ಚಡಚಣ: ರಾಜ್ಯದ ಗಡಿ ಅಂಚಿನಲ್ಲಿರುವ, ಮಹಾರಷ್ಟ್ರದ ಹುಲಜಂತಿ ಮಾಳಿಂಗರಾಯ ದೇವರ ಜಾತ್ರೆ ಗುರುವಾರದಿಂದ ಆರಂಭಗೊಳ್ಳಲಿದೆ.
ಪ್ರತಿ ವರ್ಷದಂತೆ ದೀಪಾವಳಿ ಅಮವಾಸ್ಯೆಯ ರಾತ್ರಿ ಪರಶಿವನು ಮಾಳಿಂಗರಾಯನ ದೇವಾಲಯದ ಶಿಖರಕ್ಕೆ ಮುಂಡಾಸು(ಪೇಠ) ಸುತ್ತುತ್ತಾನೆ. ಇದನ್ನು ನೋಡಲು ಶುಕ್ರವಾರ ಬೆಳಿಗ್ಗೆಯೇ ಲಕ್ಷಾಂತರ ಭಕ್ತರು ದೇವಾಲಯದ ಸುತ್ತ ಜಮಾಯಿಸಿ, ಮಾಳಿಂಗರಾಯನ ದರ್ಶನ ಪಡೆಯುತ್ತಾರೆ.
ಶುಕ್ರವಾರ ಸಂಜೆ ದೇವಾಲಯದ ಮುಂಭಾಗದ ಹಳ್ಳದಲ್ಲಿ ಪಲ್ಕಕಿಗಳ ಭೇಟಿ ಕಾರ್ಯಕ್ರಮ ಜರುಗಲಿದ್ದು, ಸುಮಾರು 30ಕ್ಕೂ ಹೆಚ್ಚು ದೇವರುಗಳ ಪಲ್ಲಕಿಗಳು ಪಾಲ್ಗೊಳ್ಳಲಿವೆ.
ಹಾಲುಮತ ಸಮಾಜದವರ ಕಾಶಿ ಎಂದೇ ಪ್ರಸಿದ್ಧಿಯಾದ ಹುಲಜಂತಿಯಲ್ಲಿ ಶುಕ್ರವಾರ ನಡೆಯುವ ಭೇಟಿ ಹಾಗೂ ಮುಂಡಾಸ್ ನೋಡಲು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂದ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಐದು ದಿನಗಳವರೆಗೆ ಜರುಗುವ ಜಾತ್ರೆ ಸುಗಮವಾಗಿ ನಡೆಸಲು ಸಾಂಗಲಿ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಭಕ್ತರ ಆಗಮನಕ್ಕೆ ಕರ್ನಾಟಕ ಮಾಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಸಾರಿಗೆ ಸಂಸ್ಥೆಗಳು ಬಸ್ ಸೌಕರ್ಯ ಒದಗಿಸಲಾಗಿದೆ.
ಮಾಳಿಂಗರಾಯನ ಹಿನ್ನೆಲೆ: ಮಹಾರಾಷ್ಟ್ರದ ಬಾರಾಮತಿ ಪಟ್ಟಣದಲ್ಲಿ ಹಾಲುಮತ ಸಮಾಜದ ತುಕ್ಕಪ್ಪ ಹಾಗೂ ಅಮೃತಬಾಯಿ ಎಂಬುವವರ ಉದರದಲ್ಲಿ ಜನಿಸಿದ ಮಾಳಿಂಗರಾಯನು,ಸೋಲ್ಲಾಪೂರ ಜಿಲ್ಲೆ, ಮಂಗಳವೇಡ ತಾಲ್ಲೂಕಿನ ಹುಲಜಂತಿ ಗ್ರಾಮದಲ್ಲಿ ನೆಲೆ ನಿಂತನು. ಶಿರಾಡೋಣದ ಬೀರಲಿಂಗೇಶ್ವರನನ್ನು ಗುರುವಾಗಿಸಿಕೊಂಡು ತಪೋ ಫಲದಿಂದ ದೈವಿ ಸಂಭೂತರಾದರು. ಹಲವಾರು ಪವಾಡಗಳನ್ನು, ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಜನ ಮಾನಸದಲ್ಲಿ ಸ್ಥಿರವಾಗಿ ನೆಲೆಸಿದ್ದಾನೆ.
ಪವಾಡ ಪುರುಷ ಮಾಳಿಂಗರಾಯನ ಭಕ್ತಿಗೆ ಮೆಚ್ಚಿ ಸಾಕ್ಷಾತ್ ಪರಶಿವನೇ ಮಾಳಿಂಗರಾಯನ ದೇವಾಲಯಕ್ಕೆ ದಿಪಾವಳಿ ಅಮವಾಸ್ಯೆಯ ರಾತ್ರಿ ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ.
ದೇವಾಲಯದ ಶಿಖರಕ್ಕೆ ಸುತ್ತಿದ ಮೂಂಡಾಸು ಯಾವ ಕಡೆ ವಾಲಿದೆ, ಯಾವ ಕಡೆಗೆ ಬಿಗಿಯಾಗಿ ಸುತ್ತಿಕೊಂಡಿದೆ ಎಂಬುದರ ಮೇಲೆ ಮಳೆ,ಬೆಳೆ ಹಾಗೂ ರಾಜಕೀಯ ಲೆಕ್ಕಾಚಾರ ಮಾಡುವುದು ಭಕ್ತರ ಭಾವಕ್ಕೆ ನಿಲುಕಿದ್ದು.
ಭಕ್ತರಿಂದ ಕಾಲ್ನಡಿಗೆ: ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಹುಲಜಂತಿಯ ಕಡೆಗೆ ಕಾಲ್ನಡಿಗೆಯಿಂದ ಆಗಮಿಸಿ, ತಮ್ಮ ಹರಕೆಯನ್ನು ತೀರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.