿ ಘಟಕ ನಿರ್ಮಾಣವಾಗಲಿದೆ. ಗಣಪತಿ ವಿಸರ್ಜನೆ ಮಾಡುವ ಜಾಗಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಶುದ್ಧೀಕರಣ ಘಟಕ ನಿರ್ಮಾಣದಿಂದ ತಾಜ್‌ಬಾವಡಿ ವ್ಯಾಪ್ತಿಯ ಜನರಿಗೆ ಭವಿಷ್ಯದಲ್ಲಿ ಭರಪೂರ ನೀರು ಲಭಿಸಲಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆಯೇ ಹೊರತು, ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಾವಡಿ ನೀರು ಬಳಕೆ ಮಾಡದೇ ಹಾಗೆಯೇ ಬಿಟ್ಟರೆ ಮೊದಲಿನಂತೆ ಬಾವಡಿ ಪಾಳು ಬೀಳಲಿದೆ. ಜನರು ತ್ಯಾಜ್ಯವನ್ನು ಎಸೆದು ಹಾಳು ಮಾಡುವುದನ್ನು ತಪ್ಪಿಸಲು ಇದೊಂದು ಉತ್ತಮ ಯೋಜನೆಯಾಗಿದೆ ಎಂದರು.
* ಆದಿಲ್ ಶಾಹಿಗಳ ಕಾಲದಲ್ಲಿ ಅಂದಿನ ವಿಜಯಪುರ ನಗರಕ್ಕೆ ನೀರು ಪೂರೈಸುವ ಮುಖ್ಯ ಜಲಮೂಲವಾಗಿದ್ದ ತಾಜ್‌ಬಾವಡಿಯನ್ನು ಅದೇ ಉದ್ದೇಶಕ್ಕೆ ಪಾಲಿಕೆಯು ಇಂದು ಬಳಸಿಕೊಳ್ಳಲು ಯೋಜನೆ ರೂಪಿಸಿದೆ
–ಶ್ರೀಹರ್ಷ ಶೆಟ್ಟಿ, ಆಯುಕ್ತ, ಮಹಾನಗರ ಪಾಲಿಕೆ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.