ವಿಜಯಪುರ:ಗಣೇಶ ಚತುರ್ಥಿ ಮುಗಿದಿದೆ. ಪ್ರತಿಷ್ಠಾಪನೆಯೂ ಪೂರ್ಣಗೊಂಡಿದೆ. ಮಾರಾಟಗಾರರು ತಮ್ಮಲ್ಲಿ ಉಳಿದ ಪಿಒಪಿ ಮೂರ್ತಿಗಳನ್ನು ಸುರಕ್ಷಿತವಾಗಿ ಯಥಾಪ್ರಕಾರ ಪ್ಯಾಕ್ ಮಾಡುವುದು ನಡೆದಿದೆ.
ಪರಿಸರ ಸಂರಕ್ಷಣೆಗಾಗಿ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳ ಮಾರಾಟ, ಪ್ರತಿಷ್ಠಾಪನೆಗೆ ನಿಷೇಧ ಹಾಕಿದ್ದರೂ; ಎಲ್ಲೆಡೆ ಮಾರಾಟಗಾರರು ನಿರೀಕ್ಷೆಗೂ ಮೀರಿ ಪಿಒಪಿ ಮೂರ್ತಿಗಳನ್ನೇ ಮಹಾರಾಷ್ಟ್ರದ ವಿವಿಧೆಡೆಯಿಂದ ಖರೀದಿಸಿ ತಂದು ವ್ಯಾಪಾರ ನಡೆಸಿದರು.
ಹಬ್ಬದ ಮೂರ್ನಾಲ್ಕು ದಿನ ಮುನ್ನ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ನೇತೃತ್ವದ ತಂಡ ಪಿಒಪಿ ಮೂರ್ತಿ ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸಿದ ಪರಿಣಾಮ ನಿರೀಕ್ಷೆಗಿಂತಲೂ ಶೇ 50ರಷ್ಟು ವ್ಯಾಪಾರ ಕುಂಠಿತಗೊಂಡಿತು ಎಂಬುದು ವ್ಯಾಪಾರಿ ಸಮೂಹದ ಅಳಲು.
‘ಶ್ರಾವಣಕ್ಕೂ ಮುನ್ನ ಈ ಬಾರಿ ಅಧಿಕ ಮಾಸ ಬಂದಿದ್ದರಿಂದ ಗಣೇಶ ಮೂರ್ತಿಗಳನ್ನು ತಯಾರಿಸಲು ಹೆಚ್ಚಿನ ಸಮಯ ಸಿಕ್ಕಿದೆ. ಹೀಗಾಗಿ ಬೇಡಿಕೆಗಿಂತಲೂ ಅಧಿಕ ಪ್ರಮಾಣದಲ್ಲಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದವು. ನಾಲ್ವರು ಸೇರಿ ತಯಾರಿಸಿದ 200 ಮಣ್ಣಿನ ಗಣೇಶ ಮೂರ್ತಿಗಳಲ್ಲಿ ಬೆರಳಣಿಕೆಯಷ್ಟು ಮಾತ್ರ ಉಳಿದುಕೊಂಡಿವೆ. ಸೊಲ್ಲಾಪುರದಿಂದ ತಂದಿದ್ದ 500 ಪಿಒಪಿ ಗಣೇಶ ಮೂರ್ತಿಗಳಲ್ಲಿ ಕೇವಲ 200 ಮಾರಾಟವಾಗಿವೆ. ಪ್ರತಿ ವರ್ಷ ಬಾಳಂದ್ರ ಹತ್ತಿಪ್ಪತ್ತು ಮಾತ್ರ ಉಳಿದುಕೊಳ್ಳುತ್ತಿದ್ದವು. ನಮಗೂ ಸೇರಿದಂತೆ ನಗರದ ಬಹುತೇಕ ವ್ಯಾಪಾರಿಗಳಿಗೆ ಈ ಬಾರಿ ಪಿಒಪಿ ಮೂರ್ತಿಗಳ ವ್ಯಾಪಾರ ಹೇಳಿಕೊಳ್ಳುವಂತಾಗಿಲ್ಲ’ ಎಂದು ವ್ಯಾಪಾರಿ ಗಣೇಶ ಕಾಳೆ ಹೇಳಿದರು.
‘ಮೂರು ತಲೆಮಾರಿನಿಂದ ನಮ್ಮ ಮನೆತನದವರು ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಕೆಲ ವರ್ಷಗಳಿಂದ ಜನರು ಅಂದ–ಚಂದಕ್ಕೆ ಮರುಳಾಗಿ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದರು. ಇದರಿಂದ ಕ್ರಮೇಣ ಮಣ್ಣಿನ ಮೂರ್ತಿಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಅಂದುಕೊಂಡಿದ್ದೆವು. ಆದರೆ, ಈ ವರ್ಷ ಪಿಒಪಿಗಿಂತಲೂ ಉತ್ತಮವಾಗಿ ಮಣ್ಣಿನ ಮೂರ್ತಿಗಳು ಮಾರಾಟವಾಗಿವೆ. ಮುಂದಿನ ವರ್ಷ ಮಾರಾಟಕ್ಕೆ ಅವಕಾಶ ಕೊಟ್ಟರೆ ಉಳಿದ 200 ಪಿಒಪಿ ಮೂರ್ತಿ ಮಾರುತ್ತೇವೆ. ಇಲ್ಲಂದರೆ ನಷ್ಟ ಉಂಟಾಗುತ್ತದೆ’ ಎಂದು ಅವರು ಹೇಳಿದರು.
‘ಜಿಲ್ಲಾಡಳಿತ ನಡೆಸಿದ ದಾಳಿಯಿಂದ ವ್ಯಾಪಾರದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. 1000 ಮೂರ್ತಿಗಳಲ್ಲಿ ಕೇವಲ 600 ಮಾತ್ರ ಮಾರಾಟವಾಗಿವೆ. ಈ ಸಮಸ್ಯೆ ನಮ್ಮದಷ್ಟೇ ಅಲ್ಲ. ಎಲ್ಲಾ ವ್ಯಾಪಾರಿಗಳದ್ದು ಇದೇ ಗೋಳು. ಪಿಒಪಿ ಗಣೇಶ ಮೂರ್ತಿ ಮಾಡಿದರೆ ಮಾತ್ರ ಲಾಭ ಸಿಗುವುದಿಲ್ಲ. ಮಣ್ಣಿನ ಮೂರ್ತಿ ಮಾರಾಟ ಮಾಡಿದರೂ ಆದಾಯ ಸಿಗುತ್ತದೆ. ಬೇಡಿಕೆಯಷ್ಟು ಮಣ್ಣಿನ ಮೂರ್ತಿಗಳು ಸಿಗದಿರುವ ಹಿನ್ನೆಲೆ ಪಿಒಪಿ ಮೂರ್ತಿ ತಂದು ಮಾರಾಟ ಮಾಡುತ್ತೇವೆ.
ಜಿಲ್ಲೆಯಲ್ಲಿ ಬೇಡಿಕೆಯಷ್ಟು ಮಣ್ಣಿನ ಮೂರ್ತಿಗಳನ್ನು ಕಲ್ಪಿಸದೆ, ಏಕಾಏಕಿ ಪಿಒಪಿ ಮೂರ್ತಿಗಳನ್ನು ನಿಷೇಧಿಸುವುದು ಸರಿಯಲ್ಲ. ಆದೇಶ ನೀಡಿದಂತೆ ಇಂದಿನಿಂದ ಸೂಕ್ತ ಕ್ರಮಕ್ಕೆ ಮುಂದಾಗಿ ಮೂರ್ತಿಗಳು ತಯಾರಾಗದಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ವ್ಯಾಪಾರಕ್ಕೆ ತಂದ ನಂತರ ಕಾಟಾಚಾರಕ್ಕೆ ಎಂಬಂತೆ ದಾಳಿ ನಡೆಸಿ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ. ಪರಿಸರ ಹಾಳು ಮಾಡುವ ಉದ್ದೇಶವೂ ನಮಗಿಲ್ಲ’ ಎಂದು ಹೆಸರು ಹೇಳಲಿಚ್ಚಸದ ಪಿಒಪಿ ಗಣೇಶ ಮೂರ್ತಿಗಳ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.