ADVERTISEMENT

‘ಜುಡೋ’ದತ್ತ ಯುವಜನರ ಚಿತ್ತ

ಅಂತರರಾಷ್ಟ್ರೀಯ ಮಟ್ಟದ ನುರಿತ ತರಬೇತುದಾರರ ನಿಯೋಜನೆ

ಬಾಬುಗೌಡ ರೋಡಗಿ
Published 7 ಆಗಸ್ಟ್ 2019, 19:45 IST
Last Updated 7 ಆಗಸ್ಟ್ 2019, 19:45 IST
ವಿಜಯಪುರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಮೊದಲ ಮಹಡಿಯಲ್ಲಿ ಎಂ.ಎನ್‌.ತ್ರೀವೇಣಿ ತರಬೇತಿ ನೀಡುತ್ತಿರುವುದುಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ವಿಜಯಪುರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಮೊದಲ ಮಹಡಿಯಲ್ಲಿ ಎಂ.ಎನ್‌.ತ್ರೀವೇಣಿ ತರಬೇತಿ ನೀಡುತ್ತಿರುವುದುಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ   

ವಿಜಯಪುರ: ಜಿಲ್ಲೆಯ ಕ್ರೀಡಾಪಟುಗಳಿಗೆ ಅದರಲ್ಲೂ ಜುಡೋ ಪ್ರೇಮಿಗಳಿಗೆ ಸಿಹಿ ಸುದ್ದಿ. ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲೇ ಈಗ ಅಂತರರಾಷ್ಟ್ರೀಯ ಮಟ್ಟದ ನುರಿತ ಜುಡೋ ತರಬೇತುದಾರರಿಂದ ‘ಜುಡೋ’ ತರಬೇತಿ ನೀಡಲಾಗುತ್ತಿದೆ.

ಸೈಕ್ಲಿಂಗ್‌ನಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ವಿಜಯಪುರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದೀಗ ಜುಡೋ ಕ್ರೀಡೆಯಲ್ಲೂ ಸಾಧನೆಗೆ ಮುಂದಾಗಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ತರಬೇತಿ ವ್ಯವಸ್ಥೆ ಕಲ್ಪಿಸಿದ್ದು, ನುರಿತ ತಜ್ಞರನ್ನು ನಿಯೋಜಿಸಿದೆ.

ಮೂರು ತಿಂಗಳಿನಿಂದ ಇಲ್ಲಿಯ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಮೊದಲ ಮಹಡಿಯಲ್ಲಿ ಸಿದ್ಧಪಡಿಸಲಾದ ಜುಡೋ ಹಾಲ್‌ನಲ್ಲಿ 25 ಮಕ್ಕಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

‘ಜುಡೋ ಕ್ರೀಡೆ ಕುರಿತು ಆಸಕ್ತಿ ಇರುವ ಮಕ್ಕಳಿಗೆ ಒಂದು ವಾರ ದೈಹಿಕ ತರಬೇತಿ ನೀಡಲಾಗುತ್ತದೆ. ಕ್ರೀಡೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಇರುವ ಮಕ್ಕಳನ್ನು ಆಯ್ಕೆ ಮಾಡಿಕೊಂಡು ತರಬೇತಿ ಆರಂಭಿಸಲಾಗುತ್ತದೆ. 10ಕ್ಕಿಂತ ಹೆಚ್ಚು 20ಕ್ಕಿಂತ ಕಡಿಮೆ ವಯೋಮಿತಿಯ ಮಕ್ಕಳು ತರಬೇತಿ ಪಡೆಯಲು ಅರ್ಹರು. ಅವರಿಗೆ ಉತ್ತಮ ತರಬೇತಿ ನೀಡಿ ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ತಯಾರಿ ಮಾಡುವ ಉದ್ದೇಶ ಹೊಂದಲಾಗಿದೆ’ ಎಂದು ತರಬೇತುರರಾದ ಎಂ.ಎನ್‌.ತ್ರೀವೇಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಬೇತಿ ಪಡೆಯಲು ಇಚ್ಛಿಸುವವರು ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಕ್ರೀಡಾಪಟುಗಳು ಪ್ರತಿನಿತ್ಯ ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು. ಮೊಬೈಲ್‌ ಬಳಸುವಂತಿಲ್ಲ. ಮದ್ಯಪಾನ, ಗುಟ್ಕಾ ಸೆೇವನೆ ಮಾಡುವಂತಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಇದುವರೆಗೆ ಜುಡೋ ತರಬೇತುದಾರರು ಇರಲಿಲ್ಲ. ಹೀಗಾಗಿ ಯಾರೂ ಸಹ ಜುಡೋ ಕ್ರೀಡೆಯ ಬಗ್ಗೆ ಆಸಕ್ತಿ ತೋರಿರಲಿಲ್ಲ. ಇದೀಗ ಇಲಾಖೆಯಿಂದ ಅಂತರರಾಷ್ಟ್ರೀಯ ಮಟ್ಟದ ನುರಿತ ಹಾಗೂ ಅನುಭವಿ ತರಬೇತುದಾರರನ್ನು ನಿಯೋಜನೆ ಮಾಡಲಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಜಿ.ಲೋಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.