ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಆಕರ್ಷಕ ಕಲಾಕೃತಿಗಳಿಂದ ಒಡಮೂಡಿರುವ ಶಿಲ್ಪೋದ್ಯಾನ ನೋಡುಗರ ಕಣ್ಮನ ಸೆಳೆಯುತ್ತವೆ.
ರಾಜ್ಯದ ವಿವಿಧೆಡೆಯಿಂದ ಉನ್ನತ ಶಿಕ್ಷಣ ಪಡೆಯಲು ಇಲ್ಲಿಗೆ ಆಗಮಿಸುವ ವಿದ್ಯಾರ್ಥಿನಿಯರಿಗೆ ಸ್ಪೂರ್ತಿದಾಯಕವಾಗುವಂತೆ ಈ ಶಿಲ್ಪೋದ್ಯಾನ ರೂಪುಗೊಂಡಿದೆ. ಅಲ್ಲದೇ, ಸುಂದರ ಕಲಾಕೃತಿಗಳು, ಪುತ್ಥಳಿಗಳು ವಿಶ್ವವಿದ್ಯಾಲಯದ ಅಂದ, ಚೆಂದವನ್ನು ಹೆಚ್ಚಿಸಿದೆ.
ಮಹಿಳಾ ಕೇಂದ್ರಿತ ಬುಡಕಟ್ಟು ಮತ್ತು ಗ್ರಾಮೀಣ ಸಂಸ್ಕೃತಿ, ಸಂಪ್ರದಾಯ ಒಳಗೊಂಡ ಮನೆಗಳ ಸಾಲು, ಮಹಿಳೆ ಹಂತ, ಹಂತವಾಗಿ ವಿಕಾಸಗೊಂಡು ಕಲಿಕಾ ಸಂಸ್ಕೃತಿಯತ್ತದ ಪಯಣದ ಹಾದಿ ಅನಾವರಣಗೊಂಡಿದೆ.
ಬುಡಕಟ್ಟಿ ಮತ್ತು ಗ್ರಾಮೀಣ ಮಹಿಳೆಯರ ಕಾಯಕ, ಕುಟುಂಬದ ವ್ಯವಸ್ಥೆ, ಪಶು ಸಂಗೋಪನೆ, ಆಹಾರ ತಯಾರಿಕೆ, ನೇಕಾರಿಕೆ, ಕಸೂತಿಯನ್ನು ಹೇಳುವ ಶಿಲ್ಪಗಳನ್ನು ಸ್ಥಾಪಿಸಲಾಗಿದೆ.
ಬಾಲಕಿಯರು ಶಾಲೆಗೆ ಹೋಗುವ ದೃಶ್ಯದಿಂದ ಆರಂಭಗೊಂಡು ಆನಂತರದಲ್ಲಿ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ, ವಿಜ್ಞಾನ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕಿಯರ ಆಕರ್ಷಕ ಕಲಾಕೃತಿಗಳು ನೋಡುಗರ ಮನಸೂರೆಗೊಳ್ಳುತ್ತವೆ.
ಶಿಲ್ಪೋದ್ಯಾನದಲ್ಲಿ ಪ್ರಧಾನವಾಗಿ ಶಿವಶರಣೆ ಅಕ್ಕಮಹಾದೇವಿಯ ಸುಂದರವಾದ ಬೃಹತ್ ಮೂರ್ತಿ ಇದೆ. ಜೊತೆಗೆ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಸಾವಿತ್ರಿಬಾಯಿ ಫುಲೆ, ಮದರ್ ತೆರೆಸಾ, ಹೇಮರೆಡ್ಡಿ ಮಲ್ಲಮ್ಮ, ಸಂಗೀತಗಾರ್ತಿ ಅಮೀರ್‌ಬಾಯಿ ಕರ್ನಾಟಕಿ, ಚಾಂದ್ ಬೀಬಿ, ನೋಬಲ್ ಪುರಸ್ಕೃತ ಮೇರಿ ಕ್ಯಾರಿ,ಕಲ್ಪನಾ ಚಾವ್ಲಾ, ಓಟಗಾರ್ತಿ ಪಿ.ಟಿ.ಉಷಾ,ಸಾನಿಯಾ ಮಿರ್ಜಾ ಸೇರಿದಂತೆ ಸಾಧನೆಯ ಹಾದಿಯಲ್ಲಿ ಉತ್ತುಂಗಕ್ಕೇರಿದ ದೇಶ, ವಿದೇಶದ ಸಾಧಕಿಯರ ಮೂರ್ತಿಯನ್ನು ಸ್ಥಾಪಿಸಿ ವಿದ್ಯಾರ್ಥಿನಿಯರಿಗೆ ಸ್ಪೂರ್ತಿ ತುಂಬಲಾಗಿದೆ.
ವಿಶ್ವವಿದ್ಯಾಲಯದ ಈ ಹಿಂದಿನ ಕುಲಪತಿಯಾಗಿದ್ದ ಸಬಿಹಾ ಭೂಮಿಗೌಡ ಅವರ ಕನಸಿನಂತೆ ಈ ಶಿಲ್ಪೋದ್ಯಾನ ಅರ್ಥಪೂರ್ಣವಾಗಿ ಮೈದಳೆದಿರುವುದು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ನಾಡಿಗೆ ಸ್ಪೂರ್ತಿ ನೀಡುವಂತಿದೆ. ಅಲ್ಲದೇ, ವಿಶ್ವವಿದ್ಯಾಲಯಕ್ಕೆ ಪ್ರವಾಸಿತಾಣದ ಮೆರಗು ನೀಡುವಂತಿದೆ.
***
ಶಿಲ್ಪೋದ್ಯಾನದ ಮೂಲಕ ನಾಡಿನ ಹೆಣ್ಣು ಮಕ್ಕಳಿಗೆ ಮಹಿಳಾ ಸಬಲೀಕರಣದ ನೋಟವನ್ನು ಮಾದರಿಯಾಗಿ ತೋರಿಸಲಾಗಿದೆ.
-ಪ್ರೊ.ಆರ್.ಸುನಂದಮ್ಮ,ಕುಲಸಚಿವೆ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾವಿಶ್ವವಿದ್ಯಾಲಯ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.