ನಾಲತವಾಡ: ಪಟ್ಟಣದಲ್ಲಿ ಕನ್ನಡ ಪ್ರೇಮ ಕಳೆದ ಒಂದು ಶತಮಾನದಿಂದ ಇಂದಿನವರೆಗೂ ಸದ್ದಿಲ್ಲದೇ ಮುಂದುವರಿದುಕೊಂಡು ಬರುತ್ತಿದೆ. ಎಪಿಎಂಸಿ ಅಡತಿ, ಕಪ್ಪಡ ,ಕಿರಾಣಿ ಅಂಗಡಿ ವ್ಯಾಪಾರಿಗಳು ತಮ್ಮ ವ್ಯಾಪಾರ ವ್ಯವಹಾರದ ವಹಿವಾಟನ್ನು ಅಚ್ಚ ಕನ್ನಡದಲ್ಲಿ ಬರೆಯುತ್ತಿರುವುದು ನೈಜ ಕನ್ನಡ ಪ್ರೇಮದ ಸಂಗತಿಯಾಗಿದೆ.
ನಾಲತವಾಡದ ಬಿ.ಎಂ.ಅಂಗಡಿ, ಎಂ.ಎಸ್.ಪಾಟೀಲ, ಬಿ.ಎಂ. ತಾಳಿಕೋಟಿ ವಕೀಲರು, ಎ.ಜಿ. ಗಂಗನಗೌಡ್ರ , ಶಿವಪ್ಪ ಮೇಗಲಮನಿ ಕಪ್ಪಡ, ಚಿನಿವಾರ, ಇರಸಂಗಪ್ಪ ಗಡೇದರ ಅವರು ಐದು ತಲೆಮಾರಿನಿಂದ ಬಂದ ಕಿರಾಣಿ ಅಂಗಡಿಗಳಲ್ಲಿ ನೂರಾರು ವರ್ಷಗಳಿಂದ ಅಂಕಿಗಳು ಸೇರಿದಂತೆ ಎಲ್ಲವನ್ನು ಕನ್ನಡ ಅಕ್ಷರಗಳಲ್ಲಿ ಬರೆಯುವುದು ಇಂದಿಗೂ ರೂಢಿಸಿಕೊಂಡು ಮುಂದುವರಿಸಿದ್ದಾರೆ.
ಇಂದಿನ ಇಂಗ್ಲಿಷ್ ಅಂಕಿಗಳ ಹಾಗೂ ಪದಗಳ ಬಳಕೆಯ ವ್ಯಾಮೋಹದ ಮಧ್ಯೆಯೂ ಅಚ್ಚ ಕನ್ನಡದ ಅಂಕಿ ಸಂಖ್ಯೆಗಳನ್ನು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಬಳಸುತ್ತಿದ್ದಾರೆ. ಇಲ್ಲಿಗೆ ಸಮೀಪದ ಆಲೂರು ಗ್ರಾಮದ ಹಿರೇಗೌಡರ ಮನೆತನ 1964ರಲ್ಲಿ ಚಿಕ್ಕದಾದ ಕಿರಾಣಿ ಅಂಗಡಿ ಪ್ರಾರಂಭ ಮಾಡಿ ಅಂದಿನಿಂದ ಇಂದಿನವರೆಗೆ ಅದೇ ವ್ಯವಹಾರ ಮುಂದುವರಿಸಿಕೊಂಡು ಬರಲಾಗಿದೆ. ಕಿರಾಣಿ ಅಂಗಡಿಯ ಎಲ್ಲ ಲೆಕ್ಕಪತ್ರಗಳು ವ್ಯವಹಾರಗಳ ಚಟುವಟಿಕೆಗಳನ್ನು ಹಾಗೂ ಬರೆಯಲ್ಪಡುವ ಎಲ್ಲಾ ಅಂಕಿ ಸಂಖ್ಯೆಗಳನ್ನು ಕನ್ನಡದಲ್ಲಿ ಬಳಸುವ ಮೂಲಕ ಎಲ್ಲವನ್ನು ಕನ್ನಡಮಯವಾಗಿ ನಿರ್ವಹಿಸುತ್ತಿದ್ದಾರೆ.
ಇಂಗ್ಲಿಷ್ ಬರಹದ ಹಾಗೂ ಅಂಕಿ ಸಂಖ್ಯೆಗಳ ಮೋಹಕ್ಕೆ ಹೋಗದೆ ಕನ್ನಡ ನಾಡಿನ ಗ್ರಾಮೀಣ ಸೊಗಡಿನ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಬಸವಾದಿ ಶರಣರ ವಚನಗಳ ಹಾದಿಯಲ್ಲಿ ತಮ್ಮ ದೈನಂದಿನ ವ್ಯವಹಾರಗಳನ್ನು ಕನ್ನಡದಲ್ಲಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಲಿಂ.ದೊಡ್ಡಬಸಪ್ಪಗೌಡ ಹಿರೇಗೌಡರು ಇದೇ ರೀತಿಯಲ್ಲಿ ಆರ್ಥಿಕ ವಹಿವಾಟುಗಳನ್ನು ದಾಖಲಿಸಲು ಮತ್ತು ಒಟ್ಟು ಮಾಡಲು ಇರುವ ಪ್ರಧಾನ ಪುಸ್ತಕ ಅಥವಾ ಗಣಕ ಕಡತವನ್ನು ನಿರ್ವಹಣೆ ಮಾಡುವ ವಿಧಾನವನ್ನು ಅಚ್ಚುಕಟ್ಟಾಗಿ ಬರೆದಿದ್ದಾರೆ. ಇದರಲ್ಲಿ ಖರ್ಚುಗಳು ಹಾಗೂ ಜಮಾಗಳು ಪ್ರತ್ಯೇಕವಾಗಿವೆ.ಇವರಂತೆಯೇ ಅವರ ಮಗ ಮೊಮ್ಮಗ ಖಾತೆ ಕಿರ್ದಿ ಬರೆಯುತ್ತಿದ್ದಾರೆ.ಇದು ಈ ಕುಟುಂಬದ ಹೆಗ್ಗಳಿಕೆ ಐದು ದಶಕಗಳಿಂದ ವ್ಯವಹಾರಗಳಲ್ಲಿ ಉಪಯೋಗಿಸುವ ‘ರೋಜ್ ಖಾತೆ ಕೀರ್ದಿ ರೊಕಡಿ ವ್ಯಾಪಾರ ಉದ್ರಿ ವ್ಯಾಪಾರ‘ ಹೀಗೆ ಹಲವಾರು ಪುಸ್ತಕಗಳಲ್ಲಿ ಸಂಪೂರ್ಣವಾಗಿ ಕನ್ನಡ ಅಂಕಿ ಸಂಖ್ಯೆಗಳನ್ನು ಬರೆದು ನಿರ್ವಹಿಸುತ್ತಿದ್ದವರು ದೊಡ್ಡಬಸಪ್ಪಗೌಡ ಹಿರೇಗೌಡ್ರು.
ವ್ಯಾಪಾರ ವಹಿವಾಟುಗಳಲ್ಲಿ ಕನ್ನಡ ಅಕ್ಷರ ಮತ್ತು ಅಂಕಿ ಸಂಖ್ಯೆಗಳನ್ನು ಬಳಸುತ್ತಿದ್ದ ಇವರು, ಎಲ್ಲಿಯೂ ಇಂಗ್ಲಿಷ್ ಅಕ್ಷರಕ್ಕೆ ಇಂಗ್ಲಿಷ್ ಭಾಷೆಗೆ ಮಾರುಹೋಗಿಲ್ಲ. ಎಲ್ಲಿಯೂ ಕೂಡ ಅಪ್ಪಿ ತಪ್ಪಿಯೂ ಇಂಗ್ಲಿಷ್ ಅಕ್ಷರಗಳನ್ನು ಬಳಸಿದ ಉದಾಹರಣೆಯೂ ಇಲ್ಲ. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಅವರ ಮೊಮ್ಮಗ ಯುವ ಪ್ರಶಸ್ತಿ ಪುರಸ್ಕೃತ ಶಿವಕುಮಾರ್ ಗೌಡ ಹಿರೇಗೌಡರ್ ಅವರು ವ್ಯಾಪಾರ ವಹಿವಾಟುಗಳನ್ನೆಲ್ಲವನ್ನು ಕನ್ನಡದಲ್ಲಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ದೊಡ್ಡಬಸಪ್ಪಗೌಡ್ರು ಹಿರೇಗೌಡ್ರ ಪ್ರಸ್ತುತ ದಿನಮಾನಗಳಲ್ಲಿ ಅವರ ಕನ್ನಡ ಪ್ರೇಮದ ದೀಕ್ಷೆ ಅಗತ್ಯವಿದೆ. ವ್ಯವಹಾರದ ಎಲ್ಲಾ ಚಟುವಟಿಕೆಗಳನ್ನು ಕನ್ನಡದಲ್ಲಿ ಮಾಡುತ್ತಿದ್ದ ಏಕೈಕ ವ್ಯಕ್ತಿ ಅವರು. ಅಂತಹ ಕನ್ನಡ ಆರಾಧಕ ನಮ್ಮೊಂದಿಗಿದ್ದರು ಎನ್ನುವುದೇ ಹೆಮ್ಮೆಜಿ.ಎಚ್.ಪಾಟೀಲ ವಿಶ್ರಾಂತ ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಕ್ಕಸಗಿ
ತಮ್ಮ ಎಲ್ಲ ವ್ಯವಹಾರದ ಚಟುವಟಿಕೆಗಳನ್ನು ಕನ್ನಡದಲ್ಲಿ ಬರೆಯುವ ಮೂಲಕ ತಮ್ಮ ಕುಟುಂಬದ ಇನ್ನಿತರ ಸದಸ್ಯರಿಗೆ ಮೇಲ್ಪಂತಿಹಾಕಿ ಹೋಗಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆಎ.ಎಂ.ಗೂಳಿ ವಿಶ್ರಾಂತ ಶಿಕ್ಷಕರು ಆಲೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.