ADVERTISEMENT

ವಿಜಯ‍ಪುರ |ಯತ್ನಾಳ ವರ್ಸಸ್‌ ಮುಶ್ರೀಫ್‌; ಗೆಲುವು ಯಾರಿಗೆ?

ವಿಜಯಪುರ ನಗರ ವಿಧಾನಸಭಾ ಕ್ಷೇತ್ರ; ಅಭಿವೃದ್ಧಿ, ಸೌಹಾರ್ದತೆ ಮುನ್ನೆಲೆಗೆ

ಬಸವರಾಜ ಸಂಪಳ್ಳಿ
Published 1 ಮೇ 2023, 4:58 IST
Last Updated 1 ಮೇ 2023, 4:58 IST
   

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್‌ ಹಮೀದ್‌ ಮುಶ್ರೀಫ್‌ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ.

ರಾಹುಲ್‌ ಗಾಂಧಿ ಕಾಂಗ್ರೆಸ್‌ ಪರವಾಗಿ ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ಪರವಾಗಿ ಪ್ರಧಾನಿ ಮೋದಿ ಅವರು ಸಮಾವೇಶ ಮಾಡಿ ಚುನಾವಣಾ ಖಣವನ್ನು ಹದಗೊಳಿಸಿಹೋಗಿದ್ದಾರೆ. ಮತದಾರ ಯಾರಿಗೆ ಒಲಿಯಲಿದ್ದಾನೆ ಎಂಬ ಲೆಕ್ಕಾಚಾರ ಜೋರಾಗಿದೆ. 

‘ಧೂಳಾಪುರ’ವಾಗಿದ್ದ ವಿಜಯಪುರವನ್ನು ಸ್ಮಾರ್ಟ್‌ ಸಿಟಿಯಂತೆ ಮಾಡಿದ್ದೇನೆ. ನಗರ ಹಿಂದೆಂದೂ ಕಂಡರಿಯದ ರೀತಿ ಅಭಿವೃದ್ಧಿಯಾಗಿದೆ. ನನ್ನ ಅವಧಿಯಲ್ಲಿ ನಗರದ ಎಲ್ಲ ಧರ್ಮದ ಜನತೆ ಶಾಂತಿ, ಸುರಕ್ಷಿತವಾಗಿದ್ದಾರೆ. ಪೊಲೀಸರ ಕಿರುಕುಳ ಇಲ್ಲ, ಮಟ್ನಾ, ಜೂಜಾಟಕ್ಕೆ ಬ್ರೇಕ್‌ ಬಿದ್ದಿದೆ, ಒಂದೇ ಒಂದು ಕೋಮು ಸಂಘರ್ಷ ಇಲ್ಲ’ ಎಂಬ ಹೇಳಿಕೆ ನೀಡುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮತದಾರರನ್ನು ಸೆಳೆಯುವ ಕಾಯಕದಲ್ಲಿ ತೊಡಗಿದ್ದಾರೆ.

ADVERTISEMENT

‘ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಚುನಾವಣೆಗಾಗಿ ಒಂದಷ್ಟು ರಸ್ತೆ ಮಾಡಲಾಗಿದೆ. ಅವು ಗುಣಮಟ್ಟದಿಂದ ಇಲ್ಲ, ಹಿಂದು–ಮುಸ್ಲಿಮರ ನಡುವೆ ಭೇದ–ಭಾವ ಮಾಡಲಾಗುತ್ತಿದೆ‘ ಎಂದು ಕಾಂಗ್ರೆಸ್ ಅಭ್ಯರ್ಥಿ ಮುಶ್ರೀಫ್‌ ಪ್ರತಿದಾಳಿ ನಡೆಸಿದ್ದಾರೆ.

ಬಿಜೆಪಿ ಭಿನ್ನಮತ:
ಬಿಜೆಪಿ ಪಕ್ಷದೊಳಗಿನ ಮುಖಂಡರ ಅಸಮಾಧಾನ, ಭಿನ್ನಮತ ಯತ್ನಾಳ ಅವರ ಗೆಲುವಿನ ಓಟಕ್ಕೆ ಅಡತಡೆಯಾಗುವುದೇ ಎಂಬುದನ್ನು ಕಾದುನೋಡಬೇಕಿದೆ. ಬಿಜೆಪಿ ಟಿಕೆಟ್‌ ಸಿಗದೇ ಅಸಮಾಧಾನಗೊಂಡಿರುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ, ಸಚಿವ ಮುರುಗೇಶ ನಿರಾಣಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಚುನಾವಣೆಯಲ್ಲಿ ಯಾವ ಪಾತ್ರ ವಹಿಸುತ್ತಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಈ ಹಿಂದೆ ಯತ್ನಾಳ ಅವರೇ ಇವರೆಲ್ಲರೂ ನನ್ನ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಯತ್ನಾಳ ಅವರನ್ನು ‘ಬಿಜೆಪಿ ಸ್ಟಾರ್‌ ಪ್ರಚಾರಕ’ರನ್ನಾಗಿ ರಾಜ್ಯದ ವಿವಿಧೆಡೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಕಳುಹಿಸುವ ಮೂಲಕ ಅವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗದಂತೆ ತಡೆಯುವ ಪ್ರಯತ್ನವೂ ನಡೆದಿದೆ ಎನ್ನಲಾಗುತ್ತಿದೆ.
ಬಣಜಿಗ, ಮುಸ್ಲಿಂ ವಿರುದ್ಧ:
ಬಣಜಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬುದು ಆ ಸಮುದಾಯವನ್ನು ಕೆರಳಿಸಿದೆ. ಈ ಸಂಬಂಧ ಬಣಜಿಗ ಸಮಾಜದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ‘ಯತ್ನಾಳ ಅವರಿಗೆ ವೋಟ್‌ ಹಾಕುವುದಿಲ್ಲ’ ಎಂದು ಘೋಷಿಸಿರುವುದು ಚುನಾವಣೆಯಲ್ಲಿ ಯತ್ನಾಳರಿಗೆ ಬಣಜಿಗರು ‘ಲೆಕ್ಕ ಚುಕ್ತಾ’ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇನ್ನೊಂದೆಡೆ ಒಳಮೀಸಲಾತಿ ಜಾರಿಯಿಂದ ಕುಪಿತವಾಗಿರುವ ಬಂಜಾರ ಸಮಾಜವು ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವುದು ಸಹಜವಾಗಿ ಯತ್ನಾಳ ಅವರಿಗೆ ತಮ್ಮದಲ್ಲದ ತಪ್ಪಿಗೆ ‘ಏಟು’ ತಿನ್ನುವಂತಾಗಿದೆ. ಜೊತೆ, ಜೊತೆಗೆ ‘ಮುಸ್ಲಿಂ ಮತಗಳು ಬೇಡ’ ಎಂಬ ತಮ್ಮ ಹಿಂದಿನ ಘೋಷಣೆಗೆ ಬದ್ಧವಾಗಿರುವುದಾಗಿ ಹೇಳುತ್ತಿರುವ ಯತ್ನಾಳ ಈ ಮೂಲಕ ಪಕ್ಷಾತೀತವಾಗಿ ಹಿಂದುಗಳ ಮತಗಳನ್ನು ಕ್ರೂಡೀಕರಿಸಲು ಯತ್ನಿಸಿದ್ದಾರೆ. ಮುಸ್ಲಿಮರ ವಿರುದ್ಧ ಆಗಾಗ ಹರಿಹಾಯುತ್ತಿದ್ದರೂ ನಗರದ ಒಂದಷ್ಟು ಮುಸ್ಲಿಮರು ಯತ್ನಾಳ ಪರವಾಗಿ ಇದ್ದರು. ಆದರೆ, ರಾಜ್ಯ ಸರ್ಕಾರ ಇತ್ತೀಚೆಗೆ ಮುಸ್ಲಿಂ ಮೀಸಲಾತಿ ಕಿತ್ತುಕೊಂಡಿರುವುದರಿಂದ ಆ ಸಮುದಾಯದ ವೋಟುಗಳು ಯತ್ನಾಳರಿಗೆ ಮರೀಚಿಕೆಯೇ ಸರಿ.

ಕಾಂಗ್ರೆಸ್‌ನಲ್ಲೂ ಭಿನ್ನಮತ:

ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್‌ ಹಮೀದ್‌ ಮುಶ್ರೀಫ್‌ ವಿರುದ್ಧವೂ ಪಕ್ಷ ಮತ್ತು ಮುಸ್ಲಿಂ ಸಮಾಜದಲ್ಲಿ ಒಂದಷ್ಟು ಜನ ಅಸಮಾದಾನಿತರು, ಭಿನ್ನಮತಿಯರು ಇದ್ದು, ಚುನಾವಣೆಯಲ್ಲಿ ಅಡ್ಡಗಾಲಾಗುವುದನ್ನು ನಿರಾಕರಿಸುವಂತಿಲ್ಲ. 

‘ಮುಶ್ರೀಫ್‌ ಅವರು ರೌಡಿ, ಗೂಂಡಾಗಳನ್ನು ಪೋಷಿಸುತ್ತಾರೆ, ನಗರದ ಶಾಂತಿ ಸುವ್ಯವಸ್ಥೆಗೆ ಅವರಿಂದ ಭಂಗವಾಗಲಿದೆ’ ಎಂದು ಬಿಜೆಪಿ ಅಭ್ಯರ್ಥಿ ಯತ್ನಾಳ ಅವರೇ ನೇರವಾಗಿ ಆರೋಪ ಮಾಡಿದ್ದಾರೆ.

‘ಮುಸ್ಲಿಂ ಸಮಾಜಕ್ಕೆ ನನ್ನಿಂದ ಯಾವುದೇ ತೊಂದರೆ ಆಗಿಲ್ಲ, ಕಾಂಗ್ರೆಸ್‌ ಅಭ್ಯರ್ಥಿಯಿಂದಲೇ ಆ ಸಮಾಜದವರಿಗೆ ತೊಂದರೆಯಾಗಿದೆ. ನಾನು ಯಾರ ಆಸ್ತಿಯನ್ನು ಕಿತ್ತುಕೊಂಡಿಲ್ಲ’ ಎಂದು ಪರೋಕ್ಷವಾಗಿ ಮುಶ್ರೀಫ್‌ ವಿರುದ್ಧ ದೂರಿದ್ದಾರೆ. ಇದು ಸಹಜವಾಗಿ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

ಇದುವರೆಗೂ ಮುನಿಸಿಕೊಂಡಿದ್ದ ಮಾಜಿ ಶಾಸಕ ಡಾ. ಮಕ್ಬುಲ್‌ ಭಾಗವಾನ್‌ ಇದೀಗ ಮುಶ್ರೀಫ್‌ ಜೊತೆ ಕೈಜೋಡಿಸಿದ್ದಾರೆ. ಜೊತೆಗೆ ಜೆಡಿಎಸ್‌ ಅಭ್ಯರ್ಥಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿ, ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಶ್ರೀಫ್‌ ಕೂಡ ಹಿಂದೂಗಳ ವೋಟುಗಳನ್ನು ಸೆಳೆಯಲು ತಂತ್ರ ರೂಪಿಸಿದ್ದು, ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.

‘ನನ್ನ ವಿರುದ್ಧ ಆರೋಪ ಮಾಡುವ ಶಾಸಕರು ಇದುವರೆಗೂ ಯಾಕೆ ಕ್ರಮಕೈಗೊಂಡಿಲ್ಲ’ ಎಂದು ಮುಶ್ರೀಫ್‌ ಕೂಡ ಯತ್ನಾಳ ಅವರಿಗೆ ಸವಾಲು ಹಾಕಿದ್ದಾರೆ. 

ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಗುಮ್ಮಟನಗರಿಯ ಚುನಾವಣಾ ಅಖಾಡದಲ್ಲಿ ಮತದಾರ ಯಾರಿಗೆ ವಿಜಯದ ಮಾಲೆ ತೊಡಿಸುತ್ತಾರೆ ಎಂಬುದು ಮೇ 13ರ ರಂದು ತಿಳಿಯಲಿದೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಮತದಾರರು

ಪುರುಷರು- 131459

ಮಹಿಳೆಯರು- 133161

ಇತರೆ- 94 

ಒಟ್ಟು ಮತದಾರರು- 264714 

ತಿರುಗಿ ಬಿದ್ದಿರುವ ಎಂ.ಬಿ.ಪಾಟೀಲ!  ‘ಬಸನಗೌಡ ಪಾಟೀಲ ಯತ್ನಾಳ ಮತ್ತು ಎಂ.ಬಿ. ಪಾಟೀಲ ನಡುವೆ ರಾಜಕೀಯ ಹೊರತಾಗಿ ಉತ್ತಮ ಗೆಳತನ ಬಾಂಧವ್ಯ ಇದೆ. ಹೀಗಾಗಿ ಚುನಾವಣೆಯಲ್ಲಿ ಪರಸ್ಪರ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ’ ಎಂಬ ಆರೋಪಗಳು ಜಿಲ್ಲೆಯಲ್ಲಿ ಜನಜನಿತ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರ ನಡುವೆ ಸಾಕಷ್ಟು ಸ್ನೇಹ ಸಂಬಂಧ ಇರುವುದು ಗುಟ್ಟೇನಲ್ಲ. ಆದರೆ ರಾಜಕೀಯವೇ ಬೇರೆ ವೈಯಕ್ತಿಕ ಸಂಬಂಧವೇ ಬೇರೆ ಎಂಬಂತೆ ಇಬ್ಬರೂ ನಾಯಕರು ಇತ್ತೀಚಿನ ದಿನಗಳಲ್ಲಿ ಪರಸ್ಪರರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ!

ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರು ಯತ್ನಾಳ ವಿರುದ್ಧ ತೊಡೆ ತಟ್ಟಿದ್ದಾರೆ. ಮುಶ್ರೀಫ್‌ ಪರವಾಗಿ ಕ್ಷೇತ್ರದ ಪ್ರಮುಖ ವಾರ್ಡ್‌ಗಳಲ್ಲಿ ಸಭೆ ನಡೆಸಿ ಮತಯಾಚನೆ ಮಾಡಿದ್ದಾರೆ. ಮುಶ್ರೀಫ್‌ ಅವರನ್ನು ಗೆಲ್ಲಿಸಿಕೊಂಡು ಬರುವುದು ಎಂ.ಬಿ.ಪಾಟೀಲರ ಭವಿಷ್ಯದ ರಾಜಕೀಯದ ದೃಷ್ಟಿಯಿಂದಲೂ ಅನಿವಾರ್ಯವಾಗಿದೆ.  ಜೊತೆಗೆ ವಿಜಯಪುರ ನಗರದ ಮೇಲೆ ಸಾಕಷ್ಟು ಹಿಡಿತ ಇರುವ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರೂ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದು ಪರಿಣಾಮ ಬೀರತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.