ವಿಜಯಪುರ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ಗುರುವಾರ(ನ.7) ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡುತ್ತಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ದಾಖಲಿಸಿದೆ.
‘ಸಚಿವೆ ಶೋಭಾ ಕರಂದ್ಲಾಜೆ ವಿನಂತಿ ಮೇರೆಗೆ ತರಾತುರಿಯಾಗಿ ಹುಬ್ಬಳ್ಳಿ, ವಿಜಯಪುರ ಪ್ರವಾಸ ಕೈಗೊಂಡಿರುವ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಪಾಲ್ ಅವರು ಕೇವಲ ಒಬ್ಬರೇ ಬರುತ್ತಿರುವುದು ಖಂಡನೀಯ. ಸಮಿತಿಯ ಎಲ್ಲ ಸದಸ್ಯರನ್ನು ತಮ್ಮ ಜೊತೆ ಪ್ರವಾಸಕ್ಕೆ ಕರೆತರಬೇಕಿತ್ತು’ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಮತ್ತು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
‘ಅಧ್ಯಕ್ಷರೊಬ್ಬರೇ ಬಂದು ಕೇವಲ ಬಿಜೆಪಿಯ ಧರಣಿನಿರತರನ್ನು ಭೇಟಿ ಮಾಡಿ ಹೋಗುವುದು ಸರಿಯಲ್ಲ. ಇದು ಏಕಮುಖವಾಗುತ್ತದೆ. ಇದು ಜಂಟಿ ಸಂಸದೀಯ ಸಮಿತಿಯ ಸದಸ್ಯರಿಗೆ ಮಾಡುತ್ತಿರುವ ಅವಮಾನ ಮತ್ತು ಕರ್ತವ್ಯ ಲೋಪ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಪಾಲ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲೇ ವಕ್ಫ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಅಹವಾಲುಗಳನ್ನು ಸಹ ಕೇಳಿ, ನಿಜ ಸಂಗತಿ ಏನೆಂಬುದನ್ನು ಅರಿಯಬೇಕು. ಜಿಲ್ಲಾಧಿಕಾರಿಯವರಿಂದಲೂ ವಿಷಯದ ಕುರಿತು ವರದಿ ಪಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.