ADVERTISEMENT

ಕಾಂಗ್ರೆಸ್‌ನಿಂದ ಶಿಕ್ಷಣದ ಕೆಂಪೀಕರಣ: ವಿಪ ಮಾಜಿ ಸದಸ್ಯ ಅರುಣ ಶಹಾಪುರ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2023, 13:24 IST
Last Updated 22 ನವೆಂಬರ್ 2023, 13:24 IST
<div class="paragraphs"><p>ಅರುಣ ಶಹಾಪುರ, ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮಾಧ್ಯಮ ವಕ್ತಾರ ವಿಜಯ್‌ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p></div>

ಅರುಣ ಶಹಾಪುರ, ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮಾಧ್ಯಮ ವಕ್ತಾರ ವಿಜಯ್‌ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

   

ವಿಜಯಪುರ: ರಾಜ್ಯ ಸರ್ಕಾರ ನೂತನ ಶಿಕ್ಷಣ ನೀತಿ ರೂಪಿಸುವ ಸಂಬಂಧ ರಚಿಸಿರುವ ಸಮಿತಿಯಲ್ಲಿ ಶಿಕ್ಷಣ ತಜ್ಞರಾಗಿರುವುದಕ್ಕಿಂತ ಹೆಚ್ಚಾಗಿ ಎಡಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುವವರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಶಿಕ್ಷಣವನ್ನು ಕೆಂಪೀಕರಣ ಮಾಡಲು ಕಾಂಗ್ರೆಸ್‌ ಸರ್ಕಾರ  ಹುನ್ನಾರ ನಡೆಸಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಆಪಾದಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ದಿಕ್ಕರಿಸಿ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಜಾರಿಗೊಳಿಸುತ್ತೇವೆ ಎಂದಿದ್ದರು. ಆದರೆ,  ಇದೀಗ ಶಿಕ್ಷಣ ಸಚಿವರು ರಾಷ್ಟ್ರೀಯ ಶಿಕ್ಷಣ ನೀತಿಯ ಉತ್ತಮ ಅಂಶಗಳನ್ನು ಒಳಗೊಂಡಂತೆ ನಮ್ಮದೇ ಆದ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುತ್ತೇವೆ ಎಂದು ಹೇಳಿರುವುದು ಸ್ವಾಗತಾರ್ಹ ಎಂದರು.

ADVERTISEMENT

ರಾಜ್ಯ ಶಿಕ್ಷಣ ನೀತಿ ರೂಪಿಸುವ ಸಂಬಂಧ ಸರ್ಕಾರ ರಚಿಸಿರುವ ಸಮಿತಿಯಲ್ಲಿ ಕರ್ನಾಟಕದವರಿಗೆ ಹೆಚ್ಚಿನ ಆದ್ಯತೆ ಸಿಕ್ಕಲ್ಲ, ಕರ್ನಾಟಕೇತರರಿಗೆ ಸಮಿತಿಯ ನೇತೃತ್ವ ವಹಿಸಿಸಲಾಗಿದೆ. ಅರ್ಧಕ್ಕಿಂತ ಹೆಚ್ಚು ಜನ ಅನ್ಯ ರಾಜ್ಯದವರಿದ್ದಾರೆ.  ಸರ್ಕಾರಿ, ಖಾಸಗಿ ವಲಯ, ಎಲ್ಲ ವಿಚಾರಗಳನ್ನು ಒಳಗೊಂಡವರನ್ನು ನೇಮಿಸುತ್ತಾರೆ ಎಂಬ ನಂಬಿಕೆ ಹುಸಿಯಾಗಿದೆ, ಸಮಿತಿ ರಚನೆಯಲ್ಲಿ ಸಮಗ್ರತೆ ಇಲ್ಲ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದವರಲ್ಲೇ ಕರ್ನಾಟಕದವರೇ ಆದ ಡಾ.ಕಸ್ತೂರಿ ರಂಗನ್‌, ತೇಜಸ್ವಿ ಕಟ್ಟಿಮನಿ, ಡಾ. ಎಂ.ಕೆ.ಶ್ರೀಧರ್‌, ಡಾ.ಅನುರಾಗ್‌ ಬೆಹಾರ್‌ ಪ್ರಮುಖ ಪಾತ್ರ ವಹಿಸಿದ್ದರು. ಇಂತವರಿಗೆ ರಾಜ್ಯ ಶಿಕ್ಷಣ ನೀತಿ ನಿರೂಪಣೆಯಲ್ಲಿ ಅವಕಾಶ ನೀಡದೇ ಇರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಮಿತಿ ರಚನೆ ಹಂತದಲ್ಲೇ ಸರ್ಕಾರ ಎಡವಿದೆ. ರಾಜ್ಯ ಶಿಕ್ಷಣ ನೀತಿಯನ್ನು ಯಾರೋ ಒಂದಷ್ಟು ಸಮಿತಿ  ಸದಸ್ಯರು ಕೂತು ಮಾಡಬೇಕಾದ ಕೆಲಸವಲ್ಲ. ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿರುವ ಎಲ್ಲ ವಲಯದ ತಜ್ಞರೊಂದಿಗೆ ಚರ್ಚೆ ಮಾಡಬೇಕು, ಅವರ ಅನುಭವ, ಸಲಹೆಯನ್ನು ಪಡೆಯಬೇಕು ಎಂದರು.

ರಾಜ್ಯ ಶಿಕ್ಷಣ ನೀತಿ ರಚನಾ ಸಮಿತಿ ಅಧ್ಯಕ್ಷರು ಮುಂದಿನ ಆರು ತಿಂಗಳಲ್ಲಿ ವರದಿ ಕೊಡುತ್ತೇನೆ ಎಂದಿರುವುದು ಅನುಮಾನಕ್ಕೆ ಎಡೆಮಾಡಿದೆ. ಲೋಕಸಭಾ ಚುನಾವಣೆಗೆ ಮುನ್ನಾ ಕೊಡುತ್ತೇನೆ ಎಂಬ ತರಾತುರಿ ಬೇಡ, ಈಗಾಗಲೇ ತಾವು ನಿರ್ಧರಿಸಿರುವ ಅಜೆಂಡಾವನ್ನು ಶಿಕ್ಷಣ ನೀತಿಯಲ್ಲಿ ತುರುಕುವುದು ಬೇಡ ಎಂದು ಹೇಳಿದರು.

ಅಭಿಯಾನಕ್ಕೆ ಬೆಂಬಲ

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಒಂದು ಕೋಟಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಬಿಜೆಪಿ ನೂತನ ರಾಜ್ಯ ಘಟಕದ ಅಧ್ಯಕ್ಷರು, ವಿಧಾನಸಭೆ ವಿರೋಧ ಪಕ್ಷದ ನಾಯಕರು ಬೆಂಬಲಿಸಿದ್ದಾರೆ. ಪ್ರಜ್ಞಾವಂತ ನಾಡಿನ ಜನರು ಸಹ ಈ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮಾಧ್ಯಮ ವಕ್ತಾರ ವಿಜಯ್‌ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.