ADVERTISEMENT

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸ್ಥಗಿತ: ಆಲಮಟ್ಟಿ ಜಲಾಶಯ ಒಳಹರಿವು ಕ್ಷೀಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 5:32 IST
Last Updated 9 ನವೆಂಬರ್ 2024, 5:32 IST
ಆಲಮಟ್ಟಿ ಜಲಾಶಯ (ಸಂಗ್ರಹ ಚಿತ್ರ)
ಆಲಮಟ್ಟಿ ಜಲಾಶಯ (ಸಂಗ್ರಹ ಚಿತ್ರ)   

ಆಲಮಟ್ಟಿ: ಪ್ರಸಕ್ತ ಸಾಲಿನಲ್ಲಿ ಜೂನ್ 7 ರಿಂದ ಆರಂಭಗೊಂಡ ಆಲಮಟ್ಟಿ ಜಲಾಶಯದ ಒಳಹರಿವು ಈಗ ಕ್ರಮೇಣ ಕಡಿಮೆಯಾಗುತ್ತ ಸಾಗಿದ್ದು, ಕಾಲುವೆಗಳ ಜಾಲಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಬಹುತೇಕ ಸ್ಥಗಿತಗೊಂಡಿದ್ದು, ಮಂಗಳವಾರ ಜಲಾಶಯದ ಒಳಹರಿವು 6,853 ಕ್ಯುಸೆಕ್ ಇತ್ತು.

ಜಲಾಶಯದ ಹಿನ್ನೀರಿನ ಹಿಪ್ಪರಗಿ ಜಲಾಶಯದಿಂದ 5000 ಕ್ಯುಸೆಕ್ ಹೊರ ಹರಿವಿದ್ದು, ಅವರು ಜಲಾಶಯದ ಗೇಟ್‌ಗಳನ್ನು ಹಾಕಿಕೊಂಡರೇ ಆಲಮಟ್ಟಿ ಜಲಾಶಯದ ಒಳಹರಿವು ಬಹುತೇಕ ಸ್ಥಗಿತಗೊಳ್ಳಲಿದೆ. ಇನ್ನೂ ಒಂದು ವಾರಗಳ ಕಾಲ ಜಲಾಶಯದ ಒಳಹರಿವು 5000 ಕ್ಯುಸೆಕ್‌ ಆಸುಪಾಸು ಇರಲಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿ ತಿಳಿಸಿದರು.

120 ದಿನಗಳ ಕಾಲ ನಿರಂತರ ನೀರು: ‘ಈ ವರ್ಷ ಮುಂಗಾರು ಹಂಗಾಮಿಗೆ ಕಾಲುವೆಗಳಿಗೆ ಜುಲೈ 17 ರಿಂದ ವಾರಾಬಂಧಿ ಇಲ್ಲದೇ ನಿರಂತರ ನೀರು ಹರಿಸಲಾಗಿದೆ. ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ) ನಿರ್ಣಯಿಸಿದಂತೆ ನ.13ರ ವರೆಗೂ ನೀರು ಹರಿಸಲಾಗುತ್ತದೆ’ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ವಿ.ಆರ್. ಹಿರೇಗೌಡರ ತಿಳಿಸಿದರು.

ADVERTISEMENT

‘ಒಟ್ಟಾರೆ 120 ದಿನಗಳ ಕಾಲ ನಿರಂತರ ನೀರು ಕಾಲುವೆಗಳಿಗೆ ಹರಿಸಲಾಗಿದೆ. ನ.14 ರಿಂದ ನ. 23ರ ವರೆಗೆ 10 ದಿನಗಳ ಕಾಲ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ಕಾಲುವೆಯ ನಿರ್ವಹಣೆಯ ಕಾರ್ಯ ನಡೆಸಲಾಗುತ್ತದೆ. ಇದೇ ಅವಧಿಯಲ್ಲಿಯೇ ಹಿಂಗಾರು ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಯುವ ಸಾಧ್ಯತೆಯಿದ್ದು, ಸಭೆಯಲ್ಲಿ ನಿರ್ಧರಿಸಿದಂತೆ ಹಿಂಗಾರು ಹಂಗಾಮಿಗೆ ನೀರು ಹರಿಸಲಾಗುತ್ತದೆ’ ಎಂದು ತಿಳಿಸಿದರು.

ಹಿಂಗಾರಿಗೂ ವಾರಾಬಂಧಿ ಪ್ರಕಾರ ನೀರು?: 120 ದಿನಗಳ ಕಾಲ ಕಾಲುವೆಗಾಗಿ ನಿತ್ಯ ಅಂದಾಜು 1.1 ಟಿಎಂಸಿ ಅಡಿ ನೀರು ಹರಿಸಿದರೂ, ಜಲಾಶಯಕ್ಕೆ ನಿರಂತರ ಒಳಹರಿವು ಬಂದ ಕಾರಣ ಆಲಮಟ್ಟಿ ಜಲಾಶಯ ಇನ್ನೂ ಸಂಪೂರ್ಣ ಭರ್ತಿಯಿದೆ. ಹೀಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸಲು ಯಾವುದೇ ತೊಂದರೆಯಾಗುವುದಿಲ್ಲ.

ಹಿಂಗಾರು ಹಂಗಾಮಿಗೆ 120 ದಿನಗಳ ಕಾಲ 14 ದಿನ ಚಾಲು ಹಾಗೂ 10 ದಿನ ಬಂದ್ ಅವಧಿಯ ವಾರಾಬಂಧಿ ಅಳವಡಿಸಿ ಡಿಸೆಂಬರ್‌ನಿಂದ ನೀರು ಹರಿಸಲು ಆರಂಭಿಸಿದರೆ ಮಾರ್ಚ್ 31ರ ವರೆಗೂ ಕಾಲುವೆಗಳ ಜಾಲಕ್ಕೆ ನೀರು ಹರಿಸಬಹುದು.

ಅಂದರೆ 14 ದಿನ ಕಾಲುವೆಗೆ ನೀರು ಹರಿಸುವ ಅವಧಿಯ ಐದು ಬಾರಿ ಸೇರಿ 70 ದಿನ ಚಾಲು, 10 ದಿನ ಬಂದ್ ಅವಧಿಯ ಐದು ಬಾರಿ ಸೇರಿ 50 ದಿನ ಕಾಲುವೆಗೆ ನೀರು ಹರಿಸುವುದನ್ನು ಬಂದ್ ಮಾಡಿ ಒಟ್ಟಾರೆ 120 ದಿನಗಳ ಕಾಲ ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸುವ ಸಾಧ್ಯತೆಯಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.

ಈ ಬಾರಿ ಎಲ್ಲಿಯೂ ತೊಂದರೆಯಾಗದಂತೆ ಕಾಲುವೆಗಳ ಜಾಲಕ್ಕೆ ನೀರು ಹರಿಸಲಾಗಿದೆ ಶೀಘ್ರವೇ ಐಸಿಸಿ ಸಭೆ ನಡೆಯಲಿದ್ದು ಹಿಂಗಾರು ಹಂಗಾಮಿಗೆ ನೀರು ಹರಿಸುವ ಬಗ್ಗೆ ತೀರ್ಮಾನವಾಗಲಿದೆ
-ವಿ.ಆರ್. ಹಿರೇಗೌಡರ, ಸೂಪರಿಂಟೆಂಡಿಂಗ್ ಎಂಜಿನಿಯರ್ ಆಲಮಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.