ದೇವರಹಿಪ್ಪರಗಿ: ಕಡಕೋಳ ಸೇರಿದಂತೆ ಸುತ್ತಲಿನ ಜನರ ಬಹು ದಿನಗಳ ಕನಸಾಗಿದ್ದ ಬುದ್ಧವಿಹಾರ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಈ ತಾಣ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ.
ತಾಲ್ಲೂಕಿನ ಕಡಕೋಳ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ 2017ರ ಮೇ 28ರಂದು ವಿಶ್ವರತ್ನ ಬುದ್ಧ ವಿಹಾರ ಟ್ರಸ್ಟ್ ಅಡಿಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಭಂತೆ ಪೂಜ್ಯರು ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ನಂತರ ನೀಲನಕ್ಷೆ ತಯಾರಿಸಿ ಕಟ್ಟಡ ಕಾರ್ಯ ಕೂಡಲೇ ಆರಂಭಿಸುವ ಕುರಿತು ಭರವಸೆ ನೀಡಿದ್ದರು. ಅಂತೆಯೇ ಶಾಸಕ ನಡಹಳ್ಳಿಯವರು ₹ 1.50 ಕೋಟಿ ಹಣ ಬಿಡುಗಡೆಗೊಳಿಸಿ ಬುದ್ಧ ವಿಹಾರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
ನಿರ್ಮಾಣ ಕಾರ್ಯದ ಉಸ್ತುವಾರಿ ಹೊತ್ತಿರುವ ಚಂದ್ರಶೇಖರ ಕಡಕೋಳ ಈ ಕುರಿತು ಮಾತನಾಡಿ, ಬುದ್ಧ ವಿಹಾರ ನಿರ್ಮಾಣಕ್ಕೆ ಒಟ್ಟು ₹ 3 ಕೋಟಿ ಅಂದಾಜು ವೆಚ್ಚವಾಗುತ್ತಿದ್ದು, ಅದರಲ್ಲಿ ಅರ್ಧದಷ್ಟು ಹಣವನ್ನು ಶಾಸಕ ನಡಹಳ್ಳಿ ಮಂಜೂರು ಮಾಡಿದ್ದಾರೆಎಂದರು.
ಕೆ.ಬಿ.ಜೆ.ಎನ್.ಎಲ್ ವತಿಯಿಂದ ಟೆಂಡರ್ ಪ್ರಕ್ರಿಯೆ ಮುಗಿದು, ಕಟ್ಟಡ ಕೆಲಸ ಆರಂಭವಾಗಿದೆ. ವಿಹಾರ ಹಿಂದಿನ ಸಭಾಭವನ ಕಟ್ಟಡದ ನೆಲಮಹಡಿ ಕಟ್ಟುವ ಕಾರ್ಯ ಈಗಾಗಲೇ ಮುಗಿದಿದೆ. ಕಟ್ಟಡದ ಎರಡನೇಯ ಅಂತಸ್ತು ಸೇರಿದಂತೆ, ವಿಹಾರ ಪೂರ್ಣಗೊಳ್ಳಲು ಇನ್ನೂ ₹ 1.50 ಕೋಟಿ ಹಣದ ಮಂಜೂರಾತಿ ಅಗತ್ಯವಾಗಿದೆ ಎಂದು ಹೇಳಿದರು.
ಕಟ್ಟಡದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನಜ್ಯೋತಿ ಗ್ರಂಥಾಲಯ, ಶಾಂತಿದೂತ ಉದ್ಯಾನ, ವಿಶಾಲ ಸಭಾಭವನ, ಸುಸಜ್ಜಿತ ಸಿಮೆಂಟ್ ರಸ್ತೆ, ಆವರಣ ಗೋಡೆಗಳು ನಿರ್ಮಾಣವಾಗಲಿವೆ. ಈ ಎಲ್ಲದರ ಕಾಮಗಾರಿ ಈ ವರ್ಷದ ಅಕ್ಟೋಬರ್ ಅಂತ್ಯದಲ್ಲಿ ಕೊನೆಗೊಳ್ಳಲಿವೆ. ನಂತರ ಕಡಕೋಳ ಬುದ್ಧವಿಹಾರ ಕಲಬುರ್ಗಿ ಬುದ್ಧವಿಹಾರದಂತೆ ಪ್ರವಾಸಿ ತಾಣವಾಗಲಿದೆ. ಯಾತ್ರಿಕರನ್ನು ಈ ತಾಣ ಸೆಳೆಯುವಲ್ಲಿ ಸಂದೇಹವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.