ADVERTISEMENT

ಗವಿಸಿದ್ಧೇಶ್ವರ ಜಾತ್ರೆ; ಮುಸ್ಲಿಮರ ಉಪವಾಸ..!

ದೀಪಾವಳಿ ಅಮಾವಾಸ್ಯೆಯಂದು ವ್ರತಾಚರಣೆ ಸಂಪನ್ನ; ಅಪಾರ ಭಕ್ತ ಸಾಗರ

ಸಿದ್ದು ಹತ್ತಳ್ಳಿ
Published 7 ನವೆಂಬರ್ 2018, 14:02 IST
Last Updated 7 ನವೆಂಬರ್ 2018, 14:02 IST
ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇಗುಲದ ಆವರಣದಲ್ಲಿ ದೀಪಾವಳಿ ಅಮಾವಾಸ್ಯೆಯಾದ ಬುಧವಾರ ಉಪವಾಸ ವ್ರತಾಚರಣೆ ಕೈಬಿಟ್ಟ ಭಕ್ತ ಸಮೂಹ ಪ್ರಸಾದ ಸವಿಯಿತು
ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇಗುಲದ ಆವರಣದಲ್ಲಿ ದೀಪಾವಳಿ ಅಮಾವಾಸ್ಯೆಯಾದ ಬುಧವಾರ ಉಪವಾಸ ವ್ರತಾಚರಣೆ ಕೈಬಿಟ್ಟ ಭಕ್ತ ಸಮೂಹ ಪ್ರಸಾದ ಸವಿಯಿತು   

ತಾಂಬಾ: ಗ್ರಾಮದ ಗವಿಸಿದ್ಧೇಶ್ವರ ದೇವರ ಕೃಪೆಗೆ ಪಾತ್ರರಾಗಲು ಜಾತಿ–ಧರ್ಮ ಬದಿಗೊತ್ತಿ ಒಂದು ತಿಂಗಳು ಉಪವಾಸ ವ್ರತಾಚರಣೆ ಕೈಗೊಂಡಿದ್ದ ಭಕ್ತ ಸಮೂಹ, ಬುಧವಾರ ತಮ್ಮ ವ್ರತಾಚರಣೆಯನ್ನು ಸಂಪನ್ನಗೊಳಿಸಿತು.

ಪ್ರತಿ ವರ್ಷದ ದೀಪಾವಳಿ ಅಮಾವಾಸ್ಯೆಯಂದು ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಯುವುದು ವಾಡಿಕೆ. ಇದೇ ದಿನ ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವವೂ ನಡೆಯಲಿದ್ದು, ಎರಡೂ ಒಟ್ಟಿಗೆ ನಡೆಯುವುದು ವಿಶೇಷ.

ಗವಿಸಿದ್ಧೇಶ್ವರನ ಮೇಲೆ ಗ್ರಾಮಸ್ಥರಿಗೆ ಅಪಾರ ನಂಬಿಕೆ. ಸುತ್ತಮುತ್ತಲಿನ ಗ್ರಾಮಗಳ ಜನರು ಸಹ ದೇವರಿಗೆ ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಹರಕೆ ಹೊತ್ತುಕೊಳ್ಳುವುದು ಇಲ್ಲಿ ಸಹಜ. ಇದಕ್ಕೆ ಜಾತಿ–ಧರ್ಮದ ಹಂಗಿಲ್ಲ. ಬಯಕೆ ಈಡೇರಿಕೆಗಾಗಿ ಮಹಾಲಯ ಅಮಾವಾಸ್ಯೆಯಿಂದ, ದೀಪಾವಳಿ ಅಮಾವಾಸ್ಯೆಯವರೆಗೂ ಹಲ ಭಕ್ತರು ಉಪವಾಸ ವ್ರತಾಚರಣೆ ನಡೆಸಲಿದ್ದಾರೆ.

ADVERTISEMENT

ತಾಂಬಾ ಗ್ರಾಮದ ಪ್ರತಿ ಮನೆಯಲ್ಲಿ ಒಬ್ಬರಾದರೂ ಉಪವಾಸ ವ್ರತ ಆಚರಿಸುತ್ತಾರೆ. ಮುಸ್ಲಿಮರು ಸಹ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಗವಿಸಿದ್ಧೇಶ್ವರನ ಜಾತ್ರಾ ಸಮಯದಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಾರೆ.

‘ಉಪವಾಸ ವ್ರತಾಚರಣೆಯನ್ನು ಭಕ್ತರು ಕಟ್ಟುನಿಟ್ಟಿನಿಂದ ಆಚರಿಸುತ್ತಾರೆ. ನಸುಕಿನಲ್ಲೇ ಒಂದು ಲೋಟ ಚಹಾ ಕುಡಿದರೆ, ಮತ್ತೆ ಏನನ್ನೂ ತಿನ್ನುವುದಿಲ್ಲ. ತುಂಬಾ ದಾಹವಾದರೆ ನೀರನ್ನಷ್ಟೇ ಕುಡಿಯಲಿದ್ದಾರೆ. ರಾತ್ರಿಯಷ್ಟೇ ಒಂದು ಹೊತ್ತು ಊಟ ಅಥವಾ ಫಲಾಹಾರ ಸೇವಿಸಲಿದ್ದಾರೆ’ ಎಂದು ಗ್ರಾಮದ ಹಿರಿಯರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವ್ರತಾಚರಣೆಯಲ್ಲಿ ತೊಡಗಿದವರು ಕಾಲಿಗೆ ಪಾದರಕ್ಷೆ ತೊಡಲ್ಲ. ಪಾದರಕ್ಷೆ ಹಾಕಿಕೊಂಡವರು ಅಪ್ಪಿತಪ್ಪಿ ಮುಟ್ಟಿದರೆ ಅಂದು ನೀರನ್ನು ಕುಡಿಯಲ್ಲ. ಮತ್ತೊಮ್ಮೆ ಝಳಕ ಮಾಡಿದ ಬಳಿಕ, ದೇವರಿಗೆ ಪೂಜೆ ಸಲ್ಲಿಸಿಯೇ ಮುಂದುವರೆಯಲಿದ್ದಾರೆ’ ಎಂದು ಹೇಳಿದರು.

ಗವಿಸಿದ್ಧೇಶ್ವರನ ಸಂಪ್ರೀತಿಗಾಗಿ ಮಹಾಲಯ ಅಮಾವಾಸ್ಯೆಯಿಂದ ಬುಧವಾರದ ತನಕ ಕಟ್ಟುನಿಟ್ಟಿನಿಂದ ವ್ರತಾಚರಣೆ ನಡೆಸಿದ ಭಕ್ತ ಸಮೂಹ, ದೀಪಾವಳಿ ಅಮಾವಾಸ್ಯೆಯಂದು ದೇಗುಲದ ಆವರಣದಲ್ಲಿ ನೆರೆದು ದೇವರ ದರ್ಶನ ಪಡೆಯಿತು. ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಧನ್ಯತಾಭಾವ ಹೊಂದಿತು.

ವಿಶೇಷ ಪೂಜೆ ಸಲ್ಲಿಸಿದ ಬಳಿಕ ಒಂದು ತಿಂಗಳ ಉಪವಾಸ ವ್ರತಾಚರಣೆ ಕೈಬಿಟ್ಟಿತು. ದೇಗುಲದ ಆವರಣದಲ್ಲೇ ಪ್ರಸಾದ ಸ್ವೀಕರಿಸಿ, ಸಂತೃಪ್ತಿಯ ಭಾವನೆ ವ್ಯಕ್ತಪಡಿಸಿತು. ಎರಡೂ ದೇವಸ್ಥಾನದಲ್ಲಿ ವಿಶಿಷ್ಟ ಪೂಜೆ ನಡೆದವು. ದೇವರ ನಾಮಸ್ಮರಣೆ, ಡೊಳ್ಳು ಕುಣಿತ, ಭಜನೆ, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.